ಬೆಂಗಳೂರು(ಅ.11): ಬಿಬಿಎಂಪಿಯ ಕಾಯಂ, ಗುತ್ತಿಗೆ ಹಾಗೂ ನೇರ ವೇತನ ಪಾವತಿ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಪೌರಕಾರ್ಮಿಕರಿಗೆ ಇನ್ನು ಮುಂದೆ ಪಾಲಿಕೆ ಲಾಂಛನವಿರುವ ಒಂದೇ ಮಾದರಿಯ ಸಮವಸ್ತ್ರ ದೊರೆಯಲಿದೆ.

ಶನಿವಾರ ಉಪ್ಪಾರಪೇಟೆ ಪೊಲೀಸ್‌ ಠಾಣೆ ಹಿಂಭಾಗದಲ್ಲಿರುವ ಪೌರಕಾರ್ಮಿಕರ ಮಸ್ಟರಿಂಗ್‌ ಕೇಂದ್ರಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತಾ ಭೇಟಿ ಪರಿಶೀಲನೆ ನಡೆಸಿದರು. ಈ ವೇಳೆ ಬಿಬಿಎಂಪಿಯ ಎಲ್ಲ ಪೌರಕಾರ್ಮಿಕರಿಗೆ ಬಿಬಿಎಂಪಿ ಲಾಂಛನ ಇರುವ ಹಾಗೂ ಒಂದೇ ಮಾದರಿಯ ಸಮವಸ್ತ್ರ ನೀಡಬೇಕು. ಪಾಲಿಕೆಯ ಪೌರಕಾರ್ಮಿಕರಿಗೆ ಶೂ, ಹ್ಯಾಂಡ್‌ ಗ್ಲೌಸ್‌, ಮಾಸ್ಕ್‌, ಸ್ಯಾನಿಟೈಸರ್‌ ಸೇರಿದಂತೆ ಎಲ್ಲ ಸುರಕ್ಷತಾ ಸಾಧನ ನೀಡಬೇಕು ಎಂದು ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌ ಅವರಿಗೆ ಸೂಚಿಸಿದರು.

ಪಾದಚಾರಿ ಮಾರ್ಗದಲ್ಲಿ ಕಸ, ಕಟ್ಟಡ ತ್ಯಾಜ್ಯ ಹಾಕದಂತೆ ಎಚ್ಚರ ವಹಿಸಿ, ದುರಸ್ತಿ ಮಾಡಬೇಕಿರುವ ರಸ್ತೆಗಳನ್ನು ಆದ್ಯತೆಯ ಮೇಲೆ ಸರಿಪಡಿಸಬೇಕು, ಪಾದಚಾರಿ ಮಾರ್ಗ ಒತ್ತುವರಿ ಕೂಡಲೇ ತೆರವುಗೊಳಿಸುವ ಜೊತೆಗೆ ಪಾದಚಾರಿ ಮಾರ್ಗದಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡದಂತೆ ಕ್ರಮವಹಿಸಲು ಗೌರವ್‌ ಗುಪ್ತಾ ನಿರ್ದೇಶಿಸಿದರು.

ಗರ್ಭಿಣಿ, 50 ವರ್ಷ ಮೇಲ್ಪಟ್ಟ ಪೌರ ಕಾರ್ಮಿಕರಿಗೆ ವೇತನ ಸಹಿತ ರಜೆ

ಬಳಿಕ ಸ್ವಾತಂತ್ರ್ಯ ಉದ್ಯಾನದ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಹಾಗೂ ಸ್ವಾತಂತ್ರ್ಯ ಉದ್ಯಾನದ ಸಮೀಪವೇ ನಿರ್ಮಾಣವಾಗುತ್ತಿರುವ ಕಸ ಸಾಗಾಣಿಕೆ ಸ್ಟೇಷನ್‌ ಕಾಮಗಾರಿ ಪರಿಶೀಲನೆ ನಡೆಸಿದರು. ಈ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಸಂದರ್ಭದಲ್ಲಿ ಮುಚ್ಚಿದ ಮಾದರಿಯಲ್ಲಿ ಕಸ ವಿಲೇವಾರಿ ಮಾಡಬೇಕು. ಘಟಕದ ನಿರ್ವಹಣೆಯಲ್ಲಿ ಯಾವುದೇ ಲೋಪವಾಗದಂತೆ ಹಾಗೂ ಘಟಕದಿಂದ ಸ್ಥಳೀಯರಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸುವಂತೆ ಸೂಚಿಸಿದರು.

ಬಿಬಿಎಂಪಿ ವತಿಯಿಂದ ಸ್ಥಾಪಿಸಿರುವ ಜೈವಿಕ ಅನಿಲ ಘಟಕ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಹಸಿ ತ್ಯಾಜ್ಯ, ಪ್ರಾಣಿ ತ್ಯಾಜ್ಯ, ಸಗಣಿಯ ಮೂಲಕ ಜೈವಿಕ ಅನಿಲ ಉತ್ಪಾದನೆ ಮಾಡಲಾಗುತ್ತಿದ್ದು, ದಿನಕ್ಕೆ ಐದು ಟನ್‌ ಸಾಮರ್ಥ್ಯ ಹೊಂದಿದೆ. ಘಟಕದಿಂದ ಉತ್ಪತ್ತಿ ಆಗುವ ವಿದ್ಯುತ್‌ ಸ್ವಾತಂತ್ರ್ಯ ಉದ್ಯಾನದ ಬೀದಿ ದೀಪಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು. ನಗರದಲ್ಲಿ ಕಸದ ಆಟೋ ಟಿಪ್ಪರ್‌ಗಳು ಹೋಗಲು ಸಾಧ್ಯವಿಲ್ಲದ ಪ್ರದೇಶದಲ್ಲಿ ಮಾತ್ರ ಕಸದ ತಳ್ಳುವ ಗಾಡಿ ಬಳಸಬೇಕು, ಕೂಡಲೇ ಹಳೆಯ ಕಸ ತಳ್ಳುವ ಗಾಡಿ ಹಿಂತೆಗೆದುಕೊಳ್ಳಲು ಸೂಚಿಸಿದರು.

ಈ ವೇಳೆ ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್‌, ಘನತ್ಯಾಜ್ಯ ನಿರ್ವಹಣೆ ಮುಖ್ಯ ಎಂಜಿನಿಯರ್‌ ವಿಶ್ವನಾಥ್‌, ಪಶ್ಚಿಮ ವಲಯ ಜಂಟಿ ಆಯುಕ್ತ ಚಿದಾನಂದ, ವಾರ್ಡ್‌ ನೋಡಲ್‌ ಅಧಿಕಾರಿ ಗೀತಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಅಧಿಕಾರಿಗಳಿಗೆ ತರಾಟೆ

ಕುಮಾರ ಪಾರ್ಕ್ ಬಳಿ ಆಟೋ ಟಿಪ್ಪರ್‌ ಮೂಲಕ ಕಾಂಪ್ಯಾಕ್ಟರ್‌ಗೆ ಕಸ ವಿಲೇವಾರಿ ಹಾಗೂ ಕಸ ವಿಂಗಡಣೆ ಮಾಡುವ ವೇಳೆ ಸಿಬ್ಬಂದಿ ಗ್ಲೌಸ್‌ ಹಾಕದೆ ಕೆಲಸ ಮಾಡುವುದನ್ನು ಗಮನಿಸಿದ ಆಡಳಿತಾಧಿಕಾರಿ, ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ವಚ್ಛತಾ ಸಿಬ್ಬಂದಿಯನ್ನು ಮಾನವೀಯತೆಯಿಂದ ನಡೆಸಿಕೊಳ್ಳಿ, ಸ್ವಚ್ಛತಾ ಸಿಬ್ಬಂದಿಯಿಂದ ಈ ರೀತಿ ಕೆಲಸ ಮಾಡಿಸಿದರೆ ಹೇಗೆ. ಸಿಬ್ಬಂದಿಗೆ ಏಕೆ ಸುರಕ್ಷಾ ಸಾಧನ ನೀಡಿಲ್ಲ. ಈ ಸಂಬಂಧ ಏನು ಕ್ರಮ ಕೈಗೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದರು. ಈ ರೀತಿಯ ಘಟನೆಗಳು ಮರುಕಳಿಸದಂತೆ ಹಾಗೂ ಕೂಡಲೇ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಘನತ್ಯಾಜ್ಯ ವಿಭಾಗದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.