ಕೊಪ್ಪಳ(ಅ.30): ಅಂತೂ, ಇಂತು ಕೊಪ್ಪಳ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಎರಡು ವರ್ಷಗಳ ಬಳಿಕ ನಡೆಯಿತಾದರೂ ಫಲಿತಾಂಶ ಘೋಷಿಸಲು ಇನ್ನೂ ಒಂದು ತಿಂಗಳ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ, ಗೆದ್ದವರೂ ಬೀಗದೆ, ಸೋತವರು ಕುಗ್ಗದಂತಾಗಿದೆ.

ಇಲ್ಲಿಯ ನಗರಸಭೆಯ ಅಧ್ಯಕ್ಷೆಯಾಗಿ ಕಾಂಗ್ರೆಸ್‌ ಪಕ್ಷದ ಲತಾ ಗವಿಸಿದ್ದಪ್ಪ ಚಿನ್ನೂರು ಹಾಗೂ ಉಪಧ್ಯಕ್ಷೆಯಾಗಿ ಜೆಡಿಎಸ್‌ ಪಕ್ಷದ ಜರೀನಾ ಬೇಗಂ (ಈಗಾಗಲೇ ಕಾಂಗ್ರೆಸ್‌ ಪಕ್ಷದೊಂದಿಗೆ ಬಹಿರಂಗವಾಹಿಯೇ ಗುರುತಿಸಿಕೊಂಡಿದ್ದಾರೆ) ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕೊಪ್ಪಳ ನರಸಭೆಯ ಮೇಲೆ ಮತ್ತೆ ಕಾಂಗ್ರೆಸ್‌ ಬಾವುಟ ಹಾರಾಡಿದಂತೆ ಆಗಿದೆ.

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ಇಬ್ಬರಿಗೂ ತಲಾ 21 ಮತಗಳು ಬಂದಿವೆ. ಈ ಪೈಕಿ ಕಾಂಗ್ರೆಸ್‌ ಪಕ್ಷದ 15, ಪಕ್ಷೇತರ 3 ಹಾಗೂ ಜೆಡಿಎಸ್‌ 2 ಹಾಗೂ ಶಾಸಕ ರಾಘ​ವೇಂದ್ರ ಹಿಟ್ನಾ​ಳ ಮತ ಒಳಗೊಂಡು 21 ಮತಗಳಾಗಿವೆ.
ಇನ್ನು ಬಿಜೆ​ಪಿ​ಯಿಂದ ಸ್ಪರ್ಧೆ ಮಾಡಿದ್ದ ವಿದ್ಯಾ ಹೆಸರೂರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ನಾಗರತ್ನಾ ಶಿವಕುಮಾರ ಕುಕನೂರು ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧೆ ಮಾಡಿ ತಲಾ 12 ಮತಗಳನ್ನು ಪಡೆದರು. ಇವರಿಗೆ ಬಿಜೆಪಿ 10, ಪಕ್ಷೇತರ ಓರ್ವ ಸದಸ್ಯ ಹಾಗೂ ಸಂಸದ ಸಂಗಣ್ಣ ಕರಡಿ ಅವರ ಮತಗಳು ಬಂದಿವೆ ಎನ್ನುವುದೇ ಬಿಜೆಪಿಗೆ ಸಮಾಧಾನದ ಸಂಗತಿ.

ಅಧಿಕಾರ ಹಿಡಿಯಲು ಕಾಂಗ್ರೆಸ್‌ ತೆರೆಮರೆ ಕಸರತ್ತು: ಬಿಜೆಪಿ ಸದಸ್ಯೆ ಕಿಡ್ನ್ಯಾಪ್‌?

ಘೋಷಣೆ ಮಾಡದಲಿಲ್ಲ:

ಚುನಾವಣೆ ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಅವರು ಫಲಿತಾಂಶ ಘೋಷಣೆ ಮಾಡದೆ ಹಾಗೂ ಮಾಧ್ಯಮಕ್ಕೆ ಹೇಳಿಕೆಯನ್ನು ನೀಡದೆ ಹೊರಟು ಹೋದರು.
ಸುಪ್ರೀಂ ಕೋರ್ಟ್‌ ನಿರ್ದೇಶನ ಇರುವುದರಿಂದ ಯಾವುದೇ ಮಾಹಿತಿ ನೀಡದೆಯೇ ಅವರು ತೆರಳಿದರು. ಆದರೆ, ಇದೇ ಮಾಹಿತಿಯನ್ನು ಶಾಸಕ ಹಾಗೂ ಸಂಸದರು ನೀಡಿದರು.

ಭಾರಿ ಹೈಡ್ರಾಮಾ:

ಸ್ಪರ್ಧಾಳುಗಳು ಪೈಪೋಟಿ ಇದ್ದಿದ್ದರಿಂದ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದೇ ದೊಡ್ಡ ಸವಾಲು ಆಗಿದ್ದ ವೇಳೆ ಕಾಂಗ್ರೆಸ್‌ ನಾಯಕರು ಇಬ್ಬರಿಗೆ ತಲಾ ಹದಿನೈದು ತಿಂಗಳು ಅಧಿಕಾರ ಹಂಚಿಕೆ ಮಾಡಿದ್ದಾರೆ. ಲಭ್ಯ ಮಾಹಿತಿಯ ಪ್ರಕಾರ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಲತಾ ಗವಿಸಿದ್ದಪ್ಪ ಚಿನ್ನೂರು ಮೊದಲ ಹದಿನೈದು ತಿಂಗಳು ಹಾಗೂ ಎರಡನೇ ಅವಧಿಯ 15 ತಿಂಗಳಿಗೆ ಶಿವಗಂಗಮ್ಮ ಶಿವರಡ್ಡಿ ಭೂಮಕ್ಕನವರು ಅವರನ್ನು ನಿಗದಿ ಮಾಡಲಾಗಿದೆ ಎನ್ನಲಾಗಿದೆ.
ಇನ್ನು ಉಪಾಧ್ಯಕ್ಷ ಸ್ಥಾನವನ್ನು ಸಹ ಹಂಚಿಕೆ ಮಾಡಲಾಗಿದ್ದು, ಹದಿನೈದು ತಿಂಗಳ ಬಳಿಕ ವೆಲ್ಫೇರ್‌ ಪಾರ್ಟಿಯ ಸದಸ್ಯೆ ಸಬೀಯಾ ಪಾಟೀಲ್‌ ಅವರಿಗೆ ಉಪಾಧ್ಯಕ್ಷ ಪಟ್ಟಸಿಗಲಿದೆ ಎನ್ನಲಾಗಿದೆ.

ಅಧ್ಯಕ್ಷೆ, ಉಪಾಧ್ಯಕ್ಷ ಆಯ್ಕೆ ಮುಗಿಯುತ್ತಿದ್ದಂತೆ, ಫಲಿತಾಂಶ ಘೋಷಣೆಯಾಗದಿದ್ದರೂ ಕಾಂಗ್ರೆಸ್‌ ಪಕ್ಷದವರು ವಿಜಯೋತ್ಸವ ಆಚರಣೆ ಮಾಡಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು, ಸಿಹಿ ಹಂಚಿ, ವಾದ್ಯಕ್ಕೆ ಹೆಜ್ಜೆ ಹಾಕಿದರು.
ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಲತಾ ಗವಿಸಿದ್ದಪ್ಪ ಚಿನ್ನೂರು ಹಾಗೂ ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಪಕ್ಷದ ಜರೀನಾಬೇಗಂ ಅವರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಘೋಷಣೆ ಮಾಡಿಲ್ಲ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ. 

ಈಗ ಚುನಾವಣೆ ನಡೆದಿದ್ದರೂ ಫಲಿತಾಂಶ ಘೋಷಣೆಯಾಗಿಲ್ಲ. ಮುಂದೇನಾಗುತ್ತದೆ ಎಂದು ಕಾದು ನೋಡುವುದೊಂದೆ ನಮ್ಮ ಮುಂದಿರುವ ದಾರಿ. ಕೋರ್ಟ್‌ ಏನು ಮಾಡುತ್ತದೆ ಎಂದು ಈಗಲೇ ಹೇಳಲು ಆಗದು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ. 

ನಮಗೆ ಅತೀವ ಸಂತೋಷವಾಗಿದೆ. ಪಕ್ಷದ ನಾಯಕರು ಸೇರಿದಂತೆ ಎಲ್ಲರೂ ಒಗ್ಗೂಡಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಪಕ್ಷದ ನಾಯಕರ ಅಣತಿಯಂತೆ ನಾನು ಕೆಲಸ ಮಾಡುತ್ತೇನೆ ಎಂದು ಲತಾ ಗವಿಸಿದ್ದಪ್ಪ ಚಿನ್ನೂರು (ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರೂ ಅಧಿಕೃತವಿಲ್ಲ) ತಿಳಿಸಿದ್ದಾರೆ.

ನಮ್ಮನ್ನು ಆಯ್ಕೆ ಮಾಡಿದ ಎಲ್ಲರಿಗೂ ನಾನು ಋುಣಿಯಾಗಿದ್ದೇನೆ. ಪಕ್ಷದ ನಾಯಕರು, ಹಿರಿಯರು ಸೇರಿ ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜರೀನಾ ಬೇಗಂ ಹೇಳಿದ್ದಾರೆ.