ಬೆಂಗಳೂರು [ಸೆ.13]:  ನಿಂತಿದ್ದ ಆಟೋಗೆ ಸಾರಿಗೆ ಇಲಾಖೆ ಇನ್‌ಸ್ಪೆಕ್ಟರ್‌ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕನ ಕೈ ಮುರಿದಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಠಾಣಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಆಟೋ ಚಾಲಕ ನೂರ್‌ ಷರೀಫ್‌ ಕೈ ಮುರಿದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್‌ಟಿಒ ಇನ್‌ಸ್ಪೆಕ್ಟರ್‌ ಮಂಜುನಾಥ್‌ ಎಂಬುವರ ವಿರುದ್ಧ ನಿರ್ಲಕ್ಷ್ಯ ಹಾಗೂ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮಂಜುನಾಥ್‌ ಎಲೆಕ್ಟ್ರಾನಿಕ್‌ ಸಿಟಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ಮೋಟಾರು ವಾಹನ ಇನ್‌ಸ್ಪೆಕ್ಟರ್‌ ಆಗಿದ್ದಾರೆ. ಗುರುವಾರ ಬೆಳಗ್ಗೆ 10.30ರ ಸುಮಾರಿಗೆ ಎಲೆಕ್ಟ್ರಾನಿಕ್‌ ಸಿಟಿ 2ನೇ ಹಂತದ ಟಿಸಿಎಸ್‌ ಕಂಪನಿ ಕಚೇರಿ ಬಳಿ ಆಟೋ ನಿಂತಿತ್ತು. ಇನ್‌ಸ್ಪೆಕ್ಟರ್‌ ಮಂಜುನಾಥ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿಯಾಗಿದೆ. ಪರಿಣಾಮ ಆಟೋ ಗಾಜು ಮುರಿದು ಚಾಲಕ ನೂರ್‌ ಷರೀಫ್‌ ಕೈ ಮುರಿದಿದೆ. ಕಾರು ಚಾಲನೆ ವೇಳೆ ಮಂಜುನಾಥ ಅವರು ಮದ್ಯಪಾನ ಮಾಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಿಮ್ಮ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಘೋಷಣೆ: ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸೇರಿದ ಆಟೋ ಚಾಲಕರು ರಸ್ತೆಯಲ್ಲಿ ಕುಳಿತು, ಅಪಘಾತ ಮಾಡಿದ ಅಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಘೋಷಣೆ ಕೂಗಿದರು. ಅಧಿಕಾರಿ ಮಂಜುನಾಥ ಅವರ ಸುತ್ತುವರೆದ ಚಾಲಕರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಐಟಿ-ಬಿಟಿ ಕಚೇರಿಗಳ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಕೈಗಾರಿಕಾ ಭದ್ರತಾ ಪಡೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ರಸ್ತೆ ತಡೆ ಮಾಡುತ್ತಿದ್ದವರನ್ನು ತೆರವುಗೊಳಿಸಿದರು.