ಚರಂಡಿಗಳ ನಿರ್ವಹಣೆಯಲ್ಲಿ ಸ್ವಲ್ಪ ನಿರ್ಲಕ್ಷ್ಯವಾದರೂ ಮಳೆಗಾಲದಲ್ಲಿ ರಸ್ತೆ ಕಾಣದಂತೆ ಮಳೆ ನೀರು ತುಂಬಿ ತಗ್ಗು ಪ್ರದೇಶಗಳಿಗೆ ನುಗ್ಗುತ್ತದೆ. ಇದೀಗ ಮಳೆಗಾಲ ಸುರುವಾಗಿದೆ. ಇನ್ನೂ ಟೇಕ್‌ಆಫ್‌ ಆಗದ ಪುರಸಭೆ ಆಡಳಿತ ಇಂತಹ ಸಂದರ್ಭಗಳನ್ನು ಹೇಗೆ ನಿಭಾಸುತ್ತದೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.

ಶಿವಾನಂದ ಮಲ್ಲನಗೌಡ್ರ

ಬ್ಯಾಡಗಿ (ಜೂ.22) ಚರಂಡಿಗಳ ನಿರ್ವಹಣೆಯಲ್ಲಿ ಸ್ವಲ್ಪ ನಿರ್ಲಕ್ಷ್ಯವಾದರೂ ಮಳೆಗಾಲದಲ್ಲಿ ರಸ್ತೆ ಕಾಣದಂತೆ ಮಳೆ ನೀರು ತುಂಬಿ ತಗ್ಗು ಪ್ರದೇಶಗಳಿಗೆ ನುಗ್ಗುತ್ತದೆ. ಇದೀಗ ಮಳೆಗಾಲ ಸುರುವಾಗಿದೆ. ಇನ್ನೂ ಟೇಕ್‌ಆಫ್‌ ಆಗದ ಪುರಸಭೆ ಆಡಳಿತ ಇಂತಹ ಸಂದರ್ಭಗಳನ್ನು ಹೇಗೆ ನಿಭಾಸುತ್ತದೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.

ಮಳೆ ಬಂತೆಂದರೆ ಇಲ್ಲಿಯ ಸುಭಾಸ್‌ ಪ್ಲಾಟ್‌ನ 150 ಮನೆಗಳಿಗೆ ನೀರು ನುಗ್ಗುತ್ತದೆ. ಮೋಟೆಬೆನ್ನೂರ ರಸ್ತೆಯಲ್ಲಿರುವ ಸ್ವಾತಂತ್ರ್ಯಯೋಧರ ಭವನದ ಮುಂಭಾಗದಲ್ಲಿ ಆಳತ್ತೆರಕ್ಕೆ ನೀರು ಸಂಗ್ರಹವಾಗುವ ಮೂಲಕ ವಾಹನ ಸಂಚಾರವನ್ನೇ ಸ್ಥಗಿತಗೊಳಿಸುತ್ತಿದೆ.

ಬ್ಯಾಡಗಿ: ಬಾರದ ಮುಂಗಾರು, ಅರ್ಧದಷ್ಟುಗ್ರಾಮಗಳಲ್ಲಿ ಜಲಕ್ಷಾಮ!

ಅವ್ಯವಸ್ಥೆ ಆಗರ:

ಪಟ್ಟಣದಲ್ಲಿರುವ ಸುಮಾರು 3 ಕಿಮೀ ಉದ್ದನೆಯ ರಾಜಕಾಲುವೆ ಮಾತ್ರ ಮಳೆಗಾಲದ ಸಂದರ್ಭದಲ್ಲಿ ಪಶ್ಚಿಮಘಟ್ಟದಲ್ಲಿರುವ ನದಿಗಳಂತೆ ತುಂಬಿ ಹರಿಯುತ್ತದೆ. ಬೆಟ್ಟದ ಮಲ್ಲೇಶ್ವರ ಗುಡ್ಡದ 500 ಎಕರೆ ಭೂಪ್ರದೇಶದಲ್ಲಿನ ಮಳೆನೀರು ಇದೇ ರಾಜಕಾಲುವೆ ಬಳಸಿಕೊಂಡು ಮುಂದೆ ಸಾಗುತ್ತದೆ. ಅದರಲ್ಲಿ ಬೆಳೆದಿರುವ ಮರ-ಗಿಡ ನೋಡಿದರೆ ಇಂದೇ ಮಳೆಯಾದರೂ ಕೂಡ ಅದಕ್ಕೆ ಹೊಂದಿಕೊಂಡಿರುವ ನಿವಾಸಿಗಳ ನಿದ್ದೆಗೆಡಿಸುತ್ತದೆ.

. 10 ಕೋಟಿ ವೆಚ್ಚದ ಪಟ್ಟಣದ ರಾಜಕಾಲುವೆ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಮುಕ್ತಾಯಗೊಂಡಿದೆಯಾದರೂ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ಪಟ್ಟಣದ ವಿದ್ಯಾನಗರ ಬಲಭಾಗ, ನದಾಫ್‌ ಪ್ಲಾಟ್‌, ಇಸ್ಲಾಂಪುರ ಗಲ್ಲಿ, ಸಜ್ಜನಶೆಟ್ರ ಪ್ಲಾಟ್‌, ಸುಭಾಸ್‌ ಪ್ಲಾಟ್‌, ಹೂಗಾರ ಗಲ್ಲಿ, ವಾಲ್ಮೀಕಿ ಸಂಘ, ವಿನಾಯಕ ನಗರ, ವೀರಶೈವ ಮುಕ್ತಿಧಾಮ ಬಳಿಸಿಕೊಂಡು ಮಲ್ಲೂರ ಮಾರ್ಗವಾಗಿ ಹಳ್ಳ ಸೇರುತ್ತದೆ. ಎರಡು ಬದಿಯಲ್ಲಿ ಪಿಚ್ಚಿಂಗ್‌ ವ್ಯವಸ್ಥೆ ಸೇರಿದಂತೆ ಸರಾಗವಾಗಿ ನೀರು ಹರಿದು ಹೋಗುವಂತೆ ಕಾಲುವೆ ಗಟ್ಟಿಗೊಳಿಸುವ ಕಾಮಗಾರಿ ಆಗಬೇಕಾಗಿದೆ.

ಮಲ್ಲೂರ ರಸ್ತೆ ಜಲಾವೃತ್ತ:

ಮಲ್ಲೂರ ರಸ್ತೆಯಲ್ಲಿ ಟೋಲ್‌ ನಾಕಾವರೆಗೂ ಚರಂಡಿ ನಿರ್ಮಿಸಿರುವ ಪುರಸಭೆ ಅದರ ಮುಂದಿರುವ ಭಾಗವನ್ನು ಮುಟ್ಟಿಲ್ಲ. ಬಹುತೇಕ ಕೈಗಾರಿಕಾ ಪ್ರದೇಶವೆನಿಸಿಕೊಂಡಿರುವ ಇಲ್ಲಂತೂ ಮೆಣಸಿನಕಾಯಿ ಚೀಲ ಹೊತ್ತೊಯ್ಯುವ ವಾಹನ ಚಾಲಕರು ಒಂದು ಕೈಯಲ್ಲಿ ಜೀವ ಹಿಡಿದುಕೊಳ್ಳಬೇಕಾಗಿದೆ.

ನೀರು ಹೋಗಲು ಜಾಗವಿಲ್ಲ:

ಸುಮಾರು 60 ಎಕರೆ ಭೂಪ್ರದೇಶ ಹೊಂದಿರುವ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಯಲ್ಲೂ ಸಹ ನೀರು ಹರಿದು ಹೋಗಲು ಸುಸಜ್ಜಿತವಾದ ಚರಂಡಿಗಳಿಲ್ಲ. ನೆಲಕ್ಕೆ ಬಿದ್ದ ಹನಿ ನೀರು ಭೂಮಿಯಲ್ಲಿ ಇಂಗಲು ಜಾಗವಿಲ್ಲದಂತೆ ಎಪಿಎಂಸಿ ಪ್ರಾಂಗಣ ಈಗಾಗಲೇ ಸಂಪೂರ್ಣ ಕಾಂಕ್ರಿಟಿಕರಣಗೊಂಡಿದೆ. ಹೀಗಾಗಿ ಎಪಿಎಂಸಿ ಕಚೇರಿಯವರು ತನ್ನ ವ್ಯಾಪ್ತಿಯಲ್ಲಿನ ಚರಂಡಿ ನಿರ್ಮಿಸಿಕೊಂಡು ಕೈತೊಳೆದುಕೊಂಡಿದೆ. ಮಾರುಕಟ್ಟೆಯಿಂದ ಹೊರಬಂದಂತಹ ನೀರು ಹರಿದುಹೋಗಲು ಚರಂಡಿ ಇಲ್ಲ. ಹೀಗಾಗಿ ಎಪಿಎಂಸಿಗೆ ಹೊಂದಿಕೊಂಡಿರುವ ಸ್ಮಶಾನ ರಸ್ತೆಯಲ್ಲಿನ ಅಕ್ಕಪಕ್ಕದ ಅಂಗಡಿಗಳಿಗೆ ಪ್ರತಿ ವರ್ಷವೂ ಮಳೆಗಾಲದಲ್ಲಿ ನೀರು ನುಗ್ಗುವುದು ಸಾಮಾನ್ಯವಾಗಿದೆ.

ಬಿಜೆಪಿ ಅಧಿಕಾರದಲ್ಲಿ ಇರೋತನಕ ಪ್ರಜೆಗಳಿಗೆ ಯಾವುದೇ ತೊಂದರೆ ಇಲ್ಲ: ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ

ಮಳೆ ಮುನ್ಸೂಚನೆ ಬೆನ್ನಲ್ಲೇ ತಗ್ಗು ಪ್ರದೇಶದಲ್ಲಿರುವ ನಿವಾಸಿಗಳಿಗೆ ಸೂಚಿಸಲಾಗಿದೆ. ಎಪಿಎಂಸಿ ಹೊರಾಂಗಣ, ಸುಭಾಸ್‌ ಪ್ಲಾಟ್‌, ಹಳೇ ಪುರಸಭೆ ಹಾಗೂ ಬಸ್‌ ನಿಲ್ದಾಣದ ಪಕ್ಕದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಎಚ್ಚರಿಕೆ ವಹಿಸಲಾಗಿದೆ. ನಮ್ಮ ಸಿಬ್ಬಂದಿಗೆ ಅಲರ್ಚ್‌ ಆಗಿರಲು ತಿಳಿಸಿದ್ದೇವೆ.

ಬಿ.ಬಿ. ಗೊರೋಶಿ, ಪುರಸಭೆ ಮುಖ್ಯಾಧಿಕಾರಿ ಬ್ಯಾಡಗಿ

ರಾಜಕಾಲುವೆಯಲ್ಲಿನ ಗಿಡ-ಗಂಟೆ ತೆರವುಗೊಳಿಸಲು ಪುರಸಭೆಯಿಂದ ಸಾಧ್ಯವಾಗಿಲ್ಲ, ಮಳೆಗಾಲದಲ್ಲಿ ಕಾಲುವೆಗಳ ಮೇಲೆ ನೀರು ಹರಿಯುತ್ತದೆ. ಬೆಟ್ಟದ ಮಲ್ಲೇಶ್ವರದಲ್ಲಿನ ನೀರು ಹರಿದು ಬರುತ್ತಿದ್ದು ಮನೆಗಳಿಗೆ ನೀರು ನುಗ್ಗುವ ಭಯವಿದೆ.

ಮಾಲತೇಶ ಚಳಗೇರಿ, ಶಿಕ್ಷಕ