ಚಂದ್ರು ಕೊಂಚಿಗೇರಿ

ಹೂವಿನಹಡಗಲಿ(ಜ.29): ಮಹಾತ್ಮಾ ಗಾಂಧೀಜಿ ಅವರ ಚಿಂತನೆ, ರಾಜೀವ ಗಾಂಧಿ ಅವರ ಕನಸಿನ ಕೂಸಾಗಿ ಗ್ರಾಮಾಭಿವೃದ್ಧಿ, ಗ್ರಾಮ ಸ್ವರಾಜ್ಯದ ಕನಸು ಕಟ್ಟಿಕೊಂಡು ಆರಂಭವಾದ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿನ ಗ್ರಾಮ ಪಂಚಾಯತಿ ವ್ಯವಸ್ಥೆಯ ಆಶಯ ಚುನಾಯಿತ ಪ್ರತಿನಿಧಿಗಳ ಅಧಿಕಾರ ದಾಹ, ಭ್ರಷ್ಟಾಚಾರ, ಅಧಿಕಾರಿಗಳ ಅಸಡ್ಡೆಯಿಂದ ಮಣ್ಣು ಪಾಲಾಗುತ್ತಿದ್ದು, ಪಕ್ಷಾತೀತ ವ್ಯವಸ್ಥೆಯಲ್ಲಿ ಚುನಾವಣೆ ನಡೆದಿದ್ದರೂ ಅಧಿಕಾರ ಹಿಡಿಯಲು ಎಲ್ಲ ಪಕ್ಷಗಳೂ ವಾಮ ಮಾರ್ಗ ಹಿಡಿಯುತ್ತಿದ್ದು, ವಿಧಾನಸಭೆ, ಲೋಕಸಭೆಯಲ್ಲಿನ ರಾಜಕಾರಣವನ್ನೂ ನಾಚಿಸುವಂತೆ ಹಳ್ಳಿ ಗಾದಿಗಾಗಿ ಫೈಟ್‌ ನಡೆಯುತ್ತಿದೆ.

ಕಳೆದ ಜ. 22ರಂದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ತಾಲೂಕಿನ 26 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದ್ದು, ಜತೆಗೆ ಫೆ. 2ರಿಂದ ಫೆ. 5 ರವರೆಗೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಕೂಡಾ ನಿಗದಿಯಾಗಿರುವ ಬೆನ್ನಲ್ಲೇ, ಆಯಾ ಗ್ರಾಮ ಪಂಚಾಯಿತಿಗಳಲ್ಲಿನ ಅಧ್ಯಕ್ಷ ಸ್ಥಾನ​ದ ಆಕಾಂಕ್ಷಿಗಳು ಅಧಿಕಾರದ ಗದ್ದುಗೆ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಸಿಕ್ಕಾಪಟ್ಟೆಲಾಬಿ ನಡೆಸಿ ತಮಗೆ ಅನುಕೂಲವಾಗುವಂತಹ ಗ್ರಾಪಂ ಸದಸ್ಯರನ್ನು ಪುಣ್ಯ ಕ್ಷೇತ್ರಗಳಿಗೆ ಹಾಗೂ ಕೆಲ ರೆಸಾರ್ಟ್‌ಗಳಿಗೆ ಈಗಾಗಲೇ ಕರೆದುಕೊಂಡು ಹೋಗಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಹೋಗುವ ಸಿದ್ಧತೆ ಮಾಡಿಕೊಂಡಿದ್ದಾರೆ. ಇಲ್ಲಿವರೆಗೂ ರಾಜ್ಯ ರಾಜಕೀಯಕ್ಕೆ ಮೀಸಲಿದ್ದ ರೆಸಾರ್ಟ್‌ ರಾಜಕೀಯ ಇಂದು ಹಳ್ಳಿಗೂ ಕಾಲಿಟ್ಟಿದೆ.

ಹಳ್ಳಿಗಳ ಉದ್ಧಾರ ಮಾಡಬೇಕೆಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ, ಅಗತ್ಯ ಅನುದಾನವನ್ನು ನೀಡುತ್ತಿವೆ. ಜತೆಗೆ 15ನೇ ಹಣಕಾಸು ಆಯೋಗ ಸೇರಿದಂತೆ ಇತರೆ ಅನುದಾನವನ್ನು ಬಿಡುಗಡೆ ಮಾಡುತ್ತಿವೆ. ಆದರೆ ಇಡೀ ಅನುದಾನವನ್ನು ತುಂಡು, ತುಂಡು ಮಾಡಿ ಬಹುತೇಕ ಕಡೆಗಳಲ್ಲಿ ಅರೆಬರೆ ಕಾಮಗಾರಿ ಮಾಡಿ ಕೈತೊಳೆದುಕೊಂಡಿರುವ ಉದಾಹರಣೆಗಳೇ ಹೆಚ್ಚಾಗಿವೆ.

'ಈ ಬಾರಿ ಸಂಸತ್‌ ಕಲಾಪ ನಡೆಯಲು ಬಿಡೋದಿಲ್ಲ'

ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಸದಸ್ಯರನ್ನು ಭೇಟಿ ಮಾಡಿ ಸಾಕಷ್ಟುಲಾಬಿ ಮಾಡುತ್ತಿದ್ದಾರೆ. ಕೆಲ ಪಕ್ಷದ ನಾಯಕರು ಯಾವುದೇ ಮೀಸಲಾತಿ ಬರಲಿ, ಯಾವುದೇ ಕಾರಣಕ್ಕೂ ಆಸೆ ಆಮಿಷಗಳಿಗೆ ಬಲಿಯಾಗದೇ ಪಕ್ಷದ ನೀತಿ ಸಿದ್ಧಾಂತಗಳಿಗೆ ಬೆಂಬಲವಾಗಿ ನಿಲ್ಲಬೇಕೆಂದು ಸೂಚನೆ ನೀಡಿದ್ದರೂ, ಅದನ್ನು ಧಿಕ್ಕರಿಸಿ ಹೆಚ್ಚಿಗೆ ಲಾಭ ಯಾವ ಕಡೆಗೂ ಬರುತ್ತೋ ಎಂದು ಕಾಯುತ್ತಿರುವವರೇ ಹೆಚ್ಚಾಗಿದ್ದಾರೆಂಬ ಮಾತು ಕೇಳಿ ಬರುತ್ತಿದೆ.
ತಾಲೂಕಿನ 26 ಗ್ರಾಮ ಪಂಚಾಯಿತಿಗಳಲ್ಲಿ 13 ಸಾಮಾನ್ಯ ಮೀಸಲು ಒಲಿದಿದೆ. ಇಲ್ಲಿ ಅಧ್ಯಕ್ಷ ಆಕಾಂಕ್ಷಿಗಳ ನಡುವೆ ಸಾಕಷ್ಟುಸ್ಪರ್ಧೆ ಏರ್ಪಟ್ಟಿದೆ. ರಾಜ್ಯ ರಾಜಕೀಯದಲ್ಲಿ ಅಧಿಕಾರಕ್ಕೆ ನಡೆಯುತ್ತಿರುವ ಹೈಡ್ರಾಮವನ್ನು ಮೀರಿಸುವಂತಹ ನಿಟ್ಟಿನಲ್ಲಿ ಹಳ್ಳಿ ರಾಜಕೀಯ ಗರಿಗೆದರಿದೆ. ಅತಿ ಹೆಚ್ಚು ಅನುದಾನ ಗ್ರಾಪಂಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ, ಸ್ಥಾನಕ್ಕೆ ಸಿಕ್ಕಾಪಟ್ಟೆಪೈಪೋಟಿ ನಡೆಯುತ್ತಿದೆ.

ತಾಲೂಕಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಬೆಂಬಲಿತ ಸದಸ್ಯರಿದ್ದು, ಜತೆಗೆ ಕೆಲ ಕಡೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲವು ಸಾಧಿಸಿದ್ದರು. ಅಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಹೆಚ್ಚು ಡಿಮ್ಯಾಂಡ್‌ ಬಂದಿದೆ.
ಈಗಾಗಲೇ ನಂದಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಸಂಡೂರು ರೆಸಾರ್ಟ್‌ನಲ್ಲಿ, ಹಿರೇಹಡಗಲಿ 13 ಸದಸ್ಯರು ತೀರ್ಥಕ್ಷೇತ್ರಗಳಿಗೆ ಪ್ರವಾಸ ಸೇರಿದಂತೆ ಅಧ್ಯಕ್ಷ ಸ್ಥಾನ​ದ ಆಕಾಂಕ್ಷಿಗಳು ಬಲವಾಗಿರುವ ಕಡೆಗಳಲ್ಲಿ ಪ್ರವಾಸಕ್ಕೆ ಹೊರಡಲು ಸಿದ್ಧತೆಯಲ್ಲಿದ್ದಾರೆ.