ಮಂಗಳೂರು(ಜ.21): ಮಂಗಳೂರಿನಲ್ಲಿ ಬಾಂಬ್‌ ಸಿಕ್ಕಿದಾಗ ಥ್ರೆಟ್‌ ಕಂಟೈನ್‌ಮೆಂಟ್‌ ವಾಹನದ ಮೂಲಕ ಅದನ್ನು ಕೆಂಜಾರು ಮೈದಾನಕ್ಕೆ ತರಲಾಯಿತು. ಆದರೆ ಥ್ರೆಟ್‌ ಕಂಟೈನ್‌ಮೆಂಟ್‌ ವಾಹನದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಬಾಂಬ್ ಸ್ಥಳಾಂತರಿಸಲು ಬಳಸುವ ರಿಮೋಟ್ ಚಾಲಿತ ವಾಹನವಿದು.

ಥ್ರೆಟ್‌ ಕಂಟೈನ್‌ಮೆಂಟ್‌ ವಾಹನ ರಿಮೋಟ್‌ ಮೂಲಕ ಆಪರೇಟ್‌ ಆಗುವಂಥ ಸಾಧನ. ಅದರ ಸಂಚಾರವೂ ರಿಮೋಟ್‌ ಮೂಲಕವೇ ನಡೆಯೋದು. ನಾಲ್ಕು ಚಕ್ರಗಳಿದ್ದು ನಡುವೆ ಬೃಹತ್‌ ಗೋಲಾಕಾರದಲ್ಲಿ ಬಾಂಬ್‌ ಇಡುವ ವ್ಯವಸ್ಥೆಯಿದೆ.

ಬಾಂಬ್ ಇಟ್ಟಲ್ಲಿಂದ, ನಿಷ್ಕ್ರಿಯಗೊಳಿಸಿದ ತನಕ, ಇಲ್ಲಿದೆ ಎಲ್ಲ ಫೊಟೋಸ್..!

ಇದರ ಮುಚ್ಚಳವೂ ರಿಮೋಟ್‌ ಮೂಲಕವೇ ಆಪರೇಟ್‌ ಆಗುವಂತೆ ವಿನ್ಯಾಸಗೊಳಿಸಲಾಗಿದೆ. ಬಾಂಬ್‌ ಪತ್ತೆಯಾದ ಕೂಡಲೆ ಅದನ್ನು ಈ ಗೋಲಾಕಾರದಲ್ಲಿಟ್ಟು ಮುಚ್ಚಲಾಗಿದೆ. ಬಳಿಕ ವಾಹನದಲ್ಲೇ ಇರುವ ಕೂಲರ್‌ ಮೂಲಕ ಬಾಂಬ್‌ನ್ನು ತಣಿಸಲಾಗಿತ್ತು. ಹೀಗೆ ಮಾಡಿದರೆ ಬಾಂಬ್‌ ಸ್ಫೋಟವಾದರೂ ಅದರ ಹೊರಗಡೆ ಅದರ ತೀವ್ರತೆ ಕಂಡುಬರುವುದಿಲ್ಲ.

ಮೈದಾನದ ಇಳಿಜಾರು ದಾರಿಯ ಮೇಲೆ ಟ್ರ್ಯಾಕ್ಟರ್‌ನಿಂದ ಇಳಿಸಿದ ಬಳಿಕ ಈ ವಾಹನ ರಿಮೋಟ್‌ ಮೂಲಕ ಇಳಿಜಾರನ್ನು ನಿಧಾನವಾಗಿ ಇಳಿಯಿತು. ಅದು ಬೀಳದಂತೆ ಕ್ರೇನ್‌ಗೆ ಬೆಲ್ಟ್‌ ಕಟ್ಟಿಮುಂಜಾಗ್ರತೆ ಕ್ರಮ ವಹಿಸಲಾಗಿತ್ತು.

ವಾಹನ ನಿರ್ಬಂಧ

ವಿಮಾನ ನಿಲ್ದಾಣದ ಎಕ್ಸಿಟ್‌ ದಾರಿಯಿಂದ ಮುಖ್ಯರಸ್ತೆಗೆ ಬಾಂಬ್‌ ಕೊಂಡೊಯ್ಯುವಾಗ ಮಂಗಳೂರು- ಬಜ್ಪೆ ಮುಖ್ಯರಸ್ತೆಯಲ್ಲಿ ಬಾಂಬ್‌ ಸಾಗಾಟದ ವಾಹನ ಸಾಗುವ ದಾರಿಯುದ್ದಕ್ಕೂ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಸುಮಾರು ಒಂದು ಗಂಟೆಯ ಬಳಿಕ ಸಂಚಾರ ಮತ್ತೆ ಎಂದಿನಂತೆ ಪುನಾರಂಭಗೊಂಡಿತು.