ಬೆಂಗಳೂರು(ಅ.27): ನಗರದಲ್ಲಿ ಕೆಲವು ದಿನಗಳಿಂದ ಅಬ್ಬರಿಸುತ್ತಿದ್ದ ವರುಣ ಈಗ ಸಂಪೂರ್ಣ ತಣ್ಣಗಾಗಿದ್ದಾನೆ. ಸೋಮವಾರ ಬೆಂಗಳೂರು ಉತ್ತರ ಭಾಗದಲ್ಲಿ ಮಾತ್ರ ತುಂತುರು ಮಳೆ ಬಿದ್ದಿದೆ.

ಸೋಮವಾರ ದಿನವಿಡೀ ಬಿಸಿಲಿನ ವಾತಾವರಣ ಕಂಡು ಬಂತು. ನಗರದ ಕಡುಬಗೆರೆ, ಬಾಗಲಕುಂಟೆ, ಚುಂಚನಕುಪ್ಪೆ, ದೊಮ್ಮಲೂರಿನಲ್ಲಿ ತುಂತುರು ಮಳೆ ಬಂದದ್ದು ಬಿಟ್ಟರೆ, ಎಲ್ಲಿಯೂ ಹೆಚ್ಚು ಮಳೆ ಬಿದ್ದ ಬಗ್ಗೆ ವರದಿಯಾಗಿಲ್ಲ. ತಾಪಮಾನ ಗರಿಷ್ಠ 30, ಕನಿಷ್ಠ 19.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಇನ್ನೆರಡು ದಿನ ಬೆಂಗಳೂರಿನಲ್ಲಿ ಬಿಲಿಸಿನ ವಾತಾವರಣವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಮತ್ತೆ ಸುರಿಯುತ್ತೆ ಭಾರಿ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ

ಹಗುರ ಮಳೆ:

ಭಾನುವಾರ ರಾತ್ರಿ ನಗರದ ಕೆಲವೆಡೆ ಹಗುರದಿಂದ ಸಾಧಾರಣ ಮಳೆ ಆಗಿದೆ. ಆರ್‌.ಆರ್‌.ನಗರ ಮತ್ತು ಪಶ್ಚಿಮ ವಲಯದ ವ್ಯಾಪ್ತಿಯ ಐದು ವಾರ್ಡ್‌ಗಳಲ್ಲಿ 20 ಮಿ.ಮೀ.ಗಿಂತ ಹೆಚ್ಚು ಮಳೆ ಬಿದ್ದಿದೆ. ದೊಡ್ಡಬಿದರಕಲ್ಲಿನಲ್ಲಿ 32.5 ಮಿ.ಮೀ ಮಳೆಯಾಗಿದೆ. ಉಳಿದಂತೆ ಚಿಕ್ಕಸಂದ್ರ 26.5, ನಾಗಪುರ, ನಂದಿನಿ ಬಡಾವಣೆ ಮತ್ತು ರಾಜಾಜಿನಗರದಲ್ಲಿ ತಲಾ 25.5, ಆರ್‌.ಆರ್‌.ನಗರ ಎಚ್‌ಎಂಟಿ ಬಡಾವಣೆ 19.5, ಜ್ಞಾನಭಾರತಿ 19, ಎಚ್‌.ಗೊಲ್ಲಹಳ್ಳಿ ಮತ್ತು ಹಮ್ಮಿಗೆಪುರ ತಲಾ 16, ಹಾರೋಹಳ್ಳಿ ತಲಾ 15.5, ಕೊಡಿಗೆಹಳ್ಳಿ ಹಾಗೂ ಬ್ಯಾಟರಾಯನಪುರ ತಲಾ 14, ಶೆಟ್ಟಿಹಳ್ಳಿ 13, ಮಾರುತಿಮಂದಿರ ಮತ್ತು ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ತಲಾ 12.5 ಮಿ.ಮೀ. ಮಳೆ ದಾಖಲಾಗಿದೆ.