ಮಂಡ್ಯ(ಸೆ.01): ಮದ್ದೂರು ಪಟ್ಟಣದ ಪುರಾಣ ಪ್ರಸಿದ್ಧ ಹೊಳೇ ಆಂಜನೇಯಸ್ವಾಮಿ ದೇಗುಲಕ್ಕೆ ಚಲನಚಿತ್ರ ನಟಿ ಪ್ರೇಮಾ ಭೇಟಿ ನೀಡಿ ಶನಿವಾರ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ 8 ಗಂಟೆ ಸುಮಾರಿಗೆ ಸ್ನೇಹಿತರೊಂದಿಗೆ ದೇವಾಲಯಕ್ಕೆ ಆಗಮಿಸಿದ ಪ್ರೇಮಾ ಸಂಕಲ್ಪ ಮಾಡಿದ ನಂತರ ಶನಿವಾರದ ಅಂಗವಾಗಿ ಆಂಜನೇಯಸ್ವಾಮಿ ಮೂಲ ವಿಗ್ರಹಕ್ಕೆ ನೆರವೇರಿಸುತ್ತಿದ್ದ ಮಧು ಮತ್ತು ಜೇನು ತುಪ್ಪದ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.

ಬಳಿಕ ದೇವಾಲಯದ ಆವರಣದಲ್ಲಿ ಒಂದೂಕಾಲು ರೂಪಾಯಿ ನಾಣ್ಯವನ್ನು ಕೈಯ್ಯಲ್ಲಿ ಇಟ್ಟುಕೊಂಡು ಪ್ರಾರ್ಥನೆ ಸಲ್ಲಿಸಿದರೆ ತಮ್ಮ ಇಷ್ಟಾರ್ಥ ನೆರವೇರುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಅದೇ ರೀತಿ ನಟಿ ಪ್ರೇಮಾ ಅವರು ಒಂದೂಕಾಲು ರೂಪಾಯಿ ನಾಣ್ಯವನ್ನು ಅಂಗೈಯಲ್ಲಿ ಹಿಡಿದುಕೊಂಡು ಪ್ರಾರ್ಥನೆ ಸಲ್ಲಿಸಿದರು. ಬಳಿಕ ತೀರ್ಥ ಪ್ರಸಾದ ಸ್ವೀಕರಿಸಿದರು.

ದೇಗುಲದ ಪ್ರಧಾನ ಅರ್ಚಕ ಪ್ರದೀಪಾಚಾರ್ಯ, ಸಹ ಅರ್ಚಕ ಸುರೇಶಾಚಾರ್ಯ ಅವರುಗಳು ಪ್ರೇಮಾ ಮತ್ತು ಸ್ನೇಹಿತರಿಗೆ ದೇವಾಲಯದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿದರು.

ಮೊದಲಿನಿಂದಲೂ ಆಂಜನೇಯ ಭಕ್ತೆ:

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೇಮಾ, ನಾನು ಮೊದಲಿನಿಂದಲೂ ಆಂಜನೇಯನ ಭಕ್ತೆಯಾಗಿದ್ದೇನೆ. ಆದ್ದರಿಂದ ದೇವಾಲಯಗಳಿಗೆ ಹೋಗುತ್ತೇನೆ. ನನ್ನ ಸ್ನೇಹಿತರು ಮದ್ದೂರು ಹೊಳೇ ಆಂಜನೇಯಸ್ವಾಮಿ ದೇವಾಲಯದ ಇತಿಹಾಸವನ್ನು ಹೇಳಿದ್ದರು. ಕಾರಣ ಅವರೊಂದಿಗೆ ಆಗಮಿಸಿ ದೇವರ ದರ್ಶನ ಪಡೆದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ತಮಿಳುನಾಡು ಮೂಲದ ವಿಮಾ ಕಂಪನಿಯಿಂದ ಗ್ರಾಹಕರಿಗೆ ದೋಖಾ..!

ಮುಂದಿನ ದಿನಗಳಲ್ಲಿ ನಾನು ಉದ್ಯಮವೊಂದನ್ನು ಪ್ರಾರಂಭಿಸುವ ಉದ್ದೇಶ ಇದೆ. ಯಶಸ್ವಿಯಾಗಲಿ ಎಂದು ದೇವರಲ್ಲಿ ಒಂದೂಕಾಲು ರೂಪಾಯಿ ಕಾಣಿಕೆ ಇಟ್ಟು ಮೊರೆ ಇಟ್ಟಿರುವುದಾಗಿ ಅವರು ಸ್ಪಷ್ಟಪಡಿಸಿದರು.