Asianet Suvarna News Asianet Suvarna News

ಅಂಜನಾದ್ರಿಗೆ ಕೇಂದ್ರದಿಂದಲೇ ರೋಪ್ ವೇ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ರೋಪ್ ವೇ ನಿರ್ಮಾಣಕ್ಕೆ ವಿರೋಧವೂ ವ್ಯಕ್ತವಾಯಿತು ಮತ್ತು ನಿರ್ಮಾಣ ಮಾಡಲು ಮುಂದೆ ಬಂದವರ ಪ್ರಸ್ತಾವನೆಯೂ ಅಷ್ಟಾಗಿ ಸಮರ್ಪಕವಾಗಿ ಇಲ್ಲದೆ ಇರುವುದರಿಂದ ಇದಕ್ಕೆ ಅನುಮೋದನೆ ದೊರೆಯಲಿಲ್ಲ. ಹೀಗಾಗಿ, ಯೋಜನೆ ನನೆಗುದಿಗೆ ಬಿದ್ದಿತು. ಇದಾದ ಮೇಲೆ ಬಿಜೆಪಿ ಸರ್ಕಾರದಲ್ಲಿ ಬಜೆಟ್ ನಲ್ಲಿ ₹100 ಕೋಟಿ ಘೋಷಣೆಯಾದಾಗ ಅದರಲ್ಲಿ ರೋಪ್ ನಿರ್ಮಾಣವೂ ಒಳಗೊಂಡಿತ್ತು. ಆದರೆ ಅದು ಸಹ ಕಾರ್ಯಗತವಾಗಲೇ ಇಲ್ಲ.

Rope Way from the Central Government to Anjanadri Hill Says Union Minister Nitin Gadkari grg
Author
First Published Feb 23, 2024, 11:20 PM IST

ಕೊಪ್ಪಳ(ಫೆ.23): ಅಂಜನಾದ್ರಿಗೆ ಕೇಂದ್ರ ಸರ್ಕಾರದಿಂದಲೇ ರೋಪ್‌ ವೇ ನಿರ್ಮಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಬೆಳಗಾವಿಯಲ್ಲಿ ಗುರುವಾರ ಘೋಷಿಸಿದ್ದು, ಇದರಿಂದ ಬಹು ವರ್ಷಗಳ ಈ ಬೇಡಿಕೆ ಶೀಘ್ರವೇ ಈಡೇರುವ ಸಾಧ್ಯತೆ ಕಂಡು ಬರುತ್ತಿದೆ. ಸಚಿವರ ಘೋಷಣೆ ಆಂಜನೇಯನ ಭಕ್ತರನ್ನು ಖುಷಿಗೊಳಿಸಿದೆ. ಎಂದೋ ಆಗಬೇಕಾಗಿದ್ದ ಈ ಯೋಜನೆಗೆ ಈಗ ಕಾಲ ಕೂಡಿ ಬಂದಿದ್ದು ಶ್ಲಾಘನೀಯ ಎಂದು ಬಣ್ಣಿಸುತ್ತಿದ್ದಾರೆ.

ಏನಿದು ರೋಪ್ ವೇ?: 

ಅಂಜನಾದ್ರಿ ಬೆಟ್ಟ ಏರಲು ಸುಮಾರು 575 ಮೆಟ್ಟಿಲು ಹತ್ತಬೇಕು. ಇತ್ತೀಚೆಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಇಷ್ಟೊಂದು ಮೆಟ್ಟಿಲು ಹತ್ತುವುದೇ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಇಳಿ ವಯಸ್ಸಿನವರು ಹತ್ತಲು ಹೆಣಗಾಡಬೇಕಾಗಿದೆ. ವಿಶೇಷ ದಿನಗಳಲ್ಲಿ ಲಕ್ಷ ಲಕ್ಷ ಭಕ್ತರು ಆಗಮಿಸುವುದರಿಂದ ಇರುವ ಮೆಟ್ಟಿಲುಗಳನ್ನು ಏರಲು ಆಗದೇ ಸುತ್ತಮುತ್ತಲ ಬೆಟ್ಟದಲ್ಲಿ ಎಲ್ಲೆಂದರಲ್ಲಿ ಭಕ್ತರು ಏರುತ್ತಿದ್ದರು. ಹೀಗಾಗಿ, ಇಲ್ಲಿ ರೋಪ್ ವೇ ನಿರ್ಮಾಣವಾಗಬೇಕು ಎನ್ನುವ ಬೇಡಿಕೆ ಕೇಳಿ ಬಂದಿತ್ತು.

ಕರ್ನಾಟಕದಲ್ಲಿ ಸಿಕ್ತು ಶ್ರೀರಾಮನ ಮತ್ತೊಂದು ಕುರುಹು: ತ್ರೇತಾಯುಗದಲ್ಲಿ ರಾಮ ಬಳಸಿದ ಬೃಹತ್ ಬಾಣ ಪತ್ತೆ

ರಾಜ್ಯಕ್ಕೆ ಪ್ರಸ್ತಾಪನೆ:

ಈ ಕುರಿತು ರಾಜ್ಯ ಸರ್ಕಾರ ರೋಪ್ ವೇ ನಿರ್ಮಾಣಕ್ಕೂ ಮುಂದಾಯಿತು. ಜಿಲ್ಲಾಡಳಿತವೂ ಖಾಸಗಿ ಸಹಭಾಗಿತ್ವದಲ್ಲಿ ರೋಪ್ ವೇ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಅದು ಕಾರ್ಯಗತವಾಗಲೇ ಇಲ್ಲ.

ವಿರೋಧ:

ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ರೋಪ್ ವೇ ನಿರ್ಮಾಣಕ್ಕೆ ವಿರೋಧವೂ ವ್ಯಕ್ತವಾಯಿತು ಮತ್ತು ನಿರ್ಮಾಣ ಮಾಡಲು ಮುಂದೆ ಬಂದವರ ಪ್ರಸ್ತಾವನೆಯೂ ಅಷ್ಟಾಗಿ ಸಮರ್ಪಕವಾಗಿ ಇಲ್ಲದೆ ಇರುವುದರಿಂದ ಇದಕ್ಕೆ ಅನುಮೋದನೆ ದೊರೆಯಲಿಲ್ಲ. ಹೀಗಾಗಿ, ಯೋಜನೆ ನನೆಗುದಿಗೆ ಬಿದ್ದಿತು. ಇದಾದ ಮೇಲೆ ಬಿಜೆಪಿ ಸರ್ಕಾರದಲ್ಲಿ ಬಜೆಟ್ ನಲ್ಲಿ ₹100 ಕೋಟಿ ಘೋಷಣೆಯಾದಾಗ ಅದರಲ್ಲಿ ರೋಪ್ ನಿರ್ಮಾಣವೂ ಒಳಗೊಂಡಿತ್ತು. ಆದರೆ ಅದು ಸಹ ಕಾರ್ಯಗತವಾಗಲೇ ಇಲ್ಲ.

ಕೇಂದ್ರ ಅಸ್ತು: 

ಸಂಸದ ಸಂಗಣ್ಣ ಕರಡಿ ಅಂಜನಾದ್ರಿಗೆ ಆಗಮಿಸುವ ಭಕ್ತರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಗಂಗಾವತಿ ರೈಲ್ವೆ ನಿಲ್ದಾಣದಿಂದ 10 ಕಿ.ಮೀ. ರೋಪ್ ವೇ ನಿರ್ಮಾಣಕ್ಕೆ ಮತ್ತು ಅಂಜನಾದ್ರಿ ಬೆಟ್ಟ ಏರಲು ರೋಪ್ ವೇ ನಿರ್ಮಾಣಕ್ಕೆ ಪ್ರತ್ಯೇಕವಾಗಿ ಪ್ರಸ್ತಾವನೆ ಸಲ್ಲಿಸಿ, ಕೇಂದ್ರ ಸಚಿವರ ಮನವೊಲಿಸಲು ಶತಾಯಗತಾಯ ಪ್ರಯತ್ನಿಸಿದರು.

ಶ್ರೀರಾಮ ಜನ್ಮಸ್ಥಳ ಅಯೋಧ್ಯೆ ಬೆನ್ನಲ್ಲೇ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯೂ ವಿಸ್ಮಯ ತಾಣವಾಗುತ್ತಿದೆ!

ಇದೀಗ ಕೇಂದ್ರ ಸರ್ಕಾರದ ವತಿಯಿಂದಲೇ ಅಂಜನಾದ್ರಿಯಲ್ಲಿ ರೋಪ್‌ ವೇ ನಿರ್ಮಾಣ ಮಾಡುವುದಾಗಿ ಸಚಿವ ನಿತಿನ್‌ ಗಡ್ಕರಿ ಘೋಷಿಸಿದ್ದಾರೆ. ಕೇಂದ್ರ ಸರ್ಕಾರವೇ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವುದರಿಂದ ಅನುದಾನದ ಸಮಸ್ಯೆ ಆಗದು ಎಂದು ಹೇಳಲಾಗಿದೆ. ಆದಷ್ಟು ಬೇಗನೆ ಈ ಯೋಜನೆ ಕಾರ್ಯಗತವಾಗಬೇಕೆಂಬ ಒತ್ತಾಯ ಸಾರ್ವಜನಿಕರದ್ದು.

ಅಂಜನಾದ್ರಿಗೆ ರೋಪ್ ವೇ ನಿರ್ಮಾಣಕ್ಕೆ ಕೇಂದ್ರ ಸಚಿವರು ಘೋಷಿಸಿದ್ದಾರೆ. ಕೇಂದ್ರ ಸರ್ಕಾರವೇ ಪೂರ್ಣ ಹೊಣೆ ಹೊರಲಿದೆ. ಸುಮಾರು ₹100 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎನ್ನುತ್ತಾರೆ ಸಂಸದ ಸಂಗಣ್ಣ ಕರಡಿ.

Follow Us:
Download App:
  • android
  • ios