ಬೆಳೆ ವಿಮೆ ಮಾಡಿಸಲು ಹಿಂದೇಟು: ಸಚಿವ ಸಿಆರ್‌ಎಸ್
ಬೆಳೆ ವಿಮೆ ಮಾಡಿಸಲು ಜಿಲ್ಲೆಯ ರೈತರು ಹಿಂದುಳಿದಿರುವುದರಿಂದ ಬೆಳೆ ಹಾನಿಯಾದಾಗ ನಿರೀಕ್ಷಿತ ಪ್ರಮಾಣದ ಸೂಕ್ತ ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.
ಕೆ.ಆರ್.ಪೇಟೆ : ಬೆಳೆ ವಿಮೆ ಮಾಡಿಸಲು ಜಿಲ್ಲೆಯ ರೈತರು ಹಿಂದುಳಿದಿರುವುದರಿಂದ ಬೆಳೆ ಹಾನಿಯಾದಾಗ ನಿರೀಕ್ಷಿತ ಪ್ರಮಾಣದ ಸೂಕ್ತ ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.
ಬರ ಸಮೀಕ್ಷೆಗಾಗಿ ತಾಲೂಕಿಗೆ ಆಗಮಿಸಿ ಜಾಗಿನಕೆರೆ ಗ್ರಾಮದ ರೈತ ಮಂಜೇಗೌಡರ ಒಣಗಿದ ರಾಗಿ ಹೊಲವನ್ನು ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಬರ ಪರಿಹಾರ ಯೋಜನೆ ಮೂಲಕ ರೈತರಿಗೆ ಒಂದಷ್ಟನ್ನು ಸರ್ಕಾರ ನೆರವಿನ ರೂಪದಲ್ಲಿ ಹಣ ನೀಡುತ್ತದೆ. ಆದರೆ, ಇದರಿಂದ ರೈತರಿಗೆ ಹೆಚ್ಚು ಲಾಭವಾಗುವುದಿಲ್ಲ. ಬೆಳೆ ವಿಮೆ ಮಾಡಿಸಿದರೆ ಬರಗಾಲದಲ್ಲಿ ಒಣಗಿ ಹೋದ ಬೆಳೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ದೊರಕುತ್ತದೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಹಾವೇರಿ ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ವಿಮೆ ಮಾಡಿಸಿ ಅನುಕೂಲ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಬೆಳೆ ವಿಮೆ ಮೂಲಕ ಹಾವೇರಿ ಜಿಲ್ಲೆಯ ರೈತರು 150 ಕೋಟಿ ರು ಪರಿಹಾರ ಪಡೆದರೆ, ರಾಜ್ಯದ ಇತರ ಎಲ್ಲಾ ಜಿಲ್ಲೆಗಳ ರೈತರು ಸೇರಿ 100 ಕೋಟಿ ವಿಮೆ ಪ್ರಯೋಜನ ಪಡೆಯುತ್ತಿದ್ದಾರೆ. ರೈತರು ಬೆಳೆ ವಿಮೆ ಮಾಡಿಸುವತ್ತ ಹೆಚ್ಚು ಗಮನ ಹರಿಸುವಂತೆ ಮನವಿ ಮಾಡಿದರು.
ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಸ್ವಾಗತಿಸಿದ ಶಾಸಕ ಎಚ್.ಟಿ.ಮಂಜು, ಈ ಹಿಂದಿನ ಅವಧಿಯಲ್ಲಿ ಸಂಭವಿಸಿದ ಅತಿವೃಷ್ಠಿಯಿಂದ ಹಾನಿಯಾಗಿರುವ ಕೆರೆ, ಕಟ್ಟೆಗಳ ಪುನರ್ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಸಂತೇಬಾಚಹಳ್ಳಿ ಹೋಬಳಿಯ ಲೋಕನಹಳ್ಳಿ, ಮಾವಿನಕಟ್ಟೆ ಕೊಪ್ಪಲು ಕೆರೆಗಳು ಒಡೆದು ಹೋಗಿವೆ. ಇದೇ ರೀತಿ ಅಘಲಯ ಮುಂತಾದ ಕಡೆ ಕೆರೆ ಏರಿ ಮತ್ತು ಸೇತುವೆಗಳಿಗೆ ಹಾನಿಯಾಗಿದೆ. ಬರಪೀಡಿತ ಸಂತೇಬಾಚಹಳ್ಳಿ ಹೋಬಳಿ ಕೆರೆಗಳು ಈ ಪ್ರದೇಶದ ರೈತ ಜೀವನಾಡಿಗಳು. ಈ ಹಿಂದಿನ ಸರ್ಕಾರದಲ್ಲಿ ಒಡೆದು ಹೋಗಿದ್ದ ಕೆರೆಗಳ ಪುನರ್ ನಿರ್ಮಾಣ ಆಗಿದ್ದರೆ ಮಳೆ ಬಂದಾಗ ಒಂದಷ್ಟು ನೀರು ಕೆರೆಗಳಲ್ಲಿ ಸಂಗ್ರಹವಾಗಿ ಜನ ಜಾನುವಾರುಗಳಿಗೆ ಅನುಕೂಲವಾಗುತ್ತಿತ್ತು ಎಂದರು.
ಒಡೆದು ಹೋಗಿರುವ ಕೆರೆಗಳು ಮತ್ತು ಹಾನಿಗೀಡಾಗಿರುವ ಸಂಪರ್ಕ ಸೇತುಗಳಿಂದ ಇಲ್ಲಿನ ಜನ ಸಂಕಷ್ಠಕ್ಕೆ ಒಳಗಾಗಿದ್ದಾರೆ. ಸಚಿವರು ಹಾನಿಗೊಳಗಾದ ಕೆರೆ ಕಟ್ಟೆಗಳ ಪುನರ್ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸಿಕೊಡುವಂತೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಈ ಹಿಂದೆ ಅತಿವೃಷ್ಠಿಯಿಂದ ಒಡೆದು ಹೋಗಿರುವ ಕೆರೆ ಕಟ್ಟೆಗಳ ಪುನರ್ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.
ಈ ವೇಳೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮುಖಂಡರಾದ ವಿಜಯರಾಮೇಗೌಡ, ಕೋಡಿ ಮಾರನಹಳ್ಳಿ ದೇವರಾಜು, ಎಂ.ಡಿ.ಕೃಷ್ಣಮೂರ್ತಿ, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿರ್ದೇಶಕ ಶೀಳನೆರೆ ಮೋಹನ್, ಪಾಂಡವಪುರ ಉಪ ವಿಭಾಗಧಿಕಾರಿ ನಂದೀಸ್, ತಹಸೀಲ್ದಾರ್ ನಿಸರ್ಗಪ್ರಿಯ, ಇ.ಓ ಬಿ.ಎಸ್.ಸತೀಶ್ ಸೇರಿದಂತೆ ನೀರಾವರಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಬರ ಪರಿಶೀಲನೆಯ ವೇಳೆ ಹಾಜರಿದ್ದು ಮಾಹಿತಿ ನೀಡಿದರು.