ಲಿಂಗಸುಗೂರು(ಸೆ.28): ತಾಲೂಕಿನ ಹಟ್ಟಿ ಪಟ್ಟಣದ ಸುತ್ತಲಿನ ಗ್ರಾಮಗಳಿಂದ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುವ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳು ಖಾಸಗಿ ವ್ಯಾನ್‌ಗಳಿಗೆ ಜೋತು ಬಿದ್ದು ಬರುತ್ತಿದ್ದಾರೆ. ಯಲಗಟ್ಟಾ, ವಂದಲಿ, ಗೆಜ್ಜಲಗಟ್ಟಾ, ಗೌಡೂರು ವೀರಾಪೂರ, ನಿಲೋಗಲ್‌, ವಂದಲಿ ಹೊಸುರು, ಸೇರಿದಂತೆ ಪಟ್ಟಣದ ಸುತ್ತಲಿನ ಹಳ್ಳಿಗಳಿಂದ ಸುಮಾರು 3 ಸಾವಿರ ವಿದ್ಯಾರ್ಥಿಗಳು ಕಲಿಕೆಗಾಗಿ ಬರುತ್ತಾರೆ. 

ಬಸ್‌ ಸೌಕರ್ಯವಿಲ್ಲದ ಕಾರಣ ಬಹುತೇಕರು ಖಾಸಗಿ ಟಾಟಾ ಏಸ್‌, ಆ್ಯಪೆ ಆಟೋ, ಆಟೋಗಳನ್ನೆ ಅವಲಂಬಿಸಿದ್ದಾರೆ. ಖಾಸಗಿ ಚಾಲಕರು ಹೆಚ್ಚು ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಬರುತ್ತಿದ್ದಾರೆ. ಅಧಿಕ ಹಣ ಪಡೆದು ಎರಡು ವಾಹನಗಳಲ್ಲಿ ಬರುವ ವಿದ್ಯಾರ್ಥಿಗಳ ಸಂಖ್ಯೆಯಷ್ಟು ಒಂದೆ ವಾಹನದಲ್ಲಿ ಕರೆದುಕೊಂಡು ಬರುತ್ತಿದ್ದಾರೆ.

ಹದಗೆಟ್ಟ ರಸ್ತೆಗಳು

ಸುತ್ತಲಿನ ಹಳ್ಳಿಗಳ ರಸ್ತೆಗಳು ಹದಗೆಟ್ಟಿವೆ. ಹಲವೆಡೆ ಸೇತುವೆಗಳು ಬರುತ್ತವೆ. ಸೇತುವೆ ಮೇಲೆ ವಾಹನಕ್ಕೆ ಹಿಂದೆ ಜೋತುಬಿದ್ದು ಹೋಗುವ ವಿದ್ಯಾರ್ಥಿಗಳು ಜೀವ ಕೈಯಲ್ಲಿಡಿದು ಹೋಗುತ್ತಿದ್ದಾರೆ. ಇಷ್ಟೆಲ್ಲಾ ಆದರು ಪಾಲಕರು-ಶಿಕ್ಷಣ ಇಲಾಖೆ ಗಮನಹರಿಸಿಲ್ಲ.

ಸೀಟ್‌ಲೇವೆಲ್‌ನಷ್ಟೆ ವಿದ್ಯಾರ್ಥಿಗಳನ್ನು ಕರೆದೋಯ್ಯಬೇಕು, ಹೆಚ್ಚಿನ ವಿದ್ಯಾರ್ಥಿಗಳನ್ನು ಕೂರಿಸಬಾರದು ಎಂಬ ನಿಯಮವಿದ್ದರು ಸಹಿತ ಖಾಸಗಿ ವಾಹನ ಮಾಲೀಕ-ಚಾಲಕರು ನಿಯಮಗಳನ್ನು ಗಾಳಿಗೆ ತೂರಿ ಅನುಮತಿಯಿಲ್ಲದೆ ವಾಹನಗಳನ್ನು ಓಡಿಸುತ್ತಿರುವದಕ್ಕೆ ಕಡಿವಾಣ ಹಾಕಬೇಕಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಈ ಬಗ್ಗೆ ಮಾತನಾಡಿದ ಯಮನೂರ್ ನಾಯಕ ಅವರು, ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ವಾಹನದವರು ಎರ್ರಾಬಿರ್ರಿ ಮಕ್ಕಳನ್ನು ತುಂಬಿ ವಾಹನ ಚಲಾಯಿಸುತ್ತಿದ್ದಾರೆ. ಪಾಲಕರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಲಾ ಮುಖ್ಯಸ್ಥರು ಗಮನಿಸಬೇಕಿದೆ ಎಂದು ಹೇಳಿದ್ದಾರೆ. 

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಹಟ್ಟಿ ವಲಯ ಶಿಕ್ಷಣ ಸಂಯೋಜಕ ಚಂದ್ರಶೇಖರಯ್ಯ ನಂದಿಕೋಲಮಠ ಅವರು, ವಾಹನದಲ್ಲಿ ಅಧಿಕ ಮಕ್ಕಳನ್ನು ಕರೆದೊಯ್ಯುವುದು ತಪ್ಪು. ನಾಳೆ ಇಲಾಖೆ ಸಭೆಯಿದ್ದು, ಸದರಿ ವಿಷಯವನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ಕಡಿವಾಣ ಹಾಕಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.