Asianet Suvarna News Asianet Suvarna News

ಕಾಂಗ್ರೆಸ್‌ನ ಸ್ಪೇನ್‌ ಘಟಕ ಅಧ್ಯಕ್ಷರಾಗಿ ಯಾದಗಿರಿ ವಿಜ್ಞಾನಿ ಸಂಕೀನ್‌ ನೇಮಕ

ಕನ್ನಡಿಗ, ಎಂಜನೀಯರ್‌ಗೆ ಸ್ಪೇನ್‌ನಲ್ಲಿ ಪ್ರತಿಷ್ಠಿತ ಹುದ್ದೆ| ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ನ ಸ್ಪೇನ್‌ ಅಧ್ಯಕ್ಷ ಪಟ್ಟಗಿಟ್ಟಿಸಿದ ಯುವ ವಿಜ್ಞಾನಿ| ಯಾದಗಿರಿಯ ಬಸವರಾಜ್‌ ಸಂಕೀನ್‌ಗೆ ವಿದೇಶದಲ್ಲಿ ಮಹತ್ತರ ಹುದ್ದೆ| ಸ್ಪೇನ್‌ ದೇಶದಲ್ಲಿ ನೆಲೆಸಿರುವ ಸಂಕೀನ್‌| ಖಾಸಗಿ ಕಂಪನಿಯಲ್ಲಿ ಬಾಹ್ಯಾಕಾಶ ಎಂಜಿನೀಯರ್‌|

Scientist Basavaraj Sankin Appointed As President of the Spain Unit of the Congress grg
Author
Bengaluru, First Published Apr 19, 2021, 10:24 AM IST

ಯಾದಗಿರಿ(ಏ.19): ಕಾಂಗ್ರೆಸ್‌ ತತ್ವ ಸಿದ್ಧಾಂತಗಳನ್ನು ಪ್ರಚುರಪಡಿಸಲು ಅನಿವಾಸಿ ಭಾರತೀಯರನ್ನು ಸೆಳೆಯಲು ಮುಂದಾಗಿರುವ ಕಾಂಗ್ರೆಸ್‌ ಪಕ್ಷ, ಜಗತ್ತಿನ ಸುಮಾರು 20-25 ದೇಶಗಳಲ್ಲಿ ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ ಕಮಿಟಿ ರಚಿಸಿದೆ. ಅದರಂತೆ, ಈಗ ಇದಕ್ಕೆ ಸ್ಪೇನ್‌ ದೇಶದ ಅಧ್ಯಕ್ಷರನ್ನಾಗಿ ಯಾದಗಿರಿಯ ಯುವ ವಿಜ್ಞಾನಿ, ಸದ್ಯ ಸ್ಪೇನ್‌ನ ಖಾಸಗಿ ಕಂಪನಿಯೊಂದರಲ್ಲಿ ಬಾಹ್ಯಾಕಾಶ ಎಂಜಿನೀಯರ್‌ ಆಗಿರುವ ಬಸವರಾಜ್‌ ಸಂಕೀನ್‌ ಅವರನ್ನು ನೇಮಿಸಲಾಗಿದೆ.

ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ ಸ್ಪೇನ್‌ ದೇಶದ ಅಧ್ಯಕ್ಷರಾಗಿ 28 ವರ್ಷದ ವಯಸ್ಸಿನ ಬಸವರಾಜ ಸಂಕೀನ್‌ ಅವರನ್ನು ನೇಮಕ ಮಾಡಿದ್ದು, ಕಲ್ಯಾಣ ಕರ್ನಾಟಕ ಭಾಗದ ಮೊದಲ ಯುವ ಪ್ರತಿಭೆ ಇವರಾದ್ದಾರೆ. ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ ಅಧ್ಯಕ್ಷ ಮತ್ತು ಮಾಜಿ ಪ್ರಧಾನಮಂತ್ರಿ ದಿ.ರಾಜೀವ್‌ಗಾಂ​ಧಿ ಅವರ ಸಲಹೆಗಾರರಾಗಿದ್ದ ಸ್ಯಾಮ್‌ ಪಿತ್ರೋಡಾ ಅವರು ನೇಮಕ ಮಾಡಿ ಈ ಆದೇಶ ಹೊರಡಿಸಿದ್ದಾರೆ.

ಅಮೆರಿಕಾ, ಇಂಗ್ಲೆಂಡ್‌, ಬಹರೆನ್‌, ಜರ್ಮನಿ, ಐರ್ಲೆಂಡ್‌, ಇಟಲಿ, ಓಮನ್‌, ಯುಎಇ, ಸೌದಿ ಅರೆಬಿಯಾ, ನ್ಯೂಜಿಲೆಂಡ್‌, ಆಸ್ಟ್ರೀಯಾ, ದಕ್ಷಣಿ ಕೋರಿಯಾ, ಫ್ರಾನ್ಸ್‌, ಫಿನ್‌ಲ್ಯಾಂಡ್‌ ಇನ್ನಿತರ ದೇಶಗಳಲ್ಲಿ ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ ಕಮಿಟಿ ಇದೆ.

ಲಾಕ್‌ಡೌನ್‌ ನೆಪ: ಗಗನಕ್ಕೇರಿದ ಗುಟ್ಕಾ ಬೆಲೆ..!

ಸ್ಪೇನ್‌ ದೇಶದ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಬಸವರಾಜ ಸಂಕೀನ್‌ ಅವರು ಮೂಲತಃ ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ತುಮಕೂರು ಗ್ರಾಮದವರು. 2016ರಲ್ಲಿ ಇವರು ಸ್ಪೇನ್‌ ದೇಶಕ್ಕೆ ಉನ್ನತ ಶಿಕ್ಷಣ ಮಾಡಲು ಹೋಗಿದ್ದರು. ಮಂಗಳೂರಿನಲ್ಲಿ ಏರೋನಾಟಿಕಲ್‌ ಎಂಜಿನೀಯರಿಂಗ್‌ ಮುಗಿಸಿದ ಸಂಕೀನ್‌, ಸ್ಪೇನ್‌ ದೇಶದಲ್ಲಿ ಮಾಸ್ಟರ್ಸ್‌ ಇನ್‌ ಏರೋಸ್ಪೇಸ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ (ಎಂಎಸ್‌) ಮಾಡಿದ್ದರು. ಅಧ್ಯಯನ ಮಾಡಿದ ಬಳಿಕ ಅಲ್ಲಿಯೇ ಅವರು ಖಾಸಗಿ ಕಂಪನಿಯಲ್ಲಿ ಬಾಹ್ಯಾಕಾಶ ಎಂಜಿನಿಯರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದಿರುವ ಬಸವರಾಜ ಸಂಕೀನ್‌ ಅವರು ಮಧ್ಯಮ ವರ್ಗದಕ್ಕೆ ಸೇರಿದ್ದಾರೆ. ಇದೀಗ ವೃತ್ತಿಯ ಜತೆಗೆ ಪ್ರವೃತ್ತಿ ಎಂಬಂತೆ ಮಹತ್ತರವಾದ ಹುದ್ದೆ ಒಲಿದು ಬಂದಿದೆ. ಹಿರಿಯ ಪತ್ರಕರ್ತ, ಯಾದಗಿರಿಯ ಮಲ್ಲಪ್ಪ ಸಂಕೀನ್‌ ಇವರ ಹಿರಿಯ ಸಹೋದರ.

ಕಾಂಗ್ರೆಸ್‌ ಪಕ್ಷವು ವಿದೇಶದಲ್ಲಿ ಇರುವ ಭಾರತಿಯ ಪ್ರತಿಭಾವಂತರನ್ನೇ ಹುಡುಕಿ ತಂದು ಅವರನ್ನು ಅಧ್ಯಕ್ಷರನ್ನಾಗಿ ಮಾಡುತ್ತಿದ್ದಾರೆ. ವಿದೇಶದಲ್ಲಿ ಕಾಂಗ್ರೆಸ್ಸಿಗೆ ಒಳ್ಳೆಯ ಇಮೇಜ್‌ ಬರಲಿ ಎಂಬ ಕಾರಣಕ್ಕಾಗಿಯೇ ಅವರು ‘ಕ್ಲೀನ್‌’ ಇರುವ ವ್ಯಕ್ತಿಗಳನ್ನು ತಂದು ಅಧ್ಯಕ್ಷ ಗಾದಿಗೆ ಕೂರಿಸುತ್ತಿದ್ದಾರೆ. ಸ್ಪೇನ್‌ ದೇಶದಲ್ಲಿಯೂ ಸಹ ಇದೀಗ ಬಾಹ್ಯಾಕಾಶ ಎಂಜಿನೀಯರ್‌ಗೆ ಮಣೆ ಹಾಕಿದ್ದಾರೆ. ಇದೀಗ ಕಾಂಗ್ರೆಸ್‌ ಪಕ್ಷದ ಸಿದ್ಧಾಂತಗಳನ್ನು ಅಲ್ಲಿ ನೆಲೆಸಿರುವ ಭಾರತೀಯರಿಗೆ ತಿಳಿಸುವ ಜತೆಗೆ ಆ ದೇಶದ ಜನರಿಗೂ ಸಹ ಮನವರಿಕೆ ಮಾಡಿಕೊಡುವಂತಹ ಜವಾಬ್ದಾರಿ ಇವರ ಮೇಲಿದೆ.

ನನ್ನ ಮೇಲೆ ಅಪಾರವಾದ ವಿಶ್ವಾಸವಿಟ್ಟು ಸ್ಪೇನ್‌ ದೇಶದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಪಕ್ಷದ ವರ್ಚಸ್ಸು ವೃದ್ಧಿಸುತ್ತೇನೆ ಎಂದು ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ ಸ್ಪೇನ್‌ ದೇಶದ ಅಧ್ಯಕ್ಷ ಬಸವರಾಜ ಸಂಕೀನ್‌ ತಿಳಿಸಿದ್ದಾರೆ.
 

Follow Us:
Download App:
  • android
  • ios