Asianet Suvarna News Asianet Suvarna News

ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷರ ಬದಲಾವಣೆ, ಪಕ್ಷ ನಿಷ್ಠೆಗೆ ಮಣೆ

* ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷರ ಬದಲಾವಣೆ
* ಹೆಬ್ಬಾಕ ರವಿ ಹೆಗಲಿಗೆ ಬಿಜೆಪಿ ಜಿಲ್ಲಾ ಸಾರಥ್ಯ
* ಕೊನೆಗೂ  ಪಕ್ಷ ನಿಷ್ಠೆಗೆ ಒಲಿದ ಅದೃಷ್ಟ

Ravi Hebbaka Appointed As Tumakuru BJP President rbj
Author
Bengaluru, First Published May 19, 2022, 12:33 PM IST

ವರದಿ ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು

ತುಮಕೂರು, (ಮೇ.19) :
ಲಕ್ಷ್ಮೀಶ್ ರಾಜೀನಾಮೆಯಿಂದ ತೆರವಾಗಿದ್ದ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ಹೊಸಬರನ್ನ ನೇಮಕ ಮಾಡಲಾಗಿದೆ. ಮೂರು ಬಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಎಚ್.ಎಸ್. ರವಿಶಂಕರ್ (ಹೆಬ್ಬಾಕರವಿ) ಅವರಿಗೆ ಅಧ್ಯಕ್ಷ ಸ್ಥಾನ ಒಲಿದುಬಂದಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪಕ್ಕ ಬೆಂಬಲಿಗರಾಗಿ ಗುರುತಿಸಿಕೊಂಡು ಕೆಜೆಪಿ ಪಕ್ಷ ಕಟ್ಟಿದ ಸಂದರ್ಭದಲ್ಲಿ ತುಮಕೂರು ಜಿಲ್ಲಾಧ್ಯಕ್ಷರಾಗಿದ್ದ ರವಿಶಂಕರ್‌ ಗೆ ಸಾಕಷ್ಟು ವಿರೋಧಗಳ ನಡುವೆಯೂ ಅಂತಿಮವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಸಿಕ್ಕಿದೆ. ಜಿಲ್ಲಾ ಘಟಕದೊಳಗಿನ 3 ಬಣಗಳನ್ನು ಸಂಭಾಳಿಸಿಕೊಂಡು ಹೋಗುವ ದೊಡ್ಡ ಸವಾಲು ಈಗ ಹೆಬ್ಬಾಕರವಿ ಅವರ ಹೆಗಲಿಗೆ ಬಿದ್ದಿದೆ.

6 ತಿಂಗಳಲ್ಲಿ ಇಬ್ಬರು ಜಿಲ್ಲಾಧ್ಯಕ್ಷರು ಬದಲಾಗಿದ್ದು ಪಕ್ಷ ಸಂಘಟನೆಗೆ ಹಿನ್ನಡೆಯಾಗಿತ್ತು. ಹಾಗಾಗಿ, ವರಿಷ್ಠರ ಮೇಲೆ ಆದಷ್ಟು ಬೇಗ ಹೊಸ ಅಧ್ಯಕ್ಷರನ್ನು ನೇಮಿಸುವ ಜವಾಬ್ದಾರಿ ಇತ್ತು. ಈ ಮಧ್ಯೆ ಲಕ್ಷ್ಮೀಶ್ ಮನವೊಲಿಕೆಗೆ ಸಾಕಷ್ಟು ಕಸರತ್ತುಗಳನ್ನು ಸ್ಥಳೀಯ ಮುಖಂಡರು ನಡೆಸಿದ್ದರಾದರೂ ಪಕ್ಷಕ್ಕೆ ಗುಡ್‌ಬೈ ಹೇಳಿರುವ ನಿರ್ಧಾರದಿಂದ ಅವರು ಹಿಂದೆ ಸರಿಯಲಿಲ್ಲ.

ನಮ್ಮ ಪಕ್ಷದವರ ಕುತಂತ್ರದಿಂದ ಎಲೆಕ್ಷನ್‌ ಸೋತೆ : ರಾಜೀನಾಮೆ ಕೊಟ್ಟ ಬಿಜೆಪಿ ಮುಖಂಡ

ಕೊನೆಗೂ ಒಲಿದ ಪಟ್ಟ: 
ಬಿಜೆಪಿಯಲ್ಲಿ ಕೆಜೆಪಿ ವಿಲೀನಗೊಂಡ ಬಳಿಕ ಮತ್ತೆ ಪಕ್ಷಕ್ಕೆ ಮರಳಿದ ಹೆಬ್ಬಾಕರವಿಗೆ 2-3 ಬಾರಿ ಅಧ್ಯಕ್ಷ ಸ್ಥಾನ ಕೈತಪ್ಪಿತ್ತು. ಪಕ್ಷದೊಳಗಿನ ಬಣ ರಾಜಕೀಯದಿಂದಾಗಿ ರವಿ ಅವರಿಗೆ ಅವಕಾಶ ವಂಚಿತರಾಗಿದ್ದರು. ಈಗ ಚುನಾವಣೆಗೆ ವರ್ಷ ಬಾಕಿ ಇರುವಾಗ ಪಕ್ಷದ ಸಾರಥ್ಯವನ್ನು ರವಿ ಹೆಗಲಿಗೆ ವರಿಸುವ ನಿರ್ಧಾರವನ್ನು ವರಿಷ್ಠರು ತೆಗೆದುಕೊಂಡಿದ್ದು ಹೆಬ್ಬಾಕ ರವಿ ಅವರ ಬೆಂಬಲಿಗರಿಗೆ ಹರ್ಷ ಉಂಟು ಮಾಡಿದೆ.

ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಂಘಟನೆಯ ಜೊತೆ ಜತೆಗೆ ಜಾತಿಬಲ, ಹಣಬಲ ಲೆಕ್ಕಾಚಾರ ಆಧಾರದಲ್ಲೇ ನೂತನ ಸಾರಥಿಯನ್ನು ಆಯ್ಕೆ ಮಾಡಲಾಗಿದೆ. ಮಧುಗಿರಿ ಜಿಲ್ಲಾ ಘಟಕಕ್ಕೆ ಹಿಂದುಳಿದ ವರ್ಗದ ಬಿ.ಕೆ.ಮಂಜುನಾಥ್‌ರನ್ನು ಮಾಡಿದ್ದು ತುಮಕೂರು ನೇಮಕ ಘಟಕಕ್ಕೆ ಪ್ರಬಲ ಲಿಂಗಾಯತ ಸಮುದಾಯದ ಹೆಬ್ಬಾಕರವಿ ಆಯ್ಕೆ ಮಾಡಿ ಜಾತಿ ಸಮೀಕರಣಕ್ಕೆ ಒತ್ತು ಕೊಡಲಾಗಿದೆ.

ಬಿಜೆಪಿ ತುಮಕೂರು ಜಿಲ್ಲಾ ಘಟಕದಲ್ಲಿ ಮೂರು ಬಣಗಳಿವೆ. ಮಾಜಿ ಸಚಿವ ಸೊಗಡುಶಿವಣ್ಣ, ಸಂಸದ ಜಿ.ಎಸ್.ಬಸವರಾಜು ಹಾಗೂ ಮಾಜಿ ಜಿಲ್ಲಾಧ್ಯಕ್ಷ ಬಿ.ಸರೇಶ್‌ಗೌಡ ನೇತೃತ್ವದ ಬಣಗಳಿದ್ದು, ಈ ಮೂರು ಬಣಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾದ ಸವಾಲು ಹೆಬ್ಬಾಕ ರವಿ ಅವರ ಮುಂದಿದೆ. ಮಾಜಿ ಸಚಿವ ದಿವಂಗತ ಸಾಗರನಹಳ್ಳಿ ರೇವಣ್ಣ ಕುಟುಂಬದ ಕುಡಿ ರವಿಶಂಕರ್ ಬಿ.ಇ., ಪದವೀಧರರಾಗಿದ್ದು 2000ರಲ್ಲಿ ಹೆಬ್ಬಾಕ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು. 2010ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿ ಪಕ್ಷದೊಳಗೆ ಒಂದೊಂದೆ ಮೆಟ್ಟಿಲು ಹತ್ತಿದರು.

Follow Us:
Download App:
  • android
  • ios