ಚಿಕ್ಕಬಳ್ಳಾಪುರ(ಮಾ.15): ಎಲ್ಲಡೆ ಕೊರೋನಾ ವೈರಸ್‌ ಭೀತಿ ಹರಡುತ್ತಿದ್ದಂತೆ ಈಗ ಅದರ ಕುರಿತು ಹಲವು ಸುಳ್ಳು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿದ್ದು, ಬಾಗೇಪಲ್ಲಿಯಲ್ಲಿ 25 ವರ್ಷದ ಯುವತಿ ಸಾವು ಎಂಬುದಾಗಿ ಸುಳ್ಳು ಸುದ್ದಿಯನ್ನು ವಾಟ್ಸ್‌ಪ್‌ಗಳಲ್ಲಿ ಹರಡುವ ಮೂಲಕ ಇಡೀ ಬಾಗೇಪಲ್ಲಿ ಜನತೆಯನ್ನು ನಡುಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳನ್ನು ನಡುಗಿಸುತ್ತಿರುವ ಭಯಂಕರ ಕಾಯಿಲೆಯಾಗಿರುವ ಕೋರಾನಾ ವೈರೆಸ್‌ ಹರಡಿ ಸಾವು ನೋವುಗಳು ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ದೇಶದ ಜನತೆ ಭಯಭೀತಾರಾಗಿದ್ದಾರೆ.

ಮೊಟ್ಟೆ, ಮಾಂಸದಿಂದ ಬರುತ್ತಾ ಕೊರೋನಾ ..?

ರಾಜ್ಯದಲ್ಲಿಯೂ ಈ ಕಾಯಿಲೆಯನ್ನು ತಡೆಯುವ ನಿಟ್ಟಿನಲ್ಲಿ ಅನೇಕ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು ಒಂದು ವಾರ ಶಾಲಾ ಕಾಲೇಜ್‌ ಸೇರಿದಂತೆ ಹೆಚ್ಚು ಜನರು ಸೇರುವಂತಹ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಆದರೆ, ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಕೋರಾನಾ ವೈರಸ್‌ ಪ್ರಕರಣಗಳು ಯಾವುದು ದೃಢಪಡದಿದ್ದರೂ ಸಾಮಾಜಿಕ ಜಾಲತಾಣದ ಮೂಲಕ ಎರಡು ದಿನಗಳ ಹಿಂದೆ ವ್ಯಕ್ತಿಯೊಬ್ಬ 25 ವರ್ಷದ ಮಹಿಳೆಯೊಬ್ಬಳು ಸಾವು ಎಂಬುದಾಗಿ ಸುಳ್ಳು ಸುದ್ದಿ ಹಬ್ಬಿಸಿ ತಾಲೂಕಿನ ಜನತೆಯನ್ನು ಭಯಭೀತರನ್ನಾಗಿಸಿದ್ದಾನೆ.

ಎರಡು ದಿನಗಳ ಹಿಂದೆ ಯಾವುದೇ ಒಂದು ಸುದ್ದಿವಾಹಿನಿಯಲ್ಲಿ ಕೊರೋನಾಗೆ ಕರ್ನಾಟಕದಲ್ಲಿ ಮೊದಲ ಬಲಿ ಎಂಬುದಾಗಿ ಪ್ಲಾಷ್‌ನಲ್ಲಿ ಬಿತ್ತರವಾಗಿರುವ ಸುದ್ದಿಯನ್ನು ಎಡಿಟ್‌ ಮಾಡಿ ಬಾಗೇಪಲ್ಲಿಯಲ್ಲಿ 25 ವರ್ಷದ ಯುವತಿ ಸಾವು ಎಂಬುದಾಗಿ ಸೃಷ್ಟಿಸಿ ವಾಟ್ಸಪ್‌ನ ವಿವಿಧ ಗ್ರೂಪ್‌ಗಳಲ್ಲಿ ಹರದಾಡಿದೆ. ನಂತರ ಜನರಿಗೆ ಇದು ಸುಳ್ಳು ಸುದ್ದಿ ಎಂಬುದಾಗಿ ತಿಳಿದುಬಂದಿದೆ.

ಕೊರೋನಾ ದೇಶದ ‘ಸೂಚಿತ ವಿಪತ್ತು’!

ಈ ಸಂಬಂಧ ದೇಶ ಸೇರಿದಂತೆ ರಾಜ್ಯದಲ್ಲಿ ಕೊರೋನಾ ವೈರಸ್‌ ಬಗ್ಗೆ ಅರಿವು ಮೂಡಿಸುವ ತಡೆಗಟ್ಟುವ ಹಾಗೂ ಎಚ್ಚರಿಸುವ ವಿವಿಧದ ಕಾರ್ಯಕ್ರಮಗಳು ಸರ್ಕಾರ ಮಾಡುತ್ತಿದೆ, ದೃಶ್ಯ ಮಾಧ್ಯಮ ಹಾಗೂ ದಿನ ಪತ್ರಿಕೆಗಳು ಹರಸಾಹಸ ಮಾಡುತ್ತಿವೆ ಆದರೆ ಕೆಲವು ಸಾಮಾಜಿಕ ಜಾಲತಾಣದವರು ಸುಳ್ಳು ಮಾಹಿತಿಯನ್ನು ಹಬ್ಬಿಸುವ ಮೂಲಕ ಜನರ ನೆಮ್ಮದಿ ಕೆಡಿಸುತ್ತಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳವಂತೆ ಸಾರ್ವಜನಿಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಸಂಬಂಧ ಬಾಗೇಪಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಸತ್ಯನಾರಾಯಣರೆಡ್ಡಿ ಪ್ರತಿಕ್ರಿಯಿಸಿ ತಾಲೂಕಿನಲ್ಲಿ ಕೊರೋನಾ ವೈರೆಸ್‌ ಕಾಯಿಲೆಯ ಯಾವುದೇ ಪ್ರಕರಣ ದಾಖಲಾಗಿಲ್ಲ, ಸಾವು ಸಂಭವಿಸಿಲ್ಲ, ಕೇವಲ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿಸಿದ್ದಾರೆ. ಸುಳ್ಳುಸುದ್ದಿಗಳಿಗೆ ಕಿವಿಕೊಡಬೇಡಿ, ಕೊರೋನಾ ಬಗ್ಗೆ ಈಗಾಗಲೇ ಸಾರ್ವಜನಿಕರಿಗೆ ಅರಿವು ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.