ಬೆಂಗಳೂರು [ಡಿ.28]:  ನಾವು ಇರುವುದು ಕನ್ನಡ ನಾಡಿನಲ್ಲಿ; ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸಿ ಪಾಲನೆ ಮಾಡಬೇಕು ಎಂದು ಮೆಟ್ರೋ ಕ್ಯಾಶ್‌ ಆ್ಯಂಡ್‌ ಕ್ಯಾರಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಹೈಕೋರ್ಟ್‌ ಕಿವಿಮಾತು ಹೇಳಿದೆ.

ಕನ್ನಡದಲ್ಲಿ ನಾಮಫಲಕ ಅಳವಡಿಸುವಂತೆ ಸೂಚಿಸಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀಡಿರುವ ನೋಟಿಸ್‌ ರದ್ದುಪಡಿಸುವಂತೆ ಕೋರಿ ಮೆಟ್ರೋ ಕ್ಯಾಶ್‌ ಆ್ಯಂಡ್‌ ಕ್ಯಾರಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಸಲ್ಲಿಸಿರುವ ತಕರಾರು ಅರ್ಜಿ ಶುಕ್ರವಾರ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಬಿಬಿಎಂಪಿ ನೀಡಿರುವ ನೋಟಿಸ್‌ಗೆ ತಡೆಯಾಜ್ಞೆ ನೀಡುವಂತೆ ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಾವು ಯಾವ ರಾಜ್ಯದಲ್ಲಿ ಇದ್ದೇವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇಲ್ಲಿನ ಭಾಷೆ ಹಾಗೂ ಸಂಸ್ಕೃತಿ ಏನು ಎಂಬುದನ್ನು ಅರಿಯಬೇಕು. ನಾವು ಇರುವುದು ಕನ್ನಡ ನಾಡಿನಲ್ಲಿ, ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸಿ ಪಾಲನೆ ಮಾಡಬೇಕು ಎಂದು ಅರ್ಜಿದಾರರ ವಕೀಲರಿಗೆ ಮೌಖಿಕವಾಗಿ ಕಿವಿಮಾತು ಹೇಳಿತು.

ನಂತರ ಕನ್ನಡದಲ್ಲಿ ನಾಮಫಲಕ ಅಳವಡಿಸಲು ಸೂಚಿಸಿ ಬಿಬಿಎಂಪಿ ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ ಈ ಹಿಂದೆ ರಿಟೇಲರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದೆ. ಆ ಅರ್ಜಿಯೊಂದಿಗೆ ಮೆಟ್ರೋ ಕ್ಯಾಶ್‌ ಆ್ಯಂಡ್‌ ಕ್ಯಾರಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿರುವ ಈ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಬೇಕೆಂದು ನ್ಯಾಯಪೀಠ ನಿರ್ದೇಶಿಸಿ, ಅರ್ಜಿ ವಿಚಾರಣೆಯನ್ನು ಜನವರಿಗೆ ಮುಂದೂಡಿತು.

ನಗರದಲ್ಲಿ ವಾಣಿಜ್ಯ ಕಂಪನಿಗಳು, ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಇತರೆ ಪರವಾನಗಿ ಪಡೆದಿರುವ ಸಂಸ್ಥೆಗಳು ತಮ್ಮ ನಾಮಫಲಕದಲ್ಲಿ ಕನ್ನಡವನ್ನು ಪ್ರಧಾನವಾಗಿ ಬಳಸಬೇಕು. ನಾಮಫಲಕದ ಶೇ.60ರಷ್ಟುಜಾಗ ಕನ್ನಡ ಭಾಷೆಯಲ್ಲಿದ್ದು, ಅತ್ಯಂತ ಸ್ಪಷ್ಟವಾಗಿ ಎದ್ದು ಕಾಣುವಂತಿರಬೇಕು. ಕನ್ನಡದ ಪದಗಳನ್ನು ಉಪಯೋಗಿಸಿರಬೇಕು. ಉಳಿದ ಶೇ.40ರಷ್ಟುಜಾಗದಲ್ಲಿ ಅನ್ಯಭಾಷೆ ಉಪಯೋಗಿಸಬಹುದು ಎಂದು ಸೂಚಿಸಿ ಬಿಬಿಎಂಪಿ 2017ರ ಜುಲೈ 22ರಂದು ಸುತ್ತೋಲೆ ಹೊರಡಿಸಿತ್ತು.

ಈ ಸುತ್ತೋಲೆಯನ್ನು ಜಾರಿ ಮಾಡುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿ ಬಿಬಿಎಂಪಿ 2018ರ ಜುಲೈ 30ರಂದು ಮತ್ತೊಂದು ಸುತ್ತೋಲೆ ಹೊರಡಿಸಿತ್ತು. ಸುತ್ತೋಲೆ ಅನ್ವಯ ಕನ್ನಡದಲ್ಲಿ ನಾಮಫಲಕ ಅಳವಡಿಸುವಂತೆ ಸೂಚಿಸಿ ಮೆಟ್ರೋ ಕ್ಯಾಶ್‌ ಆ್ಯಂಡ್‌ ಕ್ಯಾರಿ ಇಂಡಿಯಾ ಪ್ರೈವೇಟ್‌ ಕಂಪನಿಗೆ 2019ರ ನ.29ರಂದು ಬಿಬಿಎಂಪಿ ನೋಟಿಸ್‌ ಜಾರಿ ಮಾಡಿತ್ತು. ಈ ನೋಟಿಸ್‌ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಬಿಬಿಎಂಪಿಯ ಸುತ್ತೋಲೆ ಹಾಗೂ ನೋಟಿಸ್‌ ಕರ್ನಾಟಕ ಮುನ್ಸಿಪಲ್‌ ಕಾರ್ಪೋರೇಷನ್‌ ಕಾಯ್ದೆ-1976ರ ನಿಯಮಗಳಿಗೆ ವಿರುದ್ಧವಾಗಿದೆ. ಹಾಗೆಯೇ, ಭಾರತ ಸಂವಿಧಾನದ ಪರಿಚ್ಛೇದ 14, 19(1)(ಎ), 19(1)(ಜಿ) ಮತ್ತು 345ರ ಸ್ಪಷ್ಟಉಲ್ಲಂಘನೆಯಾಗಿದೆ ಎಂಬುದು ಅರ್ಜಿದಾರರ ವಾದವಾಗಿದೆ.