ಕೋಲಾರ[ಜ.07]: ಪೌರತ್ವ ತಿದ್ದುಪಡಿ ಕಾಯ್ದೆ ಪರ ರಾರ‍ಯಲಿ ವೇಳೆ ಶನಿವಾರ ನಡೆದಿದ್ದ ಲಾಠಿ ಪ್ರಹಾರ ಪ್ರಕರಣಕ್ಕೆ ಸಂಬಂಧಿಸಿ ಕೋಲಾರದ ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ಸೇರಿ 18 ಮಂದಿ ವಿರುದ್ಧ ನಗರ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾನೂನು ಬಾಹಿರವಾಗಿ ಗುಂಪು ಕಟ್ಟಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮತ್ತು ಪೋಲಿಸರ ಮೇಲೆ ಹಲ್ಲೆಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದ್ದು, ಸಂಸದ ಎಸ್‌.ಮುನಿಸ್ವಾಮಿ ಅವರನ್ನು 12ನೇ ಆರೋಪಿಯನ್ನಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪೌರತ್ವ ಕಾಯ್ದೆ ಬೆಂಬಲಿಸಿ ಜ.4 ರಂದು ಬಿಜೆಪಿ ನೇತೃತ್ವದಲ್ಲಿ ಜಾಥಾ ನಡೆದಿತ್ತು. ಈ ವೇಳೆ ಅನುಮತಿ ಇಲ್ಲದಿದ್ದರೂ ಕ್ಲಾಕ್‌ ಟವರ್‌ ಮಾರ್ಗವಾಗಿ ತೆರಳಲು ರಾರ‍ಯಲಿಯಲ್ಲಿದ್ದವರು ಮುಂದಾದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಗುಂಪು ಚದುರಿಸಿದ್ದರು. ಆಗ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ತೀವ್ರ ವಾಕ್ಸಮರವೂ ಉಂಟಾಗಿತ್ತು. ಈ ಸಂಬಂಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ ಪ್ರಕರಣ ದಾಖಲಾಗಿದೆ.

ಗುಂಪು ಜಮಾವಣೆ ವಿರುದ್ಧವೂ ದೂರು: ಕ್ಲಾಕ್‌ ಟವರ್‌ ಪ್ರದೇಶದಲ್ಲಿ ಅಕ್ರಮವಾಗಿ ಜಮಾಯಿಸಿದ್ದ ಗುಂಪಿನ ವಿರುದ್ಧವೂ ಸರ್ಕಲ್‌ ಇನ್ಸ್‌ಪೆಕ್ಟರ್‌ ದೂರು ದಾಖಲು ಮಾಡಿದ್ದಾರೆ. ಎರಡೂ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗಳೇ ದೂರುದಾರರಾಗಿದ್ದಾರೆ.