ರಾಜೀವ್‌ಗಾಂಧಿ ವಿವಿ ನಿವೃತ್ತ ಕುಲಸಚಿವ ಅಶೋಕ್ ಆತ್ಮಹತ್ಯೆ
ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣು| ಅಶೋಕ್ ಕುಮಾರ್ ಅವರ ಜೇಬಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಬರೆದ ಡೆತ್‌ನೋಟ್ ಪತ್ತೆ| ನನ್ನ ಸಾವಿಗೆ ನಾನೇ ಕಾರಣ. ನನ್ನ ದೇಹ ಮತ್ತು ಕಣ್ಣನ್ನು ಆದಷ್ಟು ಬೇಗ ದಾನ ಮಾಡು ಅಜಯ್ ಎಂದು ಉಲ್ಲೇಖಿಸಿದ್ದ ಅಶೋಕ್ ಕುಮಾರ್|
ಬೆಂಗಳೂರು(ನ.09): ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ (ಮೌಲ್ಯಮಾಪನ) ಎನ್.ಎಸ್. ಅಶೋಕ್‌ಕುಮಾರ್ (64) ಶನಿವಾರ ತಡರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನನ್ನ ಸಾವಿಗೆ ತಾನೇ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟಿದ್ದಾರೆ. ಈ ಮರಣ ಪತ್ರದಲ್ಲಿ ಯಾರೊಬ್ಬರ ಮೇಲೂ ಆರೋಪ ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸಿಲ್ಕ್‌ಬೋರ್ಡ್‌ನಲ್ಲಿ ಅಶೋಕ್ ಕುಮಾರ್ ಅವರು ಪತ್ನಿಯೊಂದಿಗೆ ನಿವೃತ್ತ ಜೀವನ ಕಳೆಯುತ್ತಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಅವರು, ಕೆಲ ಕಾಲ ರಾಜೀವ್ ಗಾಂಧಿ ವಿಶ್ವ ವಿದ್ಯಾಲಯದ ಕುಲಸಚಿವರಾಗಿದ್ದರು.
ಅಶೋಕ್ ಕುಮಾರ್ ಅವರ ಮಕ್ಕಳು ಜೆ.ಪಿ.ನಗರದ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಶನಿವಾರ ರಾತ್ರಿ ದಂಪತಿ ಊಟ ಮಾಡಿ ಸಾಕಷ್ಟು ಸಮಯ ಮಾತನಾಡಿಕೊಂಡು ಕುಳಿತ್ತಿದ್ದರು. ಇದಾದ ಮೇಲೆ ಪತ್ನಿ ಮಲಗಿದ್ದು ಅಶೋಕ್ ಕುಮಾರ್, ಓದುವ ಕೊಠಡಿಗೆ ಹೋಗಿದ್ದರು. ಭಾನುವಾರ ಬೆಳಗ್ಗೆ 6.45ರಲ್ಲಿ ಪತಿ ಹೊರಗೆ ಬಾರದೆ ಇದ್ದದನ್ನು ಕಂಡು ಪತ್ನಿ, ಬಾಗಿಲು ತಟ್ಟಿದ್ದರೂ ಹೊರ ಬಂದಿರಲಿಲ್ಲ. ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.
ಆನ್‌ಲೈನ್ ಕ್ರೆಡಿಟ್ ಆಪ್ ಸಾಲ ತೀರಿಸಲಾಗದೆ ನೇಣಿಗೆ ಶರಣಾದ ಯುವತಿ
ದೇಹ, ನೇತ್ರ ದಾನ ಮಾಡಿ
ಅಶೋಕ್ ಕುಮಾರ್ ಅವರ ಜೇಬಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಬರೆದ ಡೆತ್‌ನೋಟ್ ಪತ್ತೆಯಾಗಿತ್ತು. ಇದರಲ್ಲಿ ‘ನನ್ನ ಸಾವಿಗೆ ನಾನೇ ಕಾರಣ. ನನ್ನ ದೇಹ ಮತ್ತು ಕಣ್ಣನ್ನು ಆದಷ್ಟು ಬೇಗ ದಾನ ಮಾಡು ಅಜಯ್ ಎಂದು ಉಲ್ಲೇಖಿಸಿದ್ದರು.
ಕುಟುಂಬ ಸದಸ್ಯರ ಒಪ್ಪಿಗೆ ಬೇರೆಗೆ ಲಯನ್ಸ್ ಕ್ಲಬ್‌ಗೆ ನೇತ್ರಾದಾನ ಮಾಡಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಕಾರಣ ದೇಹ ದಾನ ಮಾಡಲು ಸಾಧ್ಯವಾಗಿಲ್ಲ. ಅಶೋಕ್‌ಕುಮಾರ್, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಟುಂಬ ಸದಸ್ಯರು ಸಹ ಯಾವುದೇ ಆರೋಪ ಮಾಡಿಲ್ಲ. ಈ ಕುರಿತು ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.