ಕೆ.ಆರ್‌.ಪೇಟೆ[ಸೆ.10]: ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಕಳಚಿ ಬಿದ್ದಿದ್ದ ಚಿನ್ನದ ಸರವನ್ನು ರೋಬೋ ಸಹಾಯದಿಂದ ಹೊರತೆಗೆದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಕತ್ತರಘಟ್ಟಗ್ರಾಮದಲ್ಲಿ ಸೋಮವಾರ ನಡೆದಿದೆ.

ಕೆ.ಆರ್‌.ಪೇಟೆಯ ರೈತ ವಿಜ್ಞಾನಿ ಮಂಜೇಗೌಡರು ಅನ್ವೇಷಿಸಿದ ರೋಬೋದಿಂದ ಕೆರೆಯ ನೀರಿನಾಳದಲ್ಲಿ ಬಿದ್ದಿದ್ದ ಚಿನ್ನದ ಸರವನ್ನು ಪತ್ತೆ ಮಾಡಲಾಗಿದೆ. ಕತ್ತರಘಟ್ಟಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನನ್ನು ಭಾನುವಾರ ರಾತ್ರಿ ವಿಸರ್ಜನೆ ಮಾಡುತ್ತಿದ್ದಾಗ ಮಂಜಣ್ಣ ಎಂಬುವವರಿಗೆ ಸೇರಿದ 25 ಗ್ರಾಂ. ಚಿನ್ನದ ಸರ ಕೆರೆಯಲ್ಲಿ ಕಳಚಿ ಬಿದ್ದಿತ್ತು. ಚಿನ್ನದ ಸರವನ್ನು ಹುಡುಕುವುದು ಹೇಗೆ ಎಂದು ಯೋಚಿಸುತ್ತಿದ್ದಾಗ, ಮಂಜೇಗೌಡರ ರೋಬೋ ನೆನಪಿಗೆ ಬಂದು ಅದರ ಮೊರೆ ಹೋಗಲಾಯಿತು. ಸೋಮವಾರದಂದು ಮಂಜೇಗೌಡರ ‘ಅನ್ವೇಷಕ ರೋಬೋ’ವನ್ನು ಕೆರೆಯ ನೀರಿನಾಳದಲ್ಲಿ ಬಿಟ್ಟು ಚಿನ್ನ ಪತ್ತೆ ಕಾರ್ಯಾಚರಣೆ ನಡೆಸಲಾಯಿತು. ನೀರಲ್ಲಿ ಬಿದ್ದಿದ್ದ ಚಿನ್ನದ ಸರವನ್ನು ಕೆರೆಯಾಳದಲ್ಲಿ ಪತ್ತೆ ಮಾಡಿದ ರೋಬೋ, ಅದನ್ನು ಯಶಸ್ವಿಯಾಗಿ ಹೊರತಂದಿದೆ.

ನೀರಿನಲ್ಲಿ ಮುಳುಗಿದವರನ್ನು ಪತ್ತೆ ಹಚ್ಚಲು ಮಂಜೇಗೌಡರು ರೋಬೋವೊಂದನ್ನು ಅನ್ವೇಷಿಸಿದ್ದರು. ಇದೀಗ ರೋಬೋವನ್ನು ಬಳಸಿ ಕೆರೆಯಾಳದಲ್ಲಿ ಬಿದ್ದಿದ್ದ ಚಿನ್ನವನ್ನು ತೆಗೆದು, ವಾರಸುದಾರ ಮಂಜಣ್ಣರಿಗೆ ನೀಡಲಾಗಿದೆ. ಈ ರೋಬೋ ಕಾರ್ಯಾಚರಣೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೋಬೋವನ್ನು ಬಳಸಿ ಈ ಹಿಂದೆಯೂ ಕಾರ್ಯಾಚರಣೆ ನಡೆಸಲಾಗಿತ್ತು.