ಗೋಪಾಲ್‌ ಯಡಗೆರೆ

ಶಿವಮೊಗ್ಗ[ಜ.05]: ಜಗದ್ವಿಖ್ಯಾತ ಜೋಗ ಜಲಪಾತಕ್ಕೊಂದು ಹೊಸ ಆಕರ್ಷಣೆ, ಆಯಾಮ ನೀಡುವ ದೃಷ್ಟಿಯಿಂದ ಹಲವು ವರ್ಷಗಳಿಂದ ಕೇಳಿ ಬರುತ್ತಿರುವ ರೋಪ್‌ವೇ ಯೋಜನೆಯ ಕಾಮಗಾರಿ ಏಪ್ರಿಲ್‌ನಲ್ಲಿ ಆರಂಭವಾಗಲಿದೆ.

ಜೋಗ ಜಲಪಾತವನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಇನ್ನಷ್ಟುಆಕರ್ಷಿಸುವ ದೃಷ್ಟಿಯಿಂದ ಜೋಗ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಸುಮಾರು 28 ವರ್ಷಗಳಾಗಿದ್ದರೂ ಇದುವರೆಗೂ ಜೋಗವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಗುರುತಿಸುವ ಯಾವುದೇ ಮಹತ್ವದ ಕಾರ್ಯ ಇಲ್ಲಿ ನಡೆದಿಲ್ಲ. ಜಲಪಾತದವರೆಗಿನ ಮೆಟ್ಟಿಲು, ವೀಕ್ಷಣಾ ಸ್ಥಳದ ಅಭಿವೃದ್ಧಿ ಇನ್ನಿತರ ಸಾಮಾನ್ಯ ಕೆಲಸಗಳು ಮಾತ್ರ ಇದುವರೆಗೆ ಇಲ್ಲಿ ನಡೆದಿತ್ತು.

ಇದೀಗ ಜೋಗ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ರೋಪ್‌ವೇ ನಿರ್ಮಾಣಕ್ಕೆ ಮುಂದಾಗಿವೆ. ಜೋಗವನ್ನು ಕೇಂದ್ರವಾಗಿಟ್ಟುಕೊಂಡು ಪ್ರವಾಸೋದ್ಯಮಕ್ಕೆ ಇರುವ ಅವಕಾಶ ಬಳಸಿಕೊಳ್ಳಲು ನಿರ್ಧರಿಸಿರುವ ಸರ್ಕಾರ ಮೊದಲ ಹಂತದಲ್ಲಿ ರೋಪ್‌ವೇ, ಜಿಪ್‌ವೇ ನಿರ್ಮಾಣ ಸೇರಿದಂತೆ ಹತ್ತು ಹಲವು ಸಾಹಸ ಕ್ರೀಡೆ ಹಾಗೂ ಚಟುವಟಿಕೆಯನ್ನು ಆರಂಭಿಸಲು ಉದ್ದೇಶಿಸಿದೆ.

ಜೋಗದ ಪ್ರಕೃತಿ ಯಾತ್ರಿ ನಿವಾಸದಿಂದ ಕೆಪಿಸಿಸಿ ಗೆಸ್ಟ್‌ ಹೌಸ್‌ ತನಕ .59.5 ಲಕ್ಷ ರು. ವೆಚ್ಚದಲ್ಲಿ 500 ಮೀಟರ್‌ ತನಕ ರೋಪ್‌ ವೇ/ ಜಿಪ್‌ ವೇ ನಿರ್ಮಿಸಲು ಉದ್ದೇಶಿಸಲಾಗಿದೆ. ಬೆಂಗಳೂರು ಏವಿಯೇಷನ್‌ ಆ್ಯಂಡ್‌ ಸ್ಪೋಟ್ಸ್‌ರ್‍ ಎಂಟರ್‌ ಪ್ರೈಸಸ್‌ (ಬೇಸ್‌) ಎಂಬ ಸಂಸ್ಥೆ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ. ಜೋಗದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಸಿದ್ಧಪಡಿಸಲಾಗಿರುವ ಕ್ರಿಯಾ ಯೋಜನೆಯ ಭಾಗವಾಗಿ ಕ್ರೆಡಿಲ್‌ ಮೂಲಕ ಬೇಸ್‌ ಸಂಸ್ಥೆ ರೋಪ್‌ವೇ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಿದೆ.

ಒಂದು ಕಡೆಗೆ ಸಂಚಾರ:

ಜೋಗ ಜಲಪಾತದಷ್ಟೇ ಎತ್ತರದಲ್ಲಿ ಅಂದರೆ 900 ಅಡಿ ಎತ್ತರದ ಗೋಪುರ ನಿರ್ಮಿಸಿ ವಿದ್ಯುತ್‌ ಸಹಾಯವಿಲ್ಲದೆ ಕೇವಲ ಗುರುತ್ವಾಕರ್ಷಣೆ ಬಲದಿಂದ ಒಂದು ಕಡೆಯಿಂದ ಇನ್ನೊಂದು ಒಂದು ಕಡೆಗೆ ಮಾತ್ರ ರೋಪ್‌ವೇ ಸಂಚರಿಸುತ್ತದೆ. ಅಂದರೆ ಜಲಪಾತವನ್ನು ನೋಡುವ ಸ್ಥಳದ ಎಡ ಭಾಗದಲ್ಲಿರುವ ಯಾತ್ರಿ ನಿವಾಸದ ಭಾಗದಿಂದ ಪ್ರವಾಸಿಗರ ಬಲಭಾಗದ ಕಡೆಗೆ ಈ ರೋಪ್‌ವೇ ಚಲಿಸುತ್ತದೆ. ಹೀಗೆ ರೋಪ್‌ವೇ ನಲ್ಲಿ ಸಾಗುವಾಗ ಜೋಗ ಜಲಪಾತವನ್ನು ವೀಕ್ಷಿಸಬಹುದಲ್ಲದೆ, ರುದ್ರರಮಣೀಯ ಅನುಭವ ಕೂಡ ಸಿಗುತ್ತದೆ. ಸದ್ಯಕ್ಕೆ ಹೊಟ್ಟೆಗೆ ಹಗ್ಗ ಕಟ್ಟಿಕೊಂಡು ಒಬ್ಬರು ಮಾತ್ರ ರೋಪ್‌ವೇನಲ್ಲಿ ಹೋಗುವ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರವಾಸಿಗರ ಸ್ಪಂದನೆ ಹಾಗೂ ಫಲಿತಾಂಶ ನೋಡಿಕೊಂಡು ಇಬ್ಬರು ಹೋಗುವಂತಹ ವ್ಯವಸ್ಥೆ ಒದಗಿಸಲು ಗಮನ ಹರಿಸುವ ಉದ್ದೇಶ ಹೊಂದಲಾಗಿದೆ.

ಜೋಗ ಜಲಪಾತದಷ್ಟೇ ಎತ್ತರದಲ್ಲಿ ಅಂದರೆ 900 ಅಡಿ ಎತ್ತರದ ಗೋಪುರ ನಿರ್ಮಿಸಿ ವಿದ್ಯುತ್‌ ಸಹಾಯವಿಲ್ಲದೆ ಕೇವಲ ಗುರುತ್ವಾಕರ್ಷಣೆ ಬಲದಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಮಾತ್ರ ರೋಪ್‌ವೇ ಸಂಚರಿಸುತ್ತದೆ. ಕಾಮಗಾರಿ ಏಪ್ರಿಲ್‌ನಲ್ಲಿ ಆರಂಭಗೊಳ್ಳಲಿದ್ದು ಮಳೆಗಾಲ ಆರಂಭಕ್ಕೂ ಮೊದಲು ಮುಗಿಯಲಿದೆ.

-ಎಚ್‌.ಎಸ್‌.ರಾಮಕೃಷ್ಣ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ