ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರದಲ್ಲಿನ ಸಚಿವರ ಭಾವಚಿತ್ರ ತೆಗೆಯಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆಯಲಾಗಿದೆ: ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ

ಬೆಳಗಾವಿ(ಜು.29): ರಾಜ್ಯ ಸರ್ಕಾರದ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಮಂಜೂರಾತಿ ಆದೇಶ ಪತ್ರದಲ್ಲಿ ಸಚಿವರ ಭಾವಚಿತ್ರ ತೆಗೆಯಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರದಲ್ಲಿನ ಸಚಿವರ ಭಾವಚಿತ್ರ ತೆಗೆಯಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆಯಲಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಆಮಿಷವೊಡ್ಡಿ ಗೆದ್ದ ಆರೋಪ: ಹೈಕೋರ್ಟ್‌ ಎಮರ್ಜೆಂಟ್ ನೋಟಿಸ್ ಜಾರಿ

ಮಂಜೂರಾತಿ ಪತ್ರದಲ್ಲಿ ಸಿಎಂ, ಡಿಸಿಎಂ ಮತ್ತು ಸಚಿವರ ಭಾವಚಿತ್ರ ಪ್ರಕಟಿಸಲಾಗಿದೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ ಸಿಎಂ, ಡಿಸಿಎಂ, ಸಚಿವರ ಭಾವಚಿತ್ರ ಪ್ರಕಟಿಸಿ ನ್ಯಾಯಾಂಗ ನಿಂದನೆ ಮಾಡಲಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಬಡವರ ಯೋಜನೆಯ ಅನುಷ್ಠಾನವನ್ನು ಸರ್ಕಾರ ಮಾಡುತ್ತಿದೆ. ಹೀಗಿದ್ದರೂ ಸಚಿವರ ಭಾವಚಿತ್ರ ಹಾಕಿರುವುದನ್ನು ನೋಡಿದರೆ ತಮ್ಮ ಸ್ವಂತ ಜೇಬಿನಿಂದ ಯೋಜನೆಗೆ ಹಣ ಕೊಟ್ಟಂತೆ ಕಾಣುತ್ತಿದೆ ಎಂದು ಕಿಡಿಕಾರಿದರು.

ಸುಪ್ರೀಂ ಕೋರ್ಟ್‌ ಸರ್ಕಾರದ ಯೋಜನೆಯಲ್ಲಿ ಸಚಿವರ ಭಾವಚಿತ್ರ ಹಾಕಲು ಅವಕಾಶ ಇಲ್ಲವೆಂದು ಹೇಳಿದೆ. ಆದರೂ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಸಚಿವರ ಭಾವಚಿತ್ರ ಹಾಕಲಾಗುತ್ತಿದೆ. ಇದರಿಂದಾಗಿ ನ್ಯಾಯಾಂಗ ನಿಂದನೆಯಾಗುತ್ತಿದೆ. ತಕ್ಷಣವೇ ಭಾವಚಿತ್ರ ಇರುವ ಆದೇಶ ಪತ್ರ ವಾಪಸ್‌ ಪಡೆಯಬೇಕು. ಯಾವುದೇ ಭಾವಚಿತ್ರ ಇರದ ಆದೇಶ ಪತ್ರಗಳನ್ನು ಫಲಾನುಭವಿಗಳಿಗೆ ನೀಡಬೇಕು. ಇಲ್ಲದಿದ್ದರೆ ಸಚಿವರ, ಸರ್ಕಾರದ ವಿರುದ್ಧ ಹೈಕೋರ್ಚ್‌ನಲ್ಲಿ ಪಿಐಎಲ್‌ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.