Asianet Suvarna News Asianet Suvarna News

ಜಾತಿ ಗೊತ್ತಿಲ್ಲದ ಮಕ್ಕಳಿಗೂ ಮೀಸಲಾತಿಗೆ ಶಿಫಾರಸು; ಕೆ.ಜಯಪ್ರಕಾಶ್‌ ಹೆಗ್ಡೆ

  • ಜಾತಿ ಗೊತ್ತಿಲ್ಲದ ಮಕ್ಕಳಿಗೂ ಮೀಸಲಾತಿಗೆ ಶಿಫಾರಸು
  • -ಶಿಕ್ಷಣ, ಉದ್ಯೋಗಗಳಲ್ಲಿ ಅವಕಾಶ ಅಗತ್ಯತೆ ಬಗ್ಗೆ ಸರ್ಕಾರಕ್ಕೆ ವರದಿ: ಕೆ.ಜಯಪ್ರಕಾಶ್‌ ಹೆಗ್ಡೆ
Recommendation for reservation  who do not know caste says K. Jayaprakash Hegde rav
Author
First Published Sep 15, 2022, 5:35 AM IST

ಸುಭಾಶ್ಚಂದ್ರ ವಾಗ್ಳೆ

 ಉಡುಪಿ (ಸೆ.15) : ಯಾವುದೋ ಕಾರಣಕ್ಕೆ ಹೆತ್ತವರನ್ನು ಕಳೆದುಕೊಂಡಿರುವ ಅಥವಾ ಪರಿತ್ಯಕ್ತರಾಗಿರುವ ಅಥವಾ ಒಂಟಿ ಹೆತ್ತವರ ಮಕ್ಕಳಿಗೆ ಜಾತಿ ಯಾವುದು ಎಂಬುದು ಗೊತ್ತಿರುವುದಿಲ್ಲ ಅಥವಾ ಜಾತಿ ಬಗ್ಗೆ ಅವರಲ್ಲಿ ಯಾವುದೇ ದಾಖಲೆಗಳಿರುವುದಿಲ್ಲ. ರಾಜ್ಯದಲ್ಲಿರುವ ಇಂತಹ ಸಾವಿರಾರು ಮಂದಿ ಜಾತಿ ಇಲ್ಲದ ಮಕ್ಕಳಿಗೂ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಮೀಸಲಾತಿ ನೀಡಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್‌ ಹೆಗ್ಡೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಏಳ್ಗೆಗೆ ಬಜೆಟ್‌ನಲ್ಲಿ ಪ್ರತ್ಯೇಕ 400 ಕೋಟಿ ರು.: ಸಚಿವ ಸುನಿಲ್‌ ಕುಮಾರ್‌

ಸಾಂವಿಧಾನಿಕವಾಗಿ ನಮ್ಮದು ಜಾತ್ಯತೀತ ರಾಷ್ಟ್ರವಾಗಿದ್ದರೂ, ನಮ್ಮ ದೇಶದಲ್ಲಿ ಮೀಸಲಾತಿಯನ್ನು ಜಾತಿಯ ಆಧಾರದಲ್ಲಿಯೇ ನೀಡಲಾಗುತ್ತಿದೆ. ಆದರೆ ಜಾತಿಯೇ ಇಲ್ಲದವರೂ ನಮ್ಮ ದೇಶದಲ್ಲಿದ್ದಾರೆ. ಆರ್ಥಿಕವಾಗಿಯೂ ಅವರು ಸಾಕಷ್ಟುಸಂಕಷ್ಟದಲಿದ್ದು ಯಾವ ಮೀಸಲಾತಿಯೂ ಸಿಗುತ್ತಿಲ್ಲ. ಈ ಕಾರಣಕ್ಕೆ ಅವರನ್ನು ಮೀಸಲಾತಿಯಡಿ ತರಬೇಕು. ಸರ್ಕಾರ ಅವರ ಬೆಂಬಲಕ್ಕೆ ನಿಲ್ಲುವ ಮೂಲ ಧೈರ್ಯ, ಪ್ರೋತ್ಸಾಹ ನೀಡಬೇಕು ಎಂಬ ಕಾರಣಕ್ಕೆ ಜಯಪ್ರಕಾಶ್‌ ಹೆಗ್ಡೆ ಸರ್ಕಾರಕ್ಕೆ ಶಿಫಾರಸು ಮಾಡುತ್ತಿದ್ದಾರೆ.

ಸರ್ಕಾರಕ್ಕೆ ವರದಿ: ಇಂತಹ ಮಕ್ಕಳಿಗೆ ಜಾತಿ ಪ್ರಮಾಣಪತ್ರ ನೀಡುವ ಸರ್ಕಾರಿ ಅಧಿಕಾರಿಗಳೂ ಅಸಹಾಯಕರಾಗಿರುತ್ತಾರೆ. ಆದ್ದರಿಂದ ಅವರು ಆರ್ಥಿಕವಾಗಿ ಹಿಂದುಳಿದಿದ್ದರೂ, ಅವರಲ್ಲಿ ಸಾಕಷ್ಟುಮಂದಿ ಶಿಕ್ಷಣದಿಂದ ಮತ್ತು ಸರ್ಕಾರಿ ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ನಿಜವಾದ ಜಾತ್ಯತೀತರಾದವರಿಗೂ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಮೀಸಲಾತಿ ನೀಡಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ, ಈ ಬಗ್ಗೆ ವರದಿಯೊಂದನ್ನು ಸರ್ಕಾರಕ್ಕೆ ನೀಡುವುದಾಗಿ ಜಯಪಪ್ರಕಾಶ್‌ ಹೆಗ್ಡೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ರಾಜ್ಯದಲ್ಲಿದ್ದಾರೆ 40 ಸಾವಿರಕ್ಕೂ ಹೆಚ್ಚು ಮಂದಿ:ರಾಜ್ಯದಲ್ಲಿ ಸುಮಾರು 40ರಿಂದ 50 ಸಾವಿರದಷ್ಟುಜಾತಿಯಿಂದ ಅತೀತರಾಗಿರುವ ಮಕ್ಕಳಿದ್ದಾರೆ. ಅವರು ಆರ್ಥಿಕವಾಗಿ ತೀರಾ ಹಿಂದುಳಿದಿದ್ದು, ಮೀಸಲಾತಿ ಪಡೆಯುವ ಅರ್ಹತೆ - ಅಗತ್ಯ ಇದ್ದರೂ ಜಾತಿಯ ಬಗ್ಗೆ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಉನ್ನತ ಶಿಕ್ಷಣ ಮತ್ತು ಉದ್ಯೋಗ ಪಡೆಯುವುದಕ್ಕೆ ಅಸಾಧ್ಯವಾದ ಸಾಕಷ್ಟುಪ್ರಕರಣಗಳು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ನ್ಯಾಯ ಒದಗಿಸುವುದಕ್ಕೆ ಸರ್ಕಾರಕ್ಕೆ ಮೀಸಲಾತಿಯ ಶಿಫಾರಸು ಮಾಡುತ್ತಿದ್ದೇನೆ ಎಂದವರು ತಿಳಿಸಿದ್ದಾರೆ. ಎಷ್ಟುಮೀಸಲಾತಿ ನೀಡಬೇಕು ಎಂಬ ಬಗ್ಗೆ ಇನ್ನಷ್ಟೇ ನಿರ್ಧಾರ ಆಗಬೇಕಾಗಿದೆ ಎಂದು ಹೆಗ್ಡೆ ಹೇಳಿದ್ದಾರೆ.

ಅವರನ್ನು ಅನಾಥರೆಂದು ಕರೆಯುವುದಿಲ್ಲ

ಹೆತ್ತವರು ಇಲ್ಲ ಎನ್ನುವ ಕಾರಣಕ್ಕೆ ಅವರನ್ನು ಅನಾಥರೆಂದು ಕರೆಯುವುದು ಸರಿಯಲ್ಲ, ಅವರನ್ನು ಸಂಬೊಧಿಸುವುದಕ್ಕೆ ಪ್ರತ್ಯೇಕ ಶಬ್ದವನ್ನು ಕೂಡ ಶಿಪಾರಸು ಮಾಡುತ್ತೇವೆ. ಅವರು ಅನಾಥರಲ್ಲ, ಅವರ ಜೊತೆ ಸರ್ಕಾರ ಇದೆ ಎನ್ನುವ ಧೈರ್ಯವನ್ನು ತುಂಬಿ, ಇತರಂತೆ ಶಿಕ್ಷಣ ಉದ್ಯೋಗ ಪಡೆಯುವುದಕ್ಕಾಗಿಯೇ ಈ ಮೀಸಲಾತಿಯ ನೀಡುವ ಅಗತ್ಯವಿದೆ

-ಕೆ.ಜಯಪ್ರಕಾಶ್‌ ಹೆಗ್ಡೆ, ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ

Follow Us:
Download App:
  • android
  • ios