ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಮೇ.17): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯತ್ತ ಸಾಗುತ್ತಿದೆ. ಅಧಿಕಾರಿಗಳು ಸಹ ಕೊರೋನಾಕ್ಕೆ ಕಡಿವಾಣ ಹಾಕಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದರೆ ನ್ಯಾಯಬೆಲೆ ಅಂಗಡಿಗೆ ಪಡಿತರ ಪಡೆಯಲು ಮುಗಿಬೀಳುತ್ತಿರುವ ಜನರನ್ನು ನಿಯಂತ್ರಿಸುವುದು ಅಧಿಕಾರಿಗಳು ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ನ್ಯಾಯಬೆಲೆ ಅಂಗಡಿಗಳು ಕೊರೋನಾ ಹಾಟ್‌ಸ್ಪಾಟ್‌ ಆಗುತ್ತಿವೆಯೇ? ಎಂದು ಆತಂಕ ಎದುರಾಗಿದೆ.

ಅಂತೋದ್ಯಯ ಹಾಗೂ ಬಿಪಿಎಲ್‌ ಕಾರ್ಡ್‌ದಾರರಿಗೆ ಸರ್ಕಾರ ಪ್ರಕಟಿಸಿದ ಪ್ಯಾಕೇಜ್‌ ಅನ್ವಯ ಪ್ರತಿ ಸದಸ್ಯರಿಗೆ ತಲಾ ಐದು ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಇದನ್ನು ಪಡೆಯಲು ಜನತೆ ತಾ ಮುಂದು ನಾ ಮುಂದು ಎಂದು ನ್ಯಾಯಬೆಲೆ ಅಂಗಡಿಗೆ ಲಗ್ಗೆ ಇಡುತ್ತಿದ್ದಾರೆ. ಇಲ್ಲಿ ಯಾವುದೇ ರೀತಿಯ ಕೊರೋನಾ ಮುಂಜಾಗ್ರತೆಗಳನ್ನು ತೆಗೆದುಕೊಳ್ಳದೆ ಗುಂಪು ಗುಂಪಾಗಿ ನಿಲ್ಲುತ್ತಿದ್ದಾರೆ. ಇದು ಅಧಿಕಾರಿಗಳಿಗೆ ತಲೆ ಬೀಸಿ ಮಾಡಿದೆ. ನಗರ ಸೇರಿದಂತೆ ಕಮಲಾಪುರ, ಮರಿಯಮ್ಮನಹಳ್ಳಿ ಪಟ್ಟಣ ಸೇರಿದಂತೆ ಹಳ್ಳಿ, ತಾಂಡಾಗಳ ನ್ಯಾಯಬೆಲೆ ಅಂಗಡಿಗಳ ಎದುರು ಈ ಸ್ಥಿತಿ ನಿರ್ಮಾಣವಾಗಿದೆ. ಸರತಿ ಸಾಲಿನಲ್ಲಿ ನಿಲ್ಲಲು ಮಾರ್ಕ್ ಮಾಡಲಾಗಿದೆ. ಆದರೆ, ಜನರು ಇದರೊಳಗೆ ನಿಲ್ಲದೆ ಗುಂಪು ಗುಂಪಾಗಿ ನಿಲ್ಲುತ್ತಿದ್ದಾರೆ. ಅಂಗಡಿಗಳ ಬಳಿ ಸ್ಯಾನಿಟೈಸರ್‌ ಬಳಕೆಯೂ ಇಲ್ಲದಾಗಿದೆ. ಪಡಿತರ ಪಡೆಯಲು ಜನರು ಹೆಚ್ಚಿನ ಆಸ್ಥೆ ವಹಿಸಿದ್ದಾರೆ. ಆದರೆ, ಸಾಮಾಜಿಕ ಅಂತರ ಮರೆತಿರುವುದು ಪ್ರಜ್ಞಾವಂತ ನಾಗರಿಕರಲ್ಲಿ ಕಳವಳ ಮೂಡಿಸಿದೆ.

"

ಈ ತಿಂಗಳ 30ರ ವರೆಗೂ ನ್ಯಾಯಬೆಲೆ ಅಂಗಡಿಗಳು ತೆರೆಯಲಿದ್ದು ಅಲ್ಲಿ ವರೆಗೂ ಪಡಿತರ ನೀಡಲಾಗುತ್ತದೆ. ಆದರೂ ಜನ ಮಾತ್ರ ಸಿಗುತ್ತದೆಯೋ? ಇಲ್ಲವೋ? ಎಂಬ ಆತಂಕದಲ್ಲಿ ಸಾಮಾಜಿಕ ಅಂತರ ಮರೆತು ಅಂಗಡಿಗಳ ಎದುರು ಜಮಾಯಿಸುತ್ತಿರುವುದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೂ ಮತ್ತೊಂದು ಸಂಕಷ್ಟ ತಂದಿದೆ.

ಜನರಿಗೆ ಆರೋಗ್ಯ ಸೇವೆ ಮರೀಚಿಕೆ: ಕೊರೋನಾ ಅಬ್ಬರ ಹೆಚ್ಚಳ

ಟೋಕನ್‌ ವಿತರಿಸಿ:

ಒಂದೊಂದು ನ್ಯಾಯಬೆಲೆ ಅಂಗಡಿಗಳಲ್ಲಿ 900ರಿಂದ 1200 ಕಾರ್ಡ್‌ಗಳು ಇರಬಹುದು. ಹೀಗಾಗಿ 1ರಿಂದ 50ಕ್ಕೆ ಒಂದು ದಿನ ನಿಗದಿಗೊಳಿಸಿ ಟೋಕನ್‌ ವಿತರಿಸಬೇಕು. ಅದೇ ಮಾದರಿಯಲ್ಲಿ ಉಳಿದ ಪಡಿತರದಾರರಿಗೆ ಟೋಕನ್‌ ವಿತರಿಸಿ ಮೊದಲೇ ಡಂಗುರ ಸಾರಿದರೆ ಸಾಮಾಜಿಕ ಅಂತರ ಕಾಪಾಡಬಹುದು ಎಂದು ಹೇಳುತ್ತಾರೆ ನಗರದ ನಿವಾಸಿ ವೈ. ಯಮುನೇಶ್‌.

ಪೊಲೀಸ್‌ ನಿಯೋಜಿಸುವ ಚಿಂತನೆ

ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಆಹಾರ ಇಲಾಖೆಯ ಅಧಿಕಾರಿ ನಾಗರಾಜ್‌ ಹಾಗೂ ಅವರ ಸಿಬ್ಬಂದಿ ಜನರಲ್ಲಿ ಸಾಮಾಜಿಕ ಅಂತರ ಕಾಪಾಡಲು ತಿಳಿವಳಿಕೆ ಕೂಡ ನೀಡುತ್ತಿದ್ದಾರೆ. ಜತೆಗೆ ಟೋಕನ್‌ ವ್ಯವಸ್ಥೆ ಜಾರಿ ಮಾಡಿದ್ದಾರೆ. ಹೀಗಿದ್ದರೂ ಪಡಿತರಕ್ಕಾಗಿ ಸಾಮಾಜಿಕ ಅಂತರ ಮರೆತು ಜನ ಜಮಾಯಿಸುತ್ತಿದ್ದಾರೆ. ಹೀಗಾಗಿ ಕಳೆದ ಲಾಕ್‌ಡೌನ್‌ ವೇಳೆ ಪೊಲೀಸರನ್ನು ನಿಯೋಜನೆ ಮಾಡಿದಂತೆ ಈ ಬಾರಿಯೂ ಮಾಡಲು ಇಲಾಖೆಯ ಅಧಿಕಾರಿಗಳು ಆಲೋಚಿಸಿದ್ದಾರೆ.

ಸಾಮಾಜಿಕ ಅಂತರ ಕಾಪಾಡಲು ಜನರಿಗೆ ತಿಳಿವಳಿಕೆ ಹೇಳಲಾಗುತ್ತಿದೆ. ಬೆಳಗ್ಗೆ 7ರಿಂದ 10ರ ವರೆಗೆ ಪಡಿತರ ವಿತರಿಸಲಾಗುತ್ತಿದೆ. ಸಾಮಾಜಿಕ ಅಂತರ ಪಾಲನೆ ಮಾಡಿಯೇ ವಿತರಿಸಲು ಅಂಗಡಿದಾರರಿಗೆ ತಿಳಿಸಲಾಗಿದೆ. ಆದರೂ ಕೆಲ ಕಡೆ ಅಂತರ ಮಾಯವಾಗುತ್ತಿದೆ ಎಂದು ಹೊಸಪೇಟೆ ಆಹಾರ ಇಲಾಖೆ ಶಿರಸ್ತೇದಾರ ನಾಗರಾಜ್‌ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona