ಚಿತ್ರ ವರದಿ: ಕೃಷ್ಣಾನಂದ ಶರ್ಮಾ

ಬೆಂಗಳೂರು(ಸೆ.15] ಉತ್ತಮ ಭವಿಷ್ಯದ ನಿರ್ಮಾಣಕ್ಕಾಗಿ ಇತಿಹಾಸ ತಿಳಿಯಬೇಕು. ನಮ್ಮ ಹಿರಿಯರು ಮಾಡಿದ ಸಾಧನೆಗಳ ಅರಿವಾಗಬೇಕು. ಆಗ ಭಾರತದ ಇತಿಹಾಸದ ವೈಭವದ ಅರಿವಾಗುತ್ತದೆ. ನಮ್ಮ ಕುರಿತು ನಮಗೆ ಹೆಮ್ಮೆ ಎನಿಸುತ್ತದೆ ಎಂದು ಸಂಸ್ಕೃತ ವಿದ್ವಾಂಸ, ಕನ್ನಡಪ್ರಭ ಅಂಕಣಕಾರ ಜಗದೀಶ ಶರ್ಮಾ ಹೇಳಿದರು. 

ಸಾಧನಾ ಡಿಗ್ರಿ ಕಾಲೇಜಿನಲ್ಲಿ ಶನಿವಾರ ನಡೆದ ಸಂಸ್ಕೃತೋತ್ಸವದಲ್ಲಿ 'ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆಗಳು' ವಿಷಯದ ಕುರಿತು ಮಾತನಾಡಿದ ಅವರು, ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ, ನಮ್ಮ‌ ತನದ ಅರಿವೇ ನಮಗಿಲ್ಲವಾಗಿದೆ. ವಿದೇಶದಿಂದ ಬಂದದ್ದು ಮಾತ್ರ ತೀರ್ಥ ಎನ್ನುವಂತಾಗಿದೆ. ಒಮ್ಮೆ ನಮ್ಮ ಹಿರಿಯರ ಸಾಧನೆಗಳ‌ ಬಗ್ಗೆ ಕಣ್ಣು ಹಾಯಿಸಿದರೆ ನಾವು ಬೆರಗಾಗಬೇಕಾತ್ತದೆ ಎಂದರು. 

ಜನವರಿ, ಫೆಬ್ರವರಿ ತಿಂಗಳುಗಳನ್ನು ಹಾಗೆಯೇ ಯಾಕೆ ಕರೆಯಬೇಕು ಎಂದರೆ ಉತ್ತರವಿಲ್ಲ. ಅದನ್ನು ಎಲ್ಲರೂ ಒಪ್ಪಿ ಹಾಗೆ ಕರೆಯುತ್ತಿದ್ದೇವೆ. ಚೈತ್ರಮಾಸ ಎಂದು ಯಾಕೆ ಕರೆಯುತ್ತೇವೆ ಎಂಬುದಕ್ಕೆ ಉತ್ತರ ಹುಡುಕಲು ಹೋಗುವುದಿಲ್ಲ. ನಮ್ಮ ಸಂಸ್ಕೃತಿ ಪ್ರಕೃತಿಯೊಂದಿಗೆ ಬೆರೆತಿದೆ ಎಂದು ನುಡಿದರು.

ಗಣಿತಶಾಸ್ತ್ರದ ಎಲ್ಲ ಉಲ್ಲೇಖ
ಪೈಥಾಗೋರಸ್ ಪ್ರಮೇಯದ ಬಗ್ಗೆ ಶುಲ್ಬಸೂತ್ರದಲ್ಲಿ ಉಲ್ಲೇಖವಿದೆ. ಭೂಮಿಗೆ ಗುರುತ್ವಾಕರ್ಷಣೆ ಶಕ್ತಿ ಇರುವುದರ ಬಗ್ಗೆ, ಸಸ್ಯಗಳಿಗೆ ಜೀವ ಇರುವುದರ‌ ಕುರಿತು ಕೂಡ ಪ್ರಾಚೀನರು ಹೇಳಿದ್ದಾರೆ. ಅಣುವಿನ ಬಗ್ಗೆಯೂ ಸಾವಿರ ವರ್ಷಗಳ ಹಿಂದೆ ವಿಸ್ತಾರವಾಗಿ ಚರ್ಚೆಯಾಗಿದೆ ಎಂದು ಜಗದೀಶ ಶರ್ಮಾ ಹೇಳಿದರು. 

ಅಂಕಕ್ಕಾಗಿ ಸಂಸ್ಕೃತ ಬೇಡ:
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ವಿದ್ಯಾರ್ಥಿಗಳು ಸಂಸ್ಕೃತವನ್ನು ಕೇವಲ ಮಾರ್ಕ್ಸ್ ತೆಗೆದುಕೊಳ್ಳಲು ಮಾತ್ರ ಆಯ್ದುಕೊಳ್ಳುತ್ತಿದ್ದಾರೆ. ಆದರೆ ಅದರಲ್ಲಿರುವ ಜ್ಞಾನ, ನೀತಿಯನ್ನು ತಿಳಿದುಕೊಂಡರೆ ಬದುಕು ಇನ್ನೂ ಸುಂದರವಾಗುತ್ತದೆ ಎಂದರು. ವಿದ್ಯಾರ್ಥಿಗಳು ಉತ್ತಮ‌ ಕಾಲೇಜ್ ಗೆ ಬಂದು ಸೇರಿದ್ದೀರಿ. ಕಾಲೇಜ್ ಮೂಲಕ ನಿಮ್ಮ‌ ಬದುಕು ಉತ್ತಮವಾಗುವಂತಾಗಲಿ. ಸಾಧನಾ ಕಾಲೇಜ್ ನಿಂದ ಉತ್ತಮ‌ ಸಾಧನೆ ಮಾಡುವಂತಾಗಲಿ ಎಂದು ನುಡಿದರು.

ಸಭೆಯಲ್ಲಿ ಸಂಸ್ಕೃತ:
ಸುವರ್ಣ ನ್ಯೂಸ್.ಕಾಂ ಪ್ರಧಾನ ಸಂಪಾದಕ ಎಸ್.ಕೆ.ಶಾಮಸುಂದರ್  ಮಾತನಾಡಿ, ಸಂಸ್ಕೃತದ ಮಹತ್ವವನ್ನು ಹೇಳಿ, ಬಾಲ್ಯದಲ್ಲಿ ಕಲಿತ ಶ್ಲೋಕದ ಮೂಲಕ ಸಭೆಯ ಮೆಚ್ಚುಗೆಗೆ ಪಾತ್ರರಾದರು.

ಹಾಜರಿದ್ದ ಗಣ್ಯರು:
ಪ್ರಾಂಶುಪಾಲ ಪ್ರೊ.ಸೀರಜ್ ರೆಹಮಾನ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಪ್ರಾಧ್ಯಾಪಕ ಕೃಷ್ಣಾನಂದ ಶರ್ಮಾ ಪ್ರಸ್ತಾವನೆ ಮಾಡಿದರು. ಹಿರಿಯ ಕವಿ ಗಜಾನನ ಶರ್ಮಾ, ವಿಭಾಗ ಮುಖ್ಯಸ್ಥ ಪ್ರೊ.ಅಜಯ್, ಕಾಮರ್ಸ್ ಕ್ಲಬ್ ಕಾರ್ಯದರ್ಶಿ ಪ್ರೊ.ಹೇಮಪ್ರಭಾ, ಕನ್ನಡ ಪ್ರಾಧ್ಯಾಪಕ ಪ್ರೊ. ಬಿಳಿಗಿರಿವಾಸನ್ , ಧರ್ಮಭಾರತೀ ಸಂಪಾದಕ ಲೋಹಿತಶರ್ಮಾ, ಉಪನ್ಯಾಸಕರಾದ ಮಾಲಾ ಹಿರೇಮಠ, ಸಾರಿಕಾ ನಿರ್ಮಲಾ ಪ್ರಸಾದ್, ಅನುಷಾ, ಪ್ರೊ.ಪ್ರೀತಿ ಬದ್ರಿ, ಬದರಿನಾಥ್, ವಿದ್ಯಾರ್ಥಿಗಳು ಇದ್ದರು. 

ವಿದ್ಯಾರ್ಥಿನಿ ಅನುಪಮಾ ಸ್ವಾಗತಿಸಿ, ಲಕ್ಷ್ಮೀನಾರಾಯಣ ವಂದಿಸಿ, ಚೇತನ್ ಕುಮಾರ್ ನಿರೂಪಿಸಿದರು. ಕೃತ್ತಿಕಾ ಸ್ವಾಗತನೃತ್ಯ ಮಾಡಿದರೆ, ತೇಜಸ್ವೀ ಭಾವನಾ ಪ್ರಾರ್ಥಿಸಿದರು. 

ವಿವಿಧ ಸ್ಪರ್ಧೆಗಳು:
ಸಾಂಸ್ಕೃತೋತ್ಸವ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಕೃತ್ತಿಕಾ ಪ್ರಥಮ, ಸೌಮ್ಯಾ ಡಿ ದ್ವಿತೀಯ, ಚಿತ್ರಕಲ್ಪನಾ ಸ್ಪರ್ಧೆಯಲ್ಲಿ ಪವಿತ್ರಾ ಪ್ರಥಮ, ವಿಂಧ್ಯಾ ದ್ವಿತೀಯ, ಮದನ್ ತೃತೀಯ, ಚಿತ್ರಕಲೆಯಲ್ಲಿ ಕವಿತಾ ಪ್ರಥಮ, ಮದನ್ ದ್ವಿತೀಯ, ಹರೀಶ ತೃತೀಯ ಸ್ಥಾನ ಪಡೆದರು.