ಬೆಂಗಳೂರು (ಮಾ.30):  ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಸಿ.ಡಿ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ನಗರ ಪೊಲೀಸ್‌ ಆಯುಕ್ತರು ಹೊರಡಿಸಿದ ಆದೇಶ ರದ್ದುಪಡಿಸುವಂತೆ ಹಾಗೂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಕಬ್ಬನ್‌ಪಾರ್ಕ್ ಪೊಲೀಸರು ಮತ್ತು ಸದಾಶಿವನಗರ ಪೊಲೀಸರು ತನಿಖೆ ನಡೆಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ನಗರದ ವಕೀಲರಾದ ಗೀತಾ ಮಿಶ್ರಾ ಅವರು ಸಲ್ಲಿಸಿರುವ ಅರ್ಜಿಯಲ್ಲಿ ರಾಜ್ಯ ಗೃಹ ಇಲಾಖೆ, ಪೊಲೀಸ್‌ ಮಹಾನಿರ್ದೇಶಕರು, ನಗರ ಪೊಲೀಸ್‌ ಆಯುಕ್ತರು, ಎಸ್‌ಐಟಿ, ಶಾಸಕ ರಮೇಶ್‌ ಜಾರಕಿಹೊಳಿ, ಕಬ್ಬನ್‌ಪಾರ್ಕ್ ಹಾಗೂ ಸದಾಶಿವನಗರ ಠಾಣೆ ಪೊಲೀಸರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಅರ್ಜಿ ಇನ್ನಷ್ಟೇ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರಬೇಕಿದೆ.

ನ್ಯೂಸ್ ಅವರ್; ಸಿಡಿ ಲೇಡಿ ಬರದಿರಲು ಕಾರಣವೇನು? ಲಾಕ್‌ ಡೌನ್‌ ಮಾಡ್ತಾರಾ? ..

ರಮೇಶ್‌ ಜಾರಕಿಹೊಳಿ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಅವರ ಮನವಿ ಮೇರೆಗೆ ತನಿಖೆಗೆ ಎಸ್‌ಐಟಿ ರಚಿಸಲಾಗಿದೆ. ಸರ್ಕಾರದ ಗೆಜೆಟ್‌ ಆದೇಶವಿಲ್ಲದೆ ಪೊಲೀಸ್‌ ಆಯುಕ್ತರು ಎಸ್‌ಐಟಿ ರಚನೆ ಮಾಡಿ, ಅದಕ್ಕೆ ಅಧಿಕಾರಿಗಳನ್ನು ನಿಯೋಜಿಸಿ ಆದೇಶ ಹೊರಡಿಸಿದ್ದಾರೆ. ಇದು ಕಾನೂನು ಬಾಹಿರ ಕ್ರಮವಾಗಿದ್ದು, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-1973 ಹಾಗೂ ಕರ್ನಾಟಕ ಪೊಲೀಸ್‌ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ಆಯುಕ್ತರ ಆದೇಶ ರದ್ದುಪಡಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.