ವಿಜಯಪುರ(ಆ.08): ನಗರದ ಯುವತಿ ಸವಿತಾ ಗೋಟ್ಯಾಳ ಯುಪಿಎಸ್‌ಸಿ ಪರೀಕ್ಷೆಯಲ್ಲಿ 626ನೇ ರ‌್ಯಾಂಕ್ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿ ಹೆಮ್ಮೆಯ ಪುತ್ರಿಯಾಗಿದ್ದಾಳೆ. 

ಹೌದು, ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸವಿತಾ ಸಿದ್ದಪ್ಪ ಗೋಟ್ಯಾಳ ಐಎಎಸ್‌ ಅಧಿಕಾರಿಯಾಗಬೇಕೆಂದು ಯುಪಿಎಸ್‌ಸಿ ಪರೀಕ್ಷೆ ಕಟ್ಟಿದ್ದಳು. ಛಲ ಬಿಡದೆ ಓದಿ ಮೂರನೇ ಪ್ರಯತ್ನದಲ್ಲಿ 626ನೇ ರ‌್ಯಾಂಕ್ ಪಡೆದು ತೇರ್ಗಡೆಯಾಗಿದ್ದಾಳೆ. ಇದು ಅವರ ಮನೆಯವರಿಗೆ ಖುಷಿ ತಂದಿದೆ. ಅದರೆ, ಸವಿತಾಗೆ ಪೂರ್ಣ ತೃಪ್ತಿಯಾಗಿಲ್ಲ. ಏಕೆಂದರೆ ಐಎಎಸ್‌ ಅವರ ಜೀವನದ ಗುರಿ. ಆದ್ದರಿಂದ 626ನೇ ರ‌್ಯಾಂಕ್ ಪಡೆದು ಸವಿತಾ ಇನ್ನೊಂದು ಛಾನ್ಸ್‌ ಪರಿಕ್ಷೆ ಬರೆದು ಮತ್ತಷ್ಟು ಉತ್ತಮ ಸಾಧನೆ ಮಾಡಬೇಕು.ಐಎಎಸ್‌ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕು ಎಂಬ ಉತ್ಕಟ ಆಕಾಂಕ್ಷೆ ಹೊಂದಿದ್ದಾರೆ. 

ಬ್ಯೂಟಿ ವಿಥ್‌ ಬ್ರೈನ್‌ - ಯುಪಿಎಸ್‌ಸಿ 93ನೇ rank ಪಡೆದ ಮಿಸ್‌ ಇಂಡಿಯಾ ಫೈನಲಿಸ್ಟ್‌

ಕೆಲಸ ಬಿಟ್ಟು ಓದಿದರು: 

ಸವಿತ ಅವರ ಅಕ್ಕ ಅಶ್ವಿನಿ 2016ರಲ್ಲಿ ಐಪಿಎಸ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಸದ್ಯಕ್ಕೆ ಪಂಜಾಬ್‌ನ ಲುಧಿಯಾನಾದಲ್ಲಿ ಎಡಿಸಿಪಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸವಿತಾ ಪ್ರಾಥಮಿಕ ಶಿಕ್ಷಣವನ್ನ ಅಥರ್ಗಾದಲ್ಲಿ, ಹೈಸ್ಕೂಲ್‌ ಶಿಕ್ಷಣ ವಿಜಯಪುರದ ಪಿಡಿಜೆ ಹೈಸ್ಕೂಲ್‌ನಲ್ಲಿ, ಪಿಯುಸಿ ಧಾರವಾಡದ ಜೆಎಸ್‌ಎಸ್‌ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬೆಂಗಳೂರಿನ ಪಿಇಎಸ್‌ಐಟಿ ಎಂಜಿನಿಯರಿಂಗ್‌ ಕಾಲೇಜ್‌ನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಬಿಇ ಪದವಿ ಶಿಕ್ಷನ ಪಡೆದ ಸವಿತಾ ಎರಡೂವರೆ ವರ್ಷ ಬೆಂಗಳೂರಿನ ಸೆರನರ್‌ ಹೆಲ್ತ್‌ ಕೇರ್‌ ಕೇರ್‌ನಲ್ಲಿ ಸೇವೆ ಸಲ್ಲಿಸಿ, ಆ ಕೆಲಸ ಬಿಟ್ಟು ಯುಪಿಎಸ್‌ಸಿ ಪರೀಕ್ಷೆ ಬಿಟ್ಟು ಎರಡು ವರ್ಷ ಓದಿದ್ದಾರೆ. ಇದರ ಪ್ರತಿಫಲವಾಗಿಯೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ   626ನೇ ರ್ಯಾಂಕ್‌ ಬಂದಿದೆ. 

ಛಲವೊಂದಿದ್ದರೆ ಏನೆಲ್ಲ ಸಾಧಿಸಬಹುದು 

ಮನುಷ್ಯನಿಗೆ ಛಲವೊಂದಿದ್ದರೆ ಏನೆಲ್ಲ ಸಾಧಿಸಬಹುದು. ನಾನು ಐಎಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಬೇಕೆಂಬ ಛಲದಿಂದ ಯುಪಿಎಸ್‌ಸಿ ಪರೀಕ್ಷೆ  ಬರೆದೆ, ಎರಡು ಸಲ ತೇರ್ಗಡೆಯಾಗಲಿಲ್ಲ, ಸೋಲೇ ಗೆಲುವಿನ ಸೋಪಾನ ಎಂದು ತಿಳಿದು ಛಲ ಇನ್ನಷ್ಟು ಗಟ್ಟಿಗೊಂಡಿತು. ಏನೇ ಆದರೂ ಯುಪಿಎಸ್‌ಸಿ ಪರೀಕ್ಷೆ  ತೇರ್ಗಡೆಯಾಗಬೇಕೆಂದು ಅಧ್ಯಯನ ಮಾಡಿದೆ. ನಾನು ಪಟ್ಟ ಪರಿಶ್ರಮ ಇಂದು ಸಾರ್ಥಕವಾಗಿದೆ. ನಾನು ಇನ್ನೊಂದು ಛಾನ್ಸ್‌ ಯುಪಿಎಸ್‌ಸಿ ಪರೀಕ್ಷೆ  ಕಟ್ಟು ಹೆಚ್ಚಿನ ಸಾಧನೆ ಮಾಡಬೇಕೆಂದು ವಿಚಾರ ಹೊಂದಿದ್ದೇನೆ. ನನ್ನ ಅಕ್ಕ ಐಪಿಎಸ್‌ ಅಧಿಕಾರಿ ಅಶ್ವಿನಿ ಮಾರ್ಗದರ್ಶನ  ಹಾಗೂ ತಂದೆ ತಾಯಿಗಳ ಪ್ರೋತ್ಸಾಹ ಈ ಯಶಸ್ಸಿಗೆ ಸಹಕಾರಿಯಾಗಿದೆ ಎನ್ನುತ್ತಾರೆ ಯುಪಿಎಸ್‌ಸಿ ವಿಜೇತೆ ಸವಿತಾ ಸಿದ್ದಪ್ಪ ಗೋಟ್ಯಾಳ. 

ಡಬಲ್‌ ಖುಷಿ 

ಮೂಲತಃ ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಸಿದ್ದಪ್ಪ ಗೋಟ್ಯಾಳ ಅವರಿಗೆ ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಅಥರ್ಗಾದಲ್ಲಿ ರೈತ ಕುಟುಂಬದ ಸಿದ್ದಪ್ಪ ಗೋಟ್ಯಾಳ ಬಿಎಸ್‌ಎನ್‌ಎಲ್‌ ನೌಕರರಾಗಿದ್ದರು. ಇನ್ನೂ ಒಂದೂವರೆ ವರ್ಷ ಇರುವಾಗಲೇ ಸ್ವಯಂ ನಿವೃತ್ತಿ ಪಡೆದಿದ್ದರು. ದೊಡ್ಡ ಮಗಳು ಅಶ್ವಿನಿ ಐಪಿಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು,  ಈಗ ಇತ್ತೋರ್ವ ಪುತ್ರಿ ಸವಿತಾ ಯುಪಿಎಸ್‌ಸಿ ಪರಿಕ್ಷೆಯಲ್ಲಿ 626ನೇ ರ್ಯಾಂಕ್‌ ಪಡೆದಿದ್ದು ಸಿದ್ದಪ್ಪ ಸೇರಿದಂತೆ ಅವರ ಮನೆ ಮಂದಿಗೆಲ್ಲ ಖುಷಿ ನೀಡಿದೆ. 

ಮಗಳ ಸಾಧನೆಗೆ ಬಗ್ಗೆ ಮಾತನಾಡಿದ ಸಿದ್ದಪ್ಪ ಗೋಟ್ಯಾಳ ಅವರು, ಸವಿತಾ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ನನಗೆ ಭಾಳ ಖುಷಿ ಆಗೇದರಿ. ಸವಿತಾ ಚಿಕ್ಕಮಗಳು. ಅವಳ ಮೇಲೆ ನನಗೆ ಎಲ್ಲರಿಗಿಂತಲೂ ಪ್ರೀತಿ ಜಾಸ್ತಿ. ಹಾಗಾಗಿ ಸವಿತಾ ಸಾಧನೆ ಎಲ್ಲರಿಗಿಂತಲೂ ಹೆಚ್ಚಿನ ಖುಷಿ ನೀಡಿದೆ ಎಂದು ಹೇಳಿದ್ದಾರೆ.