ಒಳಮೀಸಲಾತಿ, ಕಾಂತರಾಜು ವರದಿ, 2ಬಿ ಮರು ಸ್ಥಾಪಿಸಲು ಆಗ್ರಹ
ಪರಿಶಿಷ್ಟ ಜಾತಿಯಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸುವಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿ, ಕಾಂತರಾಜು ಆಯೋಗದ ವರದಿ ಜಾರಿ ಹಾಗೂ ಅಲ್ಪಸಂಖ್ಯಾತರ ೨ಬಿ ಮೀಸಲಾತಿ ಮರು ಸ್ಥಾಪನೆಗೆ ಒತ್ತಾಯಿಸಿ ಎಸ್.ಡಿ.ಪಿ.ಐ ಪಕ್ಷದಿಂದ ಸಾಮಾಜಿಕ ನ್ಯಾಯಕ್ಕಾಗಿ ಬೆಳಗಾವಿ ಚಲೋ ಜಾಥಾ ಇಂದು ತುಮಕೂರಿಗೆ ಆಗಮಿಸಿದೆ. ಎಸ್.ಡಿಪಿಐ ಮುಖಂಡರು ಜಾಥಾ ಸ್ವಾಗತಿಸಿ ಬೀಳ್ಕೊಟ್ಟರು.
ತುಮಕೂರು : ಪರಿಶಿಷ್ಟ ಜಾತಿಯಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸುವಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿ, ಕಾಂತರಾಜು ಆಯೋಗದ ವರದಿ ಜಾರಿ ಹಾಗೂ ಅಲ್ಪಸಂಖ್ಯಾತರ ೨ಬಿ ಮೀಸಲಾತಿ ಮರು ಸ್ಥಾಪನೆಗೆ ಒತ್ತಾಯಿಸಿ ಎಸ್.ಡಿ.ಪಿ.ಐ ಪಕ್ಷದಿಂದ ಸಾಮಾಜಿಕ ನ್ಯಾಯಕ್ಕಾಗಿ ಬೆಳಗಾವಿ ಚಲೋ ಜಾಥಾ ಇಂದು ತುಮಕೂರಿಗೆ ಆಗಮಿಸಿದೆ. ಎಸ್.ಡಿಪಿಐ ಮುಖಂಡರು ಜಾಥಾ ಸ್ವಾಗತಿಸಿ ಬೀಳ್ಕೊಟ್ಟರು.
ಸೋಷಿಯಲ್ ಡೆಮಾಕ್ರಟಿಕ್ ಪಾಟಿ ಅಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಪ್ರಧಾನ ಕಾರ್ಯದರ್ಶಿ ಅರ್ಸ್ವ ಕೊಡ್ಲಿಪೇಟೆ, ಭಾಸ್ಕರಪ್ರಸಾದ್ ಮತ್ತಿತರ ಮುಖಂಡರ ನೇತೃತ್ವದಲ್ಲಿ ಡಿ.6ರ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದಂದು ಬೆಂಗಳೂರಿನಿಂದ ಹೊರಟಿರುವ ಸಾಮಾಜಿಕ ನ್ಯಾಯಕ್ಕಾಗಿ ಬೆಳಗಾವಿ ಚಲೋ ಅಂಬೇಡ್ಕರ್ ರಥಯಾತ್ರೆ ಸಂಜೆ ನಾಲ್ಕುಗಂಟೆಗೆ ತುಮಕೂರಿಗೆ ತಲುಪಿದ್ದು, ಜಿಲ್ಲಾ ಮುಖಂಡರಾದ ಉಮರುದ್ದೀನ್, ಶಪಿ ಅಹಮದ್, ನಗರ ಅಧ್ಯಕ್ಷ ರಿಜ್ವಾನ್ ಖಾನ್, ಜಿಲ್ಲಾ ಸಮಿತಿ ಸದಸ್ಯ ಮುಕ್ತಿಯಾರ್ ಅಹಮದ್ ಸೇರಿದಂತೆ ಹಲವು ಮುಖಂಡರು ರಾಜೀವ್‌ಗಾಂಧಿ ನಗರದ ಬಳಿ ಜಾಥಾ ಬರಮಾಡಿಕೊಂಡರು.
ಎಸ್.ಡಿ.ಪಿ.ಐ ರಾಜ್ಯ ಪ್ರ.ಕಾ ಭಾಸ್ಕರ್ ಪ್ರಸಾದ್, ಕಳೆದ ಮೂವತ್ತು ವರ್ಷಗಳಿಂದ ಪರಿಶಿಷ್ಟ ಜಾತಿಯಲ್ಲಿನ ಜನಸಂಖ್ಯೆಗೆ ಅನುಗುಣ ಒಳಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸುತ್ತಾ ಬಂದಿದ್ದರೂ ಇದುವರೆಗೂ ಆಡಳಿತ ನಡೆಸಿದ ಸರ್ಕಾರ ನಿರ್ಲಕ್ಷಿಸಿದೆ.
ಕಳೆದ ಚುನಾವಣೆಯಲ್ಲಿ ಒಳಮೀಸಲಾತಿ ಜಾರಿ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದರೂ ಸಾಮಾಜಿಕ ನ್ಯಾಯದ ಪರ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಡ, ಬಲಗಳ ನಡುವಿನ ಭಿನ್ನಾಭಿಪ್ರಾಯವನ್ನೇ ನೆಪ ಮಾಡಿಕೊಂಡು, ಖರ್ಗೆ ಅವರನ್ನು ಒಪ್ಪಿಸಿ, ಡಾ.ಜಿ.ಪರಮೇಶ್ವರ್ ಅವರನ್ನು ಒಪ್ಪಿಸಿಕೊಂಡು ಬನ್ನಿ ಎಂದು ಸಬೂಬು ಹೇಳುತಿದ್ದಾರೆ. ಅವರನ್ನು ಒಪ್ಪಿಸುವುದಾದರೆ ನೀವು ಇರುವುದು ಏಕೆ ಎಂಬ ಪ್ರಶ್ನೆ ಎದುರಾಗಿದೆ. ಲಿಂಗಾಯಿತರಿಗೆ ಪ್ರತ್ಯೇಕ ಧರ್ಮ, ಇಡಬ್ಲು ಎಸ್ ನೀಡುವಾಗ ಯಾರನ್ನು ಒಪ್ಪಿಸಿದ್ದೀರಿ ಎಂದು ಪ್ರಶ್ನಿಸಿದರು.
ಈ ರಾಜ್ಯದಲ್ಲಿ ಬದುಕಿರುವ ಶೋಷಿತರು, ಅಲ್ಪಸಂಖ್ಯಾತರು, ಬಡವರ ಅರ್ಥಿಕ, ಸಾಮಾಜಿಕ ಸ್ಥಿತಿಗತಿ ಅರಿಯಲು ನ್ಯಾ.ಕಾಂತರಾಜು ಆಯೋಗ ರಚಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, 2015 ರಲ್ಲಿಯೇ ವರದಿ ನೀಡಿದ್ದರು. ಇದುವರೆಗೂ ಅದನ್ನು ಸ್ವೀಕರಿಸುವ ಮನಸ್ಸು ಮಾಡಿಲ್ಲ. ಈ ನಡುವೆ ಕಾಂತರಾಜು ಆಯೋಗದ ವರದಿ ಸ್ವೀಕಾರಕ್ಕೆ ಕಾಂಗ್ರೆಸ್ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗುತ್ತಿರುವುದು ಖಂಡನೀಯ.
ಈ ವರದಿ ಜಾರಿಯಾದರೆ ಮಾತ್ರ ಈ ರಾಜ್ಯದ ಶೋಷಿತ ಸಮುದಾಯಗಳು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಯಾವ ಸ್ಥಿತಿಯಲ್ಲಿವೆ. ಅವರ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಗಳೇನು ಎಂದು ಅರ್ಥವಾಗಲಿದೆ. ಹಾಗಾಗಿ, ಸರಕಾರ ಕೂಡಲೇ ಕಾಂತರಾಜು ಆಯೋಗದ ವರದಿ ಜಾರಿ ಮಾಡಬೇಕೆಂಬುದು ನಮ್ಮ ಆಗ್ರಹ ಎಂದರು.
ಕಳೆದ ನಲವತ್ತು ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಶೇ 2ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ವೇಳೆ 2ಬಿ ಯನ್ನು ಧಾರ್ಮಿಕ ಮೀಸಲಾತಿ ಎಂಬಂತೆ ಬಿಂಬಿಸಿ ರದ್ದು ಮಾಡಿದ್ದರು. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿದ ಪರಿಣಾಮ ನ್ಯಾಯಾಲಯ ಸರ್ಕಾರದ ನಡೆ ಸಂವಿಧಾನ ಬಾಹಿರ ಎಂದು ಹೇಳಿದೆ.
ನಮ್ಮ ಸರಕಾರ ಬಂದರೆ ಮೊದಲು ಸಚಿವ ಸಂಪುಟದಲ್ಲಿಯೇ 2 ಬಿ ಮೀಸಲಾತಿ ಮರುಸ್ಥಾಪಿಸುವ ಭರವಸೆ ನೀಡಿದ್ದ ಸಿದ್ದರಾಮಯ್ಯ ಅವರು ಇದುವರೆಗೂ 13 ಸಚಿವ ಸಂಪುಟದ ಸಭೆ ನಡೆದರೂ ಇದುವರೆಗೂ ೨ ಬಿ ಮೀಸಲಾತಿ ಬಗ್ಗೆ ಚಕಾರ ಎತ್ತಿಲ್ಲ. ಇವರ ಮಾತನ್ನು ನಂಬಿ ಮತ ಹಾಕಿದ ನಾವುಗಳು ಮೋಸ ಹೋಗಿದ್ದೇವೆ ಎಂದು ಆರೋಪಿಸಿದರು.
ಸರಕಾರ ಚಳಿಗಾಲದ ಅಧಿವೇಶನದಲ್ಲಿ ಮೂರು ವಿಚಾರಗಳ ಜಾರಿಗೆ ತರಬೇಕೆಂಬುದು ಎಸ್.ಡಿ.ಪಿ.ಐ ಆಗ್ರಹವಾಗಿದೆ. ಸರಕಾರದ ಮೇಲೆ ಒತ್ತಡ ತರುವಲ್ಲಿ ಡಿ.೧೧ ರಂದು ನಾವು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ದಲಿತರು, ಅಲ್ಪಸಂಖ್ಯಾತರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಜಾಥಾದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.