ಹುಬ್ಬಳ್ಳಿ: ಉಕ್ಕಿದ ಬೆಣ್ಣೆಹಳ್ಳ, 32 ಜನರ ರಕ್ಷಣೆ ಓರ್ವ ನಾಪತ್ತೆ
ಬೆಣ್ಣೆಹಳ್ಳ ಪ್ರವಾಹದ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗಿದೆ. ವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆ. ಆರ್ಥಿಕ ಇಲಾಖೆಯ ಅನುಮೋದನೆ ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ ಎಂದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಹುಬ್ಬಳ್ಳಿ(ಆ.30): ತಾಲೂಕಿನ ಇಂಗಳಹಳ್ಳಿ ಸಮೀಪ ಸೋಮವಾರ ಅನಿರೀಕ್ಷಿತವಾಗಿ ಬೆಣ್ಣೆಹಳವು ಪ್ರವಾಹೋಪಾದಿಯಲ್ಲಿ ಉಕ್ಕಿಬಂದ ಪರಿಣಾಮ ಎರಡು ಪ್ರತ್ಯೇಕ ಪ್ರಕರಣದಲ್ಲಿ ಹಳ್ಳದಲ್ಲಿ ಸಿಲುಕಿದ್ದ 32 ಜನರನ್ನು ರಕ್ಷಿಸಲಾಗಿದೆ. ಓರ್ವ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. 28 ಕೂಲಿಕಾರ್ಮಿಕರು ಬೆಳಿಗ್ಗೆ ಹೊಲಕ್ಕೆ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಇನ್ನೇನೂ ಹೊರಡಬೇಕು ಎನ್ನುವಷ್ಟರಲ್ಲೇ ಬೆಣ್ಣಿಹಳ್ಳ ಉಕ್ಕಿ ಹರಿದಿದೆ. ಇದರಿಂದ 28 ಕೂಲಿಕಾರ್ಮಿಕರು, ಜಮೀನು ಮಾಲೀಕ ಸೇರಿ ಒಟ್ಟು 29 ಜನರು ಹಳ್ಳದಲ್ಲಿ ಸಿಲುಕಿದ್ದರು. ಮಾಹಿತಿ ತಿಳಿದ ತಕ್ಷಣವೇ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಾಲೂಕಾಡಳಿತಕ್ಕೆ ರಕ್ಷಣಾ ಕಾರ್ಯಾಚರಣೆಗೆ ಮುಂದಾಗುವಂತೆ ಸೂಚಿಸಿದರು.
ತಹಸೀಲ್ದಾರ್ ಪ್ರಕಾಶ ನಾಶಿ, ಪೊಲೀಸ್ ಇನ್‌ಸ್ಪೆಕ್ಟರ್ ರಮೇಶ ಗೋಕಾಕ ಹಾಗೂ ಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಇಲಾಖೆಯ ಅಧಿಕಾರಿ ವಿನಾಯಕ ಹಟ್ಟಿಕಾರ ಸೇರಿ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ 29 ಜನರನ್ನು ಬೋಟ್ ಮೂಲಕ ರಕ್ಷಣೆ ಮಾಡಲಾಯಿತು.
ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್, ಕಾಂಗ್ರೆಸ್ ವಿರೋಧ ಮಾಡಿಲ್ಲ ಎಂದ ಮೇಯರ್
ಇನ್ನೊಂದು ಘಟನೆಯಲ್ಲಿ ಇಂಗಳಹಳ್ಳಿ-ಕುಸುಗಲ್ ಮಧ್ಯೆ ಸೇತುವೆ ದಾಟುತ್ತಿದ್ದ ನಾಲ್ವರು ಯುವಕರ ಪೈಕಿ ಮೂವರನ್ನು ರಕ್ಷಿಸಲಾಗಿದೆ. ಬ್ಯಾಹಟ್ಟಿಮೂಲದ ಆನಂದ ಹಿರೇಗೌಡ್ರ (24) ನಾಪತ್ತೆಯಾಗಿದ್ದಾನೆ. ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.
ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಈ ಭಾಗದಲ್ಲಿ ಹಿಂದೆಯೂ ಇಂತಹ ಘಟನೆ ನಡೆದಿವೆ. ಬೇರೆ ಕಡೆ ಹೆಚ್ಚಿನ ಮಳೆಯಾದರೂ ಈ ಭಾಗದ ರೈತರು ಎಚ್ಚರ ವಹಿಸಬೇಕು. ಬೆಣ್ಣೆಹಳ್ಳ ಪ್ರವಾಹದ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗಿದೆ. ವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆ. ಆರ್ಥಿಕ ಇಲಾಖೆಯ ಅನುಮೋದನೆ ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಗ್ರಾಪಂ ಅಧ್ಯಕ್ಷ ಹುಚ್ಚೇಸಾಬ ತಹಸೀಲ್ದಾರ್, ಸ್ಥಳೀಯ ಮುಖಂಡರಾದ ಶಾಂತಪ್ಪ ಶೆಟ್ಟರ್, ರುದ್ರಪ್ಪ ದುಂದೂರ, ಸಿ.ಜಿ. ವಸ್ತ್ರದ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ದುಃಖದಲ್ಲಿ ಸಚಿವರು
ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಮನೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಅವರ ಸಹೋದರನ ಪತ್ನಿ ಸಾವಿಗೀಡಾಗಿದ್ದರು. ಅವರ ಮನೆಯೇ ಸೂಚಕದ ಮನೆಯಾಗಿದೆ. ಹೀಗಿದ್ದರೂ ಪ್ರವಾಹದಲ್ಲಿ ಕಾರ್ಮಿಕರು ಸಿಲುಕಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ವೈಯಕ್ತಿಕ ದುಃಖ ಮರೆತು ಕಾರ್ಯಾಚರಣೆ ನಡೆಯುವ ಸ್ಥಳಕ್ಕೆ ಆಗಮಿಸಿದ್ದರು. ಕಾರ್ಯಾಚರಣೆಗೆ ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದರು. ಇದು ಗ್ರಾಮಸ್ಥರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.