ಕಾವೇರಿ 2.0 ತಂತ್ರಾಂಶದಿಂದ ನೋಂದಣಿ ವೇಗ ಹೆಚ್ಚಿದೆ
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕಾವೇರಿ 2.0 ತಂತ್ರಾಂಶದಿಂದಾಗಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿನ ಕೆಲಸಗಳು ವೇಗ ಪಡೆದುಕೊಂಡಿವೆ ಎಂದು ಮುದ್ರಾಂಕ ಆಯುಕ್ತರು ಮತ್ತು ನೋಂದಣಿಯ ಇನ್‌ಸ್ಪೆಕ್ಟರ್ ಜನರಲ್ ಡಾ.ಬಿ.ಆರ್. ಮಮತಾ ತಿಳಿಸಿದ್ದಾರೆ.
ಮೈಸೂರು : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕಾವೇರಿ 2.0 ತಂತ್ರಾಂಶದಿಂದಾಗಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿನ ಕೆಲಸಗಳು ವೇಗ ಪಡೆದುಕೊಂಡಿವೆ ಎಂದು ಮುದ್ರಾಂಕ ಆಯುಕ್ತರು ಮತ್ತು ನೋಂದಣಿಯ ಇನ್‌ಸ್ಪೆಕ್ಟರ್ ಜನರಲ್ ಡಾ.ಬಿ.ಆರ್. ಮಮತಾ ತಿಳಿಸಿದ್ದಾರೆ.
ಕ್ರೆಡೈ ಸಂಸ್ಥೆಯು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾವೇರಿ 2.0 ತಂತ್ರಾಂಶ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರು ನೋಂದಣಿಗೆ ಮುಂಚಿನ ಪ್ರಕ್ರಿಯೆಯನ್ನು ಈ ತಂತ್ರಾಂಶ ಸುಲಭ ಮಾಡಿಕೊಡುತ್ತದೆ. ಮನೆಯಲ್ಲಿಯೇ ಕುಳಿತು ಎಲ್ಲಾ ದಾಖಲಾತಿ ನೀಡಬಹುದು. ನೋಂದಣಿ ಸಮಯದಲ್ಲಿ ಹತ್ತು ನಿಮಿಷವಷ್ಟೆಕಚೇರಿಗೆ ಬಂದು ಹೋಗಬೇಕಾಗುತ್ತದೆ. ಉಳಿದಂತೆ ಎಲ್ಲಾ ಪ್ರಕ್ರಿಯೆ ಸುಲಭವಾಗಿದೆ ಎಂದರು.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾವೇರಿ 2.0 ತಂತ್ರಾಂಶವು ಒಂದು ಕ್ರಾಂತಿಕಾರಕವಾಗಿದೆ. ಇದು ನೋಂದಣಿ ಪ್ರಕ್ರಿಯೆ ಸುಲಭ ಮಾಡಿರುವುದಲ್ಲದೆ ಮಧ್ಯವರ್ತಿಗಳ ಹಾವಳಿ ತಡೆಗಟ್ಟಿದೆ. ಖರೀದಿಸುವವರು ಅಗತ್ಯ ದಾಖಲಾತಿಯನ್ನು ತಾವು ಇರುವ ಸ್ಥಳದಲ್ಲಿಯೇ ಅಪ್‌ಲೋಡ್ ಮಾಡಿದರೆ, ಅದನ್ನು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಪರಿಶೀಲಿಸಿ ನೋಂದಣಿ ದಿನಾಂಕ, ಸಮಯ ತಿಳಿಸಲಾಗುತ್ತದೆ. ಅಗತ್ಯವಿದ್ದರೆ ತಮಗೆ ಬೇಕಾದ ದಿನವೇ ನೋಂದಣಿ ದಿನಾಂಕ ಪಡೆಯಬಹುದು. ಈಗ ಮುದ್ರಾಂಕ ಶುಲ್ಕಪಾವತಿಸಿದರೆ ನಿಮ್ಮ ನೋಂದಣಿ ಪ್ರಕ್ರಿಯೆ ಮಧ್ಯವರ್ತಿಗಳಿಲ್ಲದೆ ಸುಲಭದರಲ್ಲಿ ಮುಗಿಯುತ್ತದೆ ಎಂದರು.
ರಾಜ್ಯದ 260 ಉಪ ನೋಂದಣಾಧಿಕಾರಿ ಕಚೇರಿಗೂ ಈ ತಂತ್ರಾಂಶ ನೀಡಲಾಗಿದೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಇನ್ನು 10 ನಿಮಿಷದಲ್ಲಿ ಕೆಲಸ ಆಗುತ್ತದೆ. ಒಮ್ಮೆ ನೋಂದಣಿಯಾದರೆ ಡಿಜಿಟಲೀಕರಿಸಿದ ದಾಖಲಾತಿ ಲಭ್ಯವಾಗಲಿದೆ. ಈ ತಂತ್ರಾಂಶದ ಪರೀಕ್ಷೆ ನಡೆದಿದ್ದು, ಜನಸಾಮಾನ್ಯರು ಸುಲಭವಾಗಿ ಬಳಸಬಹುದಾಗಿದೆ ಎಂಬ ವರದಿ ಬಂದ ಬಳಿಕವೇ ಜಾರಿಗೊಳಿಸಲಾಗಿದೆ ಎಂದರು.
ಕ್ರೆಡೈನ ಮೈಸೂರು ಅಧ್ಯಕ್ಷ ಡಿ. ಶ್ರೀಹರಿ, ಕಾರ್ಯದರ್ಶಿ ಎಲ್. ಅರುಣ್‌ಪಂಡಿತ್, ಕೆ.ಎಸ್. ಬಾಲಾಜಿ, ಎಐಜಿಆರ್ ಎಚ್.ಎಲ್. ಪ್ರಭಾಕರ್, ಬಿಎಐ ಅಧ್ಯಕ್ಷ ನಾಗರಾಜ್ ವಿ. ಭೈರಿ, ಜಿಲ್ಲಾ ನೋಂದಣಾಧಿಕಾರಿ ಬಿ.ಎಂ. ಮೋಹನ್‌ಕುಮಾರ್ ಪಂಡಿತ್, ಯುವ ಘಟಕದ ಘನಶ್ಯಾಂ ಮುರಳಿ, ಕಾರ್ಯದರ್ಶಿ ನಿಖಿಲ್ ಪಿ. ಕೌಂಡಿನ್ಯ ಇದ್ದರು.