Ramanagar : ಜಿಲ್ಲೆಯಲ್ಲಿ 12,526 ರೈತರ ಮಕ್ಕಳಿಗೆ ವಿದ್ಯಾನಿಧಿ
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ’ಯಲ್ಲಿ 2021-22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಈವರೆಗೆ 12,526 ವಿದ್ಯಾರ್ಥಿಗಳ ಖಾತೆಗೆ 4.98 ಕೋಟಿ ಶಿಷ್ಯ ವೇತನ ಜಮೆ ಮಾಡಲಾಗಿದೆ.
-ಎಂ.ಅಫ್ರೋಜ್ ಖಾನ್
ರಾಮನಗರ (ಡಿ.09): ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ’ಯಲ್ಲಿ 2021-22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಈವರೆಗೆ 12,526 ವಿದ್ಯಾರ್ಥಿಗಳ ಖಾತೆಗೆ 4.98 ಕೋಟಿ ಶಿಷ್ಯ ವೇತನ ಜಮೆ ಮಾಡಲಾಗಿದೆ.
ರೈತರ (Farmers) ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ (Education) ಪ್ರೋತ್ಸಾಹಿಸಲು ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಹೊಸ ಶಿಷ್ಯ ವೇತನ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದರು.
ಜಿಲ್ಲೆಯಲ್ಲಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು ಶಿಷ್ಯ ವೇತನ ಕೋರಿ ಆನ್ ಲೈನ್ ನಲ್ಲಿ ನಿಗದಿತ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಈವರೆಗೆ ಮೊದಲನೇ ಹಂತದಲ್ಲಿ 12,526 ವಿದ್ಯಾರ್ತಿಗಳಿಗೆ 4,98,28,000 ರುಪಾಯಿ ಶಿಷ್ಯ ವೇತನವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿದೆ.
ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗಿದೆ. ದ್ವಿತೀಯ ಪಿಯುಸಿಗೆ ದಾಖಲಾಗುತ್ತಿದ್ದಂತೆಯೇ ಕಾಲೇಜುಗಳಲ್ಲಿ ನೀಡುವ ದತ್ತಾಂಶದ ಆಧಾರದ ಮೇಲೆ ಅವರವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗಿದೆ. ವಿದ್ಯಾರ್ಥಿಗಳಿಗೆ ತಲಾ 2,500 ಮತ್ತು ವಿದ್ಯಾರ್ಥಿನಿಯರಿಗೆ 3,000 ರುಪಾಯಿ ನೀಡಲಾಗಿದೆ.
ಈ ಯೋಜನೆಯು ಮುಂದುವರೆದಿದ್ದು, ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಯ ತಂದೆ - ತಾಯಿಗೆ ಜಮೀನು ಇದಿಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಂಡು ನೆರವು ಕಲ್ಪಿಸಲಾಗುತ್ತಿದೆ. ಜೊತೆಗೆ ಪುನರಾವರ್ತಿತ ವಿದ್ಯಾರ್ಥಿಗಳು ಅರ್ಹರಾಗಿರುವುದಿಲ್ಲ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ರೈತರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹಿಸುವ ಯೋಜನೆ ಇದಾಗಿದೆ. ಮೆಟ್ರಿಕ್ ನಂತರದ ಹೆಚ್ಚಿನ ಶಿಕ್ಷಣಕ್ಕಾಗಿ ರಾಜ್ಯದಲ್ಲಿ ಮಾನ್ಯತೆ ಪಡೆದ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ರೈತರ ಮಕ್ಕಳಿಗೆ ಅವರ ಕೋರ್ಸ್‌ಗಳಿಗೆ ಅನುಗುಣವಾಗಿ 2500 ರಿಂದ 11 ಸಾವಿರ ರು.ವರೆಗೆ ಶಿಷ್ಯ ವೇತನ ಕೊಡಲಾಗುವುದು.
ಇತರ ವಿದ್ಯಾರ್ಥಿ ವೇತನಗಳನ್ನು ಪಡೆದವರು ಕೂಡ ರೈತ ವಿದ್ಯಾನಿಧಿ ಶಿಷ್ಯ ವೇತನಕ್ಕೆ ಅರ್ಹರಾಗಿರುತ್ತಾರೆ. ವಿದ್ಯಾರ್ಥಿಯ ತಂದೆ ಅಥವಾ ತಾಯಿ ರೈತರ ಗುರುತಿನ ಸಂಖ್ಯೆ (ಎಫ್ ಐಡಿ) ಹೊಂದಿರಬೇಕಾಗುತ್ತದೆ. ಈ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ.
ಈ ಶಿಷ್ಯ ವೇತನ ಯೋಜನೆಯನ್ನು 8ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಬಾಲಕಿಯರಿಗೂ ವಿಸ್ತರಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಅದರಂತೆ ಪ್ರತಿ ವಿದ್ಯಾರ್ಥಿನಿಗೆ 2 ಸಾವಿರ ಶಿಷ್ಯ ವೇತನ ದೊರೆಯಲಿದೆ. ಈ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಪ್ರೋತ್ಸಾಹ ಕೊಡಲಾಗುತ್ತಿದೆ.
ಬಾಕ್ಸ್ ....
ಯಾರಿಗೆ ಎಷ್ಟುಶಿಷ್ಯ ವೇತನ ?
*ಪ್ರೌಢಶಿಕ್ಷಣ (8ರಿಂದ 10ನೇ ತರಗತಿ): ಹೆಣ್ಣು ಮಕ್ಕಳಿಗೆ ಮಾತ್ರ 2,000
*ಪಿಯುಸಿ, ಐಟಿಐ, ಡಿಪ್ಲೊಮಾ: ವಿದ್ಯಾರ್ಥಿಗಳಿಗೆ 2,500 ಹಾಗೂ ವಿದ್ಯಾರ್ಥಿನಿಯರಿಗೆ(ತೃತೀಯ ಲಿಂಗಿಗಳು ಸೇರಿ) 3,000
*ಬಿಎ, ಬಿಎಸ್ಸಿ, ಬಿ.ಕಾಂ ಸೇರಿ ಎಲ್ಲಾ ಪದವಿ: ವಿದ್ಯಾರ್ಥಿಗಳಿಗೆ 5 ಸಾವಿರ, ವಿದ್ಯಾರ್ಥಿನಿಯರಿಗೆ 5,500
*ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್, ಬಿ.ಫಾರ್ಮ, ನರ್ಸಿಂಗ್ ಮೊದಲಾದ ವೃತ್ತಿಪರ ಕೋರ್ಸ್: ವಿದ್ಯಾರ್ಥಿಗಳಿಗೆ 7,500, ವಿದ್ಯಾರ್ಥಿನಿಯರಿಗೆ 8,000
*ಎಂಬಿಬಿಎಸ್, ಬಿಇ, ಬಿ.ಟೆಕ್ ಹಾಗೂ ಸ್ನಾತಕೋತ್ತರ ಕೋರ್ಸ್: ವಿದಾರ್ಥಿಗಳಿಗೆ 10 ಸಾವಿರ, ವಿದ್ಯಾರ್ಥಿನಿಯರಿಗೆ 11 ಸಾವಿರ
ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈಗಾಗಲೇ ಹೆಸರು ನೊಂದಾಯಿತ ರೈತರ ಮಕ್ಕಳಿಗೆ ಶಿಷ್ಯ ವೇತನವನ್ನು ಅವರ ಖಾತೆಗಳಿಗೆ ನೇರ ನಗದು ವರ್ಗಾವಣೆ ಪದ್ಧತಿಯ ಮೂಲಕ ಜಮಾ ಮಾಡಲಾಗಿದೆ. ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಮುಂದುವರೆದಿದೆ.
-ಸೋಮಸುಂದರ್, ಜಂಟಿ ಕೃಷಿ ನಿರ್ದೇಶಕರು, ರಾಮನಗರ
(ನಿಧಿಯ ಪ್ರಗತಿ ಮಾಹಿತಿ)
ತಾಲೂಕು ವಿದ್ಯಾರ್ಥಿಗಳ ಸಂಖ್ಯೆ ಜಮಾವಾದ ಮೊತ್ತ
ಕನಕಪುರ 2,993 1,02,96,500
ಮಾಗಡಿ 2,323 75,26,500
ಚನ್ನಪಟ್ಟಣ 3226 1,12,51,500
ರಾಮನಗರ 3,984 2,06,33,500
ಒಟ್ಟು 12,526 4,98,28,000