ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ..!

*  ಸಂಸದೆ ಮಂಗಲ ಅಂಗಡಿ ಎದುರು ಕಾರ್ಯಕರ್ತರ ಆಕ್ರೋಶ
*  ಈ ಬಾರಿ ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಟಿಕೆಟ್‌ 
*  ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ 

Resentment Among BJP Workers in Belagavi grg

ಬೆಳಗಾವಿ(ಆ.24): ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆಯದ ಮಹಿಳಾ ಕಾರ್ಯಕರ್ತರಿಗೆ ಟಿಕೆಟ್‌ ನೀಡಿದ ಹಿನ್ನೆಲೆಯಲ್ಲಿ ಪಕ್ಷ ನಿಷ್ಠರು ಸೋಮವಾರ ಸಂಸದೆ ಮಂಗಲ ಅಂಗಡಿ ಭೇಟಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಟಿಕೆಟ್‌ ಹಂಚಿಕೆ ವಿಷಯದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮೂಲ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಕೆಲ ಆಕಾಂಕ್ಷಿಗಳು ಸಂಸದೆ ಮಂಗಲ ಅಂಗಡಿ ಅವರ ಗೃಹ ಕಚೇರಿಯಲ್ಲಿ ಹಠ ಹಿಡಿದು ಕುಳಿತಿದ್ದರು. ಇಷ್ಟು ವರ್ಷ ಪಕ್ಷದಲ್ಲಿ ನಿಷ್ಠಾವಂತರಾಗಿ ಕೆಲಸ ಮಾಡಿದರೂ ಅನ್ಯರಿಗೆ ಟಿಕೆಟ್‌ ಕೊಡಲಾಗಿದೆ. ತಮ್ಮನ್ನು ಕಡೆಗಣಿಸಿರುವುದಕ್ಕೆ ಸರಿಯಾದ ಕಾರಣ ಕೊಡಬೇಕು ಎಂದು 8​ರಿಂದ 10 ಆಕಾಂಕ್ಷಿಗಳು ಮಂಗಲ ಅಂಗಡಿ ಅವರ ಗೃಹ ಕಚೇರಿಯಲ್ಲಿಯೇ ಕುಳಿತಿದ್ದರು.

ಭಾನುವಾರ ಬಿಜೆಪಿ ಮೊದಲ ಪಟ್ಟಿಬಿಡುಗಡೆ ಮಾಡಿದಾಗ ಕಾರ್ಯಕರ್ತರೊಬ್ಬರು ನಾಯಕರ ಎದುರಲ್ಲೇ ಆಕ್ರೋಶ ವ್ಯಕ್ತಪಡಿಸಿದರು. ಅವಾಚ್ಯ ಪದಗಳನ್ನು ಬಳಸಿ ಸಿಟ್ಟು ಹೊರಹಾಕಿದರು. ಕೆಲವರು ಅಸಮಾಧಾನ ಪಟ್ಟರೂ ನಾಯಕರ ಎದುರು ಹೇಳಿಕೊಳ್ಳದೇ ಸುಮ್ಮನಾಗಿದ್ದರು. ಸೋಮವಾರ ಬೆಳಗ್ಗೆ ಎರಡನೇ ಪಟ್ಟಿಬಿಡುಗಡೆಯಾದ ಬಳಿಕ ಅತೃಪ್ತ ಕಾರ್ಯಕರ್ತರು ನಾಯಕರ ಕಚೇರಿ, ಮನೆಗಳ ಬಳಿ ತೆರೆಳಿ ಅಸಮಾಧಾನ ವ್ಯಕ್ತಪಡಿಸಿದರು.

ಬೊಮ್ಮಾಯಿ ಬೆಳಗಾವಿ ಭೇಟಿ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

ಕಳೆದ 15 ವರ್ಷಗಳಿಂದ ತಾವು ಕಾರ್ಯಕರ್ತರಾಗಿ ದುಡಿಯುವ ಮೂಲಕ ಪಕ್ಷಕ್ಕಾಗಿ ಹಲವಾರು ಕಾರ್ಯಗಳನ್ನು ಮಾಡಿದ್ದರೂ ಮೂಲ ಬಿಜೆಪಿ ಪದಾಧಿಕಾರಿಗಳನ್ನು ಕಡೆಗಣಿಸಿ ಶಾಸಕರು ಹೊಸಬರಿಗೆ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್‌ ನೀಡಿರುವ ಕ್ರಮ ಖಂಡಿಸಿದರು. ಪಕ್ಷದ ಧ್ವಜ ಹಿಡಿದು ಬೆಳಗಾವಿಯಲ್ಲಿ ಪಕ್ಷ ಕಟ್ಟು ಕೆಲಸ ಮಾಡಿದ್ದೇವೆ. ಆದರೆ ಈ ಬಾರಿ ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಟಿಕೆಟ್‌ ಕೊಡಲಾಗುವುದು ಎಂದು ಬಿಜೆಪಿ ಮುಖಂಡರು ಹೇಳಿದ್ದರು. ಆದರೆ ಮೂಲ ಪಕ್ಷಕ್ಕಾಗಿ ದುಡಿದವನ್ನು ಪಟ್ಟಿಯಿಂದ ಹೊರೆಗೆ ಹಾಕುವ ಮೂಲಕ ಹೊಸಬರಿಗೆ ಟಿಕೆಟ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸಂಸದೆ ಎದುರು ತಮ್ಮ ಅಳಲು ತೋಡಿಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಆರತಿ ಪಟೋಳಿ, ಸೀಮಾ ಪವಾರ, ಪ್ರಿಯಾಂಕ್‌ ಕಲಗಟಕರ, ಸವಿತಾ, ಶಿಲ್ಪಾ ಸೇರಿದಂತೆ ಕೆಲ ಮಹಿಳಾ ಪದಾಧಿಕಾರಿಗಳು ಇಲ್ಲಿಯವರೆಗೆ ಪಟ್ಟಿಯಲ್ಲಿ ಇದ್ದ ನಮ್ಮ ಹೆಸರನ್ನು ತೆಗೆದು ಹಾಕಲಾಗಿದೆ. ಸಾಹೇಬರ ಮನೆಯಲ್ಲಿ ಕೆಲಸ ಮಾಡುವವರಿಗೆ, ಅವರ ಸಂಬಂಧಿಕರಿಗೆ ಟಿಕೆಟ್‌ ನೀಡಲಾಗಿದೆ. ನಮಗೆ ಸಂದರ್ಶನ ಯಾಕೆ ಮಾಡಲಾಯಿತು? ನಮ್ಮ ಮನೆ ಮಕ್ಕಳು ಬಿಟ್ಟು ಬಿಜೆಪಿ ಕಟ್ಟುವ ಕಾರ್ಯ ಮಾಡಿದ್ದೇವೆ. ಆದರೆ ನಮ್ಮ ಮುಖಂಡರು ನಮ್ಮನ್ನು ಕರೆಸಿ ಬೇರೆ ಯಾರಿಗೋ ಟಿಕೆಟ್‌ ನೀಡಿದ್ದಾರೆ. ನಾವು ನಮ್ಮ ಶಾಸಕ, ಸಂಸದರು ನಂಬಿ ಮನೆಯಲ್ಲ ಬಿಟ್ಟು ಕಾರ್ಯ ಮಾಡಿದ್ದೇವೆ. ಆದರೆ ನಮ್ಮನ್ನು ಕಡೆಗಣಿಸಲಾಗಿದೆ. ಕೆಲ ಅಭ್ಯರ್ಥಿಗಳನ್ನು ನಾವು ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ನೋಡಿರದ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ. ನಮಗೆ ಯಾವ ರೀತಿ ನ್ಯಾಯ ನೀಡುತ್ತಾರೆ ಎನ್ನುವುದನ್ನು ಕಾದು ನೋಡುತ್ತೇವೆ. ಇಲ್ಲವಾದರೆ ನಾವು ನಮ್ಮ ಮುಂದಿನ ದಾರಿ ನೋಡಿಕೊಳ್ಳುತ್ತೇವೆ ಎಂದು ಖಾರವಾಗಿಯೇ ಹೇಳಿದರು. ಆದರೆ ನಮಗೆ ಅನ್ಯಾಯ ಮಾಡಿರುವ ಶಾಸಕರು ಮುಂದೆ ಪ್ರತಿಫಲ ಅನುಭವಿಸುತ್ತಾರೆ ಎಂದು ಹೇಳಿದರು.
 

Latest Videos
Follow Us:
Download App:
  • android
  • ios