ಬೆಂಗಳೂರು(ಅ.31): ರಾಜ್ಯದಲ್ಲಿ ಜಾರಿಗೊಳಿಸಿರುವ ಭೂ ಸುಧಾರಣೆ ಕಾಯ್ದೆಯಿಂದ ಕಪ್ಪು ಹಣವನ್ನು ಸಕ್ರಮಗೊಳಿಸಲು ಭ್ರಷ್ಟರಿಗೆ ದಾರಿ ಮಾಡಿಕೊಡಲಾಗಿದೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಶೋಕ್‌ ಬಿ. ಹಿಂಚಗೇರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಭಾರತೀಯ ಕಿಸಾನ್‌ ಸಂಘ, ಕರ್ನಾಟಕ ಪ್ರದೇಶ ಮತ್ತು ಭಾರತೀಯ ಕೃಷಿ ಆರ್ಥಿಕ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ‘ಇತ್ತೀಚಿನ ಕೃಷಿ ಕಾನೂನುಗಳ ಸಾಧಕ-ಬಾಧಕಗಳು’ ಎಂಬ ವಿಷಯ ಕುರಿತು ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಬೇರೆ ಎಲ್ಲಾ ಉದ್ಯಮಗಳಿಗೆ ತಮ್ಮ ಉತ್ಪನ್ನಗಳಿಗೆ ಬೆಲೆ ನಿರ್ಧರಿಸುವ ಹಕ್ಕಿದೆ. ರೈತರಿಗೆ ಮಾತ್ರ ಅಂತರ ಹಕ್ಕಿಲ್ಲ. ಈ ಪರಿಸ್ಥಿತಿ ಬದಲಾಗಬೇಕಿದೆ. ಇದರ ಜೊತೆಗೆ ಕೃಷಿ ಕಾನೂನುಗಳ ಬಗ್ಗೆ ಸಮಗ್ರ ಚಿಂತನೆ ಅಗತ್ಯವಿದೆ ಎಂದು ತಿಳಿಸಿದರು.

ಕೃಷಿ ಮಸೂದೆಯಿಂದ ವಿಪಕ್ಷದ ಕಪ್ಪುಹಣ ಮೂಲ ಬಂದ್: ಮೋದಿ ವಾಗ್ದಾಳಿ!

ಆರ್ಥಿಕ ತಜ್ಞ ಡಾ. ಸಮೀರ್‌ ಕಾಗಲ್ಕರ್‌ ಮಾತನಾಡಿ, ಗುತ್ತಿಗೆ ಆಧಾರದ ಕೃಷಿಯಲ್ಲಿ ಖರ್ಚು ಮತ್ತು ಲಾಭ ಸೇರಿಸಿ ರೈತ ಬೆಲೆ ನಿಗದಿ ಮಾಡಬಹುದು. ಬೆಲೆ ಅನಿಶ್ಚಿತತೆ ಬಿಕ್ಕಟ್ಟು ಎದುರಾಗುವುದಿಲ್ಲ. ಇದರಿಂದ ಉತ್ಪತ್ತಿ ಪ್ರಮಾಣ ಕೂಡ ಹೆಚ್ಚಳವಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಕಾನೂನು ಸೂಕ್ತವಾಗಿದೆ ಎಂದರು.

ನಿವೃತ್ತ ಪ್ರಾಧ್ಯಾಪಕ ವೆಂಕಟರೆಡ್ಡಿ ಮಾತನಾಡಿ, ಹಳೆ ಮತ್ತು ಹೊಸ ಕಾನೂನಿನಲ್ಲಿ ತುಂಬಾ ವ್ಯತ್ಯಾಸವಿಲ್ಲದಿರುವುದರಿಂದ ನೂತನ ಕಾನೂನು ರೈತರಿಗೆ ಒಳ್ಳೆಯದೇ ಆಗಲಿದೆ. ವ್ಯಾಜ್ಯ ತೀರ್ಮಾನ ಮಂಡಳಿಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇರಬೇಕು ಎಂಬ ನಿಯಮ ಸೇರ್ಪಡೆ ಮಾಡಬೇಕು. ಆಫ್‌ಲೈನ್‌ ಟ್ರೇಡಿಂಗ್‌ನ ವ್ಯವಹಾರದಲ್ಲಿ ಬೆಲೆ ನಿಗದಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಟಿ.ಎನ್‌. ವೆಂಕಟರೆಡ್ಡಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ.ಎನ್‌. ಪ್ರಕಾಶ್‌ ಕಮ್ಮರಡಿ, ಕೃಷಿ ನೀತಿ ತಜ್ಞರಾದ ಪ್ರದೀಪ್‌ ಪೂವಯ್ಯ ಉಪಸ್ಥಿತರಿದ್ದರು.