ಬೆಳಗಾವಿ(ಜ.31): ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ನಾವೇನೂ ನಿರೀಕ್ಷೆ ಮಾಡಿಲ್ಲ, ಕೋವಿಡ್ ನೆಪ ಹೇಳ್ತಾರೆ ಅಷ್ಟೇ, ಹಿಂದೆ ಏಳು ವರ್ಷ ಏನು ಇತ್ತೋ ಅದೇ ಇರುತ್ತದೆ ನಾಳಿನ ಬಜೆಟ್‌ನಲ್ಲಿ. ಹಿಂದೆ‌ ಒಳ್ಳೆಯ ಕಾಲ ಇದ್ದಾಗ ಏನೂ ಮಾಡಕ್ಕಾಗಿಲ್ಲ ಅವರಿಗೆ, ಈಗ ಕೋವಿಡ್ ನೆಪ ಹೇಳುತ್ತಾರೆ. ಮೋದಿಯವರಿಂದ ಈ ದೇಶಕ್ಕೆ ಏನೂ ನಿರೀಕ್ಷೆ ಮಾಡಕ್ಕಾಗಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರ ಜೊತೆ ಮಾತುಕತೆಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮುಂದಾಗುತ್ತಿಲ್ಲ. ರೈತ ಕಾಯ್ದೆ ಮಾಡಿದ್ದು ಮೋದಿ ಅವರ ಯೋಜನೆ ಅಲ್ವಾ? ಎಲ್ಲಾ ಹಂತದಲ್ಲೂ ತಮಗೆ ಏನೂ ತಿಳೀತದೆ ಅದನ್ನೇ ಮಾಡ್ತಾರೆ ಎಂದು ಟೀಕಿಸಿದ್ದಾರೆ. 

ನಾವೇನು ಕೈಯಲ್ಲಿ ಬಳೆ ಹಾಕಿಕೊಂಡು ಕುಳಿತಿದ್ದೇವಾ? ಡಿಸಿಎಂ ಸವದಿ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

ಏರ್‌ಪೋರ್ಟ್ ಮಾರಿ ಪಬ್ಲಿಕ್ ಸೆಕ್ಟರ್ ಮಾರಾಟ ಮಾಡಿದ್ದಾರೆ. ನೆಕ್ಸ್ಟ್ ರೇಲ್ವೆ ಇದೆ, ಎಲ್ಐಸಿ ಹೋಗಿದೆ, ಮಾರುವುದೇ ಅವರ ಪ್ರಯಾರಿಟಿಯಾಗಿದೆ. ಅವಶ್ಯ ಬಿದ್ರೆ ದೆಹಲಿಯಲ್ಲಿರುವ ಕೆಂಪುಕೋಟೆಯನ್ನು ಮಾರಾಟ ಮಾಡುತ್ತಾರೆ. ಈ ಸರ್ಕಾರದಿಂದ ನಿರೀಕ್ಷೆ ಇಟ್ಟುಕೊಳ್ಳೋಕಾಗಲ್ಲ ಎಂದು ಹೇಳಿದ್ದಾರೆ. 

ಬಜೆಟ್‌ನಲ್ಲಿ ಕೋವಿಡ್ ನೆಪ ಇಟ್ಟುಕೊಂಡು ಹೊಸದೇನೂ ಕೊಡಲ್ಲ. ಹಿಂದೆ ಆಟೋ ಸಚಾಲಕರಿಗೆ ಐದು ಸಾವಿರ ಕೊಡ್ತೀವಿ ಅಂದಿದ್ರು ಯಾರಿಗೆ ಕೊಟ್ಟಿದ್ದಾರೆ ಹೇಳಿ ಎಂದು ಪ್ರಶ್ನಿಸಿದ್ದಾರೆ.  ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಹೇಳಿಕೆ ಬಗ್ಗೆ ಗೊಂದಲ ನಿವಾರಣೆ ಅವರೇ ಮಾಡಬೇಕು. ಯಡಿಯೂರಪ್ಪ ಸರ್ಕಾರ ಇರುತ್ತಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ‌ ಅವರು ಇದ್ರೂ ಲಾಭ, ಹೋದರೂ ಲಾಭ ಎಂದು ಹೇಳಿದ್ದಾರೆ.