'ಡಿಕೆಶಿಯಂತಹ ಭ್ರಷ್ಟ ಇಡೀ ದೇಶದಲ್ಲಿಯೇ ಯಾರೂ ಇಲ್ಲ'
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅತೀ ಭ್ರಷ್ಟ ಶಾಮ್ ಭಟ್ ರನ್ನ ಕೆಪಿಎಸ್ಸಿ ಮುಖ್ಯಸ್ಥನನ್ನಾಗಿ ಮಾಡಿದ್ದರು| ಲಕ್ಷ್ಮಣ್ ಅತೀ ನಿಕೃಷ್ಟ, ಭ್ರಷ್ಟ ಗುತ್ತಿಗೆದಾರನಾಗಿದ್ದ ಅಂತವನನ್ನು ಪರಿಸರ ಮಂಡಳಿ ಮುಖ್ಯಸ್ಥನನ್ನಾಗಿ ಮಾಡಿದ್ದರು| ದೇಶದಲ್ಲಿ ಲೋಕಪಾಲ್, ರಾಜ್ಯದಲ್ಲಿ ಲೋಕಾಯುಕ್ತ ಶಕ್ತಿಶಾಲಿಯಾಗಿತ್ತು| ಲೋಕಾಯುಕ್ತ ಅಧಿಕಾರ ಕಿತ್ತುಕೊಂಡು ಸಿದ್ದರಾಮಯ್ಯ ಎಸಿಬಿ ಮಾಡಿದ್ದು ನಾಚಿಕೆಗೇಡು|
ಬಾಗಲಕೋಟೆ(ಡಿ.27): ಲೋಕೋಪಯೋಗಿ ಇಲಾಖೆಯಲ್ಲಿ ಅನರ್ಹರ ಇಂಜಿನಿಯರ್ ಬಡ್ತಿ ಹಾಗೂ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ. ಹೈಕೋರ್ಟ್ ಅಷ್ಟೇ ಯಾಕೆ ಮಾಧ್ಯಮ, ಹೋರಾಟಗಾರರು ಸಹ ಛೀಮಾರಿ ಹಾಕಿದ್ದಾರೆ. ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ, ನಾಚಿಕೆ ಅನ್ನೋದೆ ಇಲ್ಲ ಎಂದು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅತೀ ಭ್ರಷ್ಟ ಶಾಮ್ ಭಟ್ ರನ್ನ ಕೆಪಿಎಸ್ಸಿ ಮುಖ್ಯಸ್ಥನನ್ನಾಗಿ ಮಾಡಿದ್ದರು. ಲಕ್ಷ್ಮಣ್ ಅತೀ ನಿಕೃಷ್ಟ, ಭ್ರಷ್ಟ ಗುತ್ತಿಗೆದಾರನಾಗಿದ್ದ ಅಂತವನನ್ನು ಪರಿಸರ ಮಂಡಳಿ ಮುಖ್ಯಸ್ಥನನ್ನಾಗಿ ಮಾಡಿದ್ದರು. ದೇಶದಲ್ಲಿ ಲೋಕಪಾಲ್, ರಾಜ್ಯದಲ್ಲಿ ಲೋಕಾಯುಕ್ತ ಶಕ್ತಿಶಾಲಿಯಾಗಿತ್ತು. ಲೋಕಾಯುಕ್ತ ಅಧಿಕಾರ ಕಿತ್ತುಕೊಂಡು ಸಿದ್ದರಾಮಯ್ಯ ಎಸಿಬಿ ಮಾಡಿದ್ದು ನಾಚಿಕೆಗೇಡು ಎಂದು ಸಿದ್ದರಾಮಯ್ಯ ವಿರುದ್ಧ ಎಸ್ ಆರ್ ಹಿರೇಮಠ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ ಹಿರೇಮಠ ಅವರು, ಬಿಎಸ್ವೈ ಅಕ್ರಮ ಗಣಿಗಾರಿಕೆಯಲ್ಲಿ ಜೈಲಿಗೆ ಹೋಗಿ ದೇಶದಲ್ಲಿ ನಾಚಿಕೆಗೇಡಿಯಾದರು. ಕುಮಾರಸ್ವಾಮಿ ಭೂಮಿ ಹಗರಣ, ಅಕ್ರಮ ಗಣಿಗಾರಿಕೆ ಮಾಡಿದ್ದಾರೆ. ಮತದಾರರು ಸರಿಯಾಗಿರಬೇಕು, ಸಾರ್ವಜನಿಕ ಸೇವಕರು ಸರಿಯಾಗಿ ಕೆಲಸ ಮಾಡಿದಾಗ ಮೆಚ್ಚಬೇಕು.ಯಾರು ಕೆಟ್ಟ ಕೆಲ್ಸ ಮಾಡ್ತಾರೆ ಅಂತವರಿಗೆ ಛೀಮಾರಿ ಹಾಕಬೇಕು ಎಂದು ಹೇಳಿದ್ದಾರೆ. ಇಂಜಿನೀಯರ್ ಬಡ್ತಿ, ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ್ದು ಸರಿಯಾಗಿದೆ ಎಂದು ಹೇಳಿದ್ದಾರೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ನಡೆಸುತ್ತಿರುವ ಲಾಬಿಯ ವಿಚಾರದ ಬಗ್ಗೆ ಮಾತನಾಡಿದ ಅವರು, ಡಿಕೆಶಿಯಂತಹ ಭ್ರಷ್ಟ ಸ್ವರೂಪ, ಇಡೀ ದೇಶದಲ್ಲೇ, ಕರ್ನಾಟಕದಲ್ಲಿ ಯಾರು ಇಲ್ಲ, ಡಿಕೆಶಿಗೆ ನೀವೂ ನಾಗರಿಕ ಸಮಾಜದಲ್ಲಿ ಇರಬಾರದು ಜೈಲಿನಲ್ಲಿರಬೇಕು ಎಂದು ಹೇಳಿದ್ದೆ, ಇಂತಹ ವ್ಯಕ್ತಿಯನ್ನು ಕೆಪಿಸಿಸಿ ಅಧ್ಯಕ್ಷ ಮಾಡಲು ಹೊರಟಿದ್ದಾರೆ ಅಂದರೆ ಮಾಡುವವರು ಎಂತವರಿರಬೇಕು ಯೋಚಿಸಿ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅನರ್ಹರು, ಭ್ರಷ್ಟರು ರಾಜಕಾರಣದಲ್ಲಿ ಇರಲೇ ಬಾರದು. ಯಾಕೆ ಬಂದಿದ್ದಾರೆ ಎಂದು ಚಿಂತನೆ ಮಾಡಬೇಕು. ಜನರನ್ನು ಜಾಗೃತಗೊಳಿಸಬೇಕು, ಪ್ರಜಾಪ್ರಭುತ್ವ ಸಶಕ್ತಗೊಳಿಸಬೇಕು ಎಂದು ತಿಳಿಸಿದ್ದಾರೆ.
ಎಸ್ ಆರ್ ಹಿರೇಮಠ್ ರಾಜಕೀಯಕ್ಕೆ ಬರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷ ,ಅಧಿಕಾರ ರಾಜಕೀಯ ಬಸವಣ್ಣನವರು ಮಾಡಿದ್ದರು. ಜಾತಿ ಜಾತಿ ನಡುವೆ ಸಮಾನತೆ ತರಲು ರಾಜಕೀಯ ನಡೀತು, ಪುರುಷ,ಮಹಿಳೆ ಸಮಾನತೆಯಾಗಬೇಕಾದರೆ ರಾಜಕೀಯವಾಯ್ತು, ಯಾರು ಕೈಯಿಂದ ಕಾಯಕ, ದುಡಿಮೆ ಮಾಡ್ತಾರೆ ಅದಕ್ಕೆ ಗೌರವ ಬೇಕೆನ್ನುವುದೇ ರಾಜಕೀಯವಾಗಿದೆ. ನಾನು ಯಾವಾಗಲೂ ರಾಜಕೀಯದಲ್ಲೇ ಇರುತ್ತೇನೆ. ನಾನು ಸಾಮಾಜಿಕ ಹೋರಾಟಗಾರನಲ್ಲ, ರಾಜಕೀಯ ಹೋರಾಟಗಾರ ಎಂದು ಹೇಳಿದ್ದಾರೆ.
ಸೂರ್ಯಗ್ರಹಣ ವೇಳೆ ಕಲಬುರಗಿ ವಿಕಲಚೇತನ ಹೂತಿದ್ದ ಪ್ರಕರಣದ ಬಗ್ಗೆ ಮಾತನಾಡಿದ ಅವರು, ನನ್ನ ಪ್ರಕಾರ ಇದು ಅಂಧಶ್ರದ್ಧೆ ಅಂತ ಮೇಲ್ನೋಟಕ್ಕೆ ಕಾಣುತ್ತದೆ. ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗಬಾರದು. ಇಂತಹದರ ಬಗ್ಗೆ ಪ್ರಜ್ಞಾವಂತರು ಜಾಗೃತಿ ಮೂಡಿಸಬೇಕು. ಸತ್ಯಾಸತ್ಯತೆ ಪರಾಮರ್ಶೆ ನಡೆಸಬೇಕು ಎಂದು ಹೇಳಿದ್ದಾರೆ.