ಗೋಲ್ಡನ್ ಟೆಂಪಲ್ ಪ್ರವೇಶಕ್ಕಿನ್ನು ಅವಕಾಶ ನಿರ್ಬಂಧ
ಪ್ರಸಿದ್ಧ ಗೋಲ್ಡನ್ ಟೆಂಪಲ್ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಕುಶಾಲನಗರ (ಅ.29): ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ಬೈಲುಕೊಪ್ಪೆ ಗೋಲ್ಡನ್ ಟೆಂಪಲ್ ಕೇಂದ್ರಕ್ಕೆ ಪ್ರವಾಸಿಗರ ಭೇಟಿಗೆ ಡಿ. 26ರ ತನಕ ನಿರ್ಬಂಧ ಮುಂದುವರೆಸಲಾಗಿದೆ.
ಮೈಸೂರು ಜಿಲ್ಲೆ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಸೋಂಕು ಪ್ರಮಾಣ ಇನ್ನೂ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೋಲ್ಡನ್ ಟೆಂಪಲ್ ಆಡಳಿತ ಮಂಡಳಿ ತಿಳಿಸಿದೆ.
ರಾಜ್ಯದಲ್ಲಿ ಈಗಾಗಲೇ ಕೊರೋನಾ ಸೊಂಕು ಅಧಿಕ ಪ್ರಮಾಣದಲ್ಲಿಯೇ ಇದೆ. ಸಾವು ನೋವುಗಳು ಕೂಡ ಹೆಚ್ಚಿವೆ. ಇನ್ನು ದೇಶದಲ್ಲಿಯೇ ಕೊರೋನಾ ಸಾವಿನಲ್ಲಿ ಕರ್ನಾಟ ಎರಡನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಗೋಲ್ಡನ್ ಟೆಂಪಲ್ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಇಳಿದ ಕೊರೋನಾ
ಕೊಡಗು ಜಿಲ್ಲೆಯಲ್ಲೂ ಕೊರೋನಾ ಸೋಂಕು ಪ್ರಕರಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿನ ಜನರು ಜಾಗೃತಿ ಕ್ರಮಗಳನ್ನು ಕೈಗೊಂಡಿರುವುದು, ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ ಮಾಡುತ್ತಿರುವುದು ಇದಕ್ಕೆ ಕಾರಣ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ.
ಜಿಲ್ಲೆಯಲ್ಲಿ ಕಳೆದ ಮೂರು ವಾರಗಳಿಂದ ಕೊರೋನಾ ಸೋಂಕಿತರ ಸಂಖ್ಯೆ ದಿನಕ್ಕೆ 130 ರಿಂದ 135ರ ಗಡಿ ದಾಟುತ್ತಿತ್ತು. ಅಷ್ಟೇ ಅಲ್ಲ, ಅ. 16ರಂದು ಬರೋಬ್ಬರಿ 137 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ಗಣನೀಯ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ ಕಾಣುತ್ತಿದೆ.