Asianet Suvarna News Asianet Suvarna News

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳಾ ವಿಶ್ರಾಂತಿ ಕೊಠಡಿಯನ್ನು ತೆರೆದು, ಮಹಿಳಾ ಉದ್ಯೋಗಿಗಳಿಗೆ ಅನುಕೂಲ ಮಾಡಲಾಗಿದೆ. ಈ ಕೊಠಡಿಯಲ್ಲಿ ಪ್ರತ್ಯೇಕ ಶೌಚಾಲಯವಿದೆ. ಊಟ, ಉಪಹಾರಕ್ಕೆ ಡೈನಿಂಗ್‌ ಟೇಬಲ್, ಒಂದು ಬಾರಿಗೆ ಏಳೆಂಟು ಮಂದಿ ಕುಳಿತುಕೊಳ್ಳುವುದಕ್ಕೆ ಕುರ್ಚಿ, ತೀರಾ ಬೇಕಿದ್ದರೆ ಮಲಗುವುದಕ್ಕೆ ಬೆಡ್‌ ವ್ಯವಸ್ಥೆ ಕೂಡ ಮಾಡಲಾಗಿದೆ.

resting room for female employees in Udupi DC office
Author
Bangalore, First Published Aug 21, 2019, 1:57 PM IST

ಉಡುಪಿ(ಆ.21): ಜಿಲ್ಲಾಧಿಕಾರಿ ಕಚೇರಿಯ ಮಹಿಳಾ ಉದ್ಯೋಗಿಗಳ ಅಥವಾ ತಮ್ಮ ಕೆಲಸಕಾರ್ಯಗಳಿಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಬರುವ ಮಹಿಳೆಯರ ಮಾಸಿಕ ಆ ದಿನಗಳಲ್ಲಿ ವಿಶ್ರಾಂತಿಗಾಗಿ ಸುಸಜ್ಜಿತ ಕೊಠಡಿಯೊಂದನ್ನು ಸಿದ್ಧಪಡಿಸಲಾಗಿದ್ದು, ಇದು ರಾಜ್ಯದಲ್ಲಿಯೇ ಪ್ರಥಮ ಪ್ರಯೋಗವಾಗಿದೆ.

ಇಲ್ಲಿನ ನಿರ್ಗಮಿತ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ತಮ್ಮ ಕಚೇರಿಯ ಮಹಿಳಾ ನೌಕರರು ಹಾಗೂ ಕಚೇರಿಗೆ ಆಗಮಿಸುವ ಮಹಿಳೆಯರ ಆ ಸಮಸ್ಯೆ ಅರಿತು, ವಿಶೇಷ ಆಸಕ್ತಿ ವಹಿಸಿ ಈ ಮಹಿಳಾ ವಿಶ್ರಾಂತಿ ಕೊಠಡಿ ಸೌಲಭ್ಯ ಆರಂಭಿಸಿದ್ದಾರೆ. ಆ ದಿನಗಳಲ್ಲಿ ಮಹಿಳೆಯರಿಗೆ ಬೇಕಾಗುವ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ.

ಮಕ್ಕಳಿಗಾಗಿ ತೊಟ್ಟಿಲ ವ್ಯವಸ್ಥೆ:

ಈ ಕೊಠಡಿಯಲ್ಲಿ ಪ್ರತ್ಯೇಕ ಶೌಚಾಲಯವಿದೆ. ಊಟ, ಉಪಹಾರಕ್ಕೆ ಡೈನಿಂಗ್‌ ಟೇಬಲ್. ಒಂದು ಬಾರಿಗೆ ಏಳೆಂಟು ಮಂದಿ ಕುಳಿತುಕೊಳ್ಳುವುದಕ್ಕೆ ಕುರ್ಚಿ, ತೀರಾ ಬೇಕಿದ್ದರೆ ಮಲಗುವುದಕ್ಕೆ ಬೆಡ್‌ ವ್ಯವಸ್ಥೆ ಕೂಡ ಮಾಡಲಾಗಿದೆ. ಅಲ್ಲದೆ ತಾಯಿಯರೊಂದಿಗೆ ಚಿಕ್ಕ ಮಕ್ಕಳು ಇದ್ದರೆ, ಅವರನ್ನು ಮಲಗಿಸಲು ಮರದ ತೊಟ್ಟಿಲು, ಉಡುಪು ಬದಲಾಯಿಸಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಸಹ ಇದೆ.

ಇನ್ನೊಂದು ಸೌಲಭ್ಯ ಎಂದರೆ ಇಲ್ಲಿ ಬಳಸಿದ ನ್ಯಾಪ್ಕಿನ್‌ಗಳನ್ನು ಸುರಕ್ಷಿತವಾಗಿ ನಾಶ ಮಾಡುವುದಕ್ಕೆ ಬರ್ನಿಂಗ್‌ ಮೇಶಿನ್‌ ಕೂಡಾ ಇದ್ದು, ಒಂದೆರಡು ದಿನಗಳಲ್ಲಿ ನ್ಯಾಪ್ಕಿನ್‌ ವೆಂಡಿಂಗ್‌ ಮೆಷಿನ್‌ ಸಹ ಬರಲಿದೆ. ಈ ಮೆಷಿನ್‌ನಲ್ಲಿ ನಾಣ್ಯ ಹಾಕಿ ನ್ಯಾಪ್ಕಿನ್‌ ಪಡೆಯಬಹುದಾಗಿದೆ.

ಮಗುವಿಗೆ ಹಾಲುಣಿಸಲು ಅವಕಾಶ:

ಪ್ರಸೂತಿ ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗುವ ಮಹಿಳಾ ನೌಕರರು, ಅಗತ್ಯವಿದ್ದಲ್ಲಿ ಮನೆಯಿಂದ ಮಗುವನ್ನು ಕರೆಸಿ, ಹಾಲುಣಿಸಿ ಮಗುವನ್ನು ಮತ್ತೆ ಮನೆಗೆ ಕಳುಹಿಸಬಹುದು. ಒಟ್ಟಿನಲ್ಲಿ ತಮ್ಮ ಕರ್ತವ್ಯ ನಿರ್ವಹಣೆಯ ಸಮಯದಲ್ಲಿ ಮಹಿಳಾ ನೌಕರರು ಹೇಳಿಕೊಳ್ಳಲಾಗದ ಹಲವು ಸಮಸ್ಯೆಗಳಿಗೆ ಈ ವಿಶ್ರಾಂತಿ ಕೊಠಡಿ ಪರಿಹಾರವಾಗಬೇಕು ಎನ್ನುವ ಸದುದ್ದೇಶದಿಂದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ವಿಶೇಷ ಮತುವರ್ಜಿ ಈ ಮಹಿಳಾ ವಿಶ್ರಾಂತಿ ಕೊಠಡಿಯ ವ್ಯನಸ್ಥೆ ಮಾಡಿದ್ದಾರೆ. ವಿಶೇಷ ಎಂದರೆ ಅವರು ಮಂಗಳವಾರ ಉಡುಪಿಯಿಂದ ವರ್ಗಾವಣೆಗೊಂಡಿದ್ದಾರೆ, ಅದೇ ದಿನ ಈ ಕೊಠಡಿ ಕೂಡ ಉದ್ಘಾಟನೆಗೊಂಡಿದೆ.

-ಸುಭಾಶ್ಚಂದ್ರ ಎಸ್‌.ವಾಗ್ಲೆ

Follow Us:
Download App:
  • android
  • ios