ಬೆಂಗಳೂರು(ಫೆ.27): ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಕಳೆದ ಆಗಸ್ಟ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ, ಕೇಂದ್ರದ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ದೋಷರೋಪ ಪಟ್ಟಿ ಸಲ್ಲಿಸಿದೆ ಎಂದು ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ)ದ ಉಪಾಧ್ಯಕ್ಷ ಮಜೀದ್‌ ಖಾನ್‌ ಆರೋಪಿಸಿದ್ದಾರೆ.

ಎಸ್‌ಡಿಪಿಐಯನ್ನು ಗುರಿಯಾಗಿಸಿಕೊಂಡು ದೋಷರೋಪ ಪಟ್ಟಿಯನ್ನು ರಚಿಸಲಾಗಿದೆ. ಎನ್‌ಐಎಯ ತನಿಖಾಧಿಕಾರಿಗಳು ಈ ಪ್ರಕರಣದಲ್ಲಿ ಎಸ್‌ಡಿಪಿಐಯನ್ನು ಸಿಲುಕಿಸಲು ಪ್ರಯತ್ನಪಟ್ಟಿದ್ದಾರೆ. ರಾಜ್ಯ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ಸಂಘ ಪರಿವಾರದ ಒತ್ತಡದಿಂದ ಕೇಂದ್ರದ ಬಿಜೆಪಿ ಸರ್ಕಾರವು ಎನ್‌ಐಎಯನ್ನು ಕಳುಹಿಸಿತ್ತು. ಸರ್ಕಾರದ ನಿರ್ದೇಶನದಂತೆ ದೆಹಲಿಯಿಂದಲೇ ಎಸ್‌ಡಿಪಿಐ ವಿರುದ್ಧ ಎಫ್‌ಐಆರ್‌ ದಾಖಲಿಸಿ ಎನ್‌ಐಎ ತನಿಖೆ ಪ್ರಾರಂಭಿಸಿತ್ತು ಎಂದು ಮಜೀದ್‌ ಖಾನ್‌ ಆಪಾದಿಸಿದ್ದಾರೆ.

ಡಿಜೆ ಹಳ್ಳಿ ಪ್ರಕರಣ: NIA ವರದಿಯಲ್ಲಿ ಗಲಭೆ ಹಿಂದಿನ ಸಂಚು ಬಯಲು

ಎನ್‌ಐಎ ತನಿಖೆ ಗಮನಿಸಿದರೆ ಕೆಲವು ನಿಷ್ಪಕ್ಷ ತನಿಖಾಧಿಕಾರಿಗಳ ಮೇಲೆ ನಿರ್ದಿಷ್ಟ ಪಕ್ಷ ಮತ್ತು ಸಮುದಾಯವನ್ನು ತೇಜೋವಧೆ ಮಾಡುವ ರೀತಿಯಲ್ಲಿ ವರದಿ ಮಾಡುವಂತೆ ಒತ್ತಡ ಹೇರಿರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಎಸ್‌ಡಿಪಿಐ ನಿರಪರಾಧಿಗಳ ಪರ ಕಾನೂನಾತ್ಮಕ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನವೀನ್‌ ಮತ್ತು ಫೈರೋಝ್‌ ಧಾರ್ಮಿಕ ಭಾವನೆಗಳ ಬಗ್ಗೆ ಆರೋಪ-ಪ್ರತ್ಯಾರೋಪ ಹಾಕಿ ಕೊಂಡವರಾಗಿದ್ದಾರೆ. ಆದರೆ, ನವೀನ್‌ನ ಮೇಲೆ ದುರ್ಬಲ ಕೇಸ್‌ ಹಾಕಲಾಗಿದ್ದು, ಆತನಿಗೆ ಜಾಮೀನು ಸಿಕ್ಕಿದೆ. ಫೈರೋಜ್‌ ಮೇಲೆ ಯುಎಪಿಎ ಕೇಸ್‌ ಹಾಕಲಾಗಿದೆ. ಒಟ್ಟು ಹಿಂಸಾಚಾರದ ಮುಖ್ಯ ಕಾರಣ ಈ ಫೇಸ್ಬುಕ್‌ ಪೋಸ್ಟ್‌ ಎಂದು ತನಿಖಾಧಿಕಾರಿಗಳು ವರದಿ ಮಾಡಿದ್ದಾರೆ. ಆದರೆ ಇಲ್ಲಿ ಧರ್ಮಧಾರಿತ ತಾರತಮ್ಯ ನಡೆದಿರುವುದು ಕಾನೂನುಬಾಹಿರ ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್‌ ಕೊಡ್ಲಿಪೇಟೆ, ರಾಜ್ಯ ಮಾಧ್ಯಮ ಉಸ್ತುವಾರಿ ಅಕ್ರಂ ಹಸನ್‌, ಬೆಂಗಳೂರು ಜಿಲ್ಲಾಧ್ಯಕ್ಷ ಫಯಾಝ ಅಹಮದ್‌ ಮತ್ತಿತ್ತರರು ಉಪಸ್ಥಿತರಿದ್ದರು.