ಬೆಂಗಳೂರು(ಫೆ.26): ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನರ್ಸಿಂಗ್‌ ವ್ಯಾಸಂಗ ಮಾಡುತ್ತಿರುವ ಎರಡನೇ ವರ್ಷದ 20 ವಿದ್ಯಾರ್ಥಿಗಳ ಫಲಿತಾಂಶವನ್ನು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ಮಂಗಳವಾರ ಪ್ರಕಟಿಸಿದೆ.

ಉತ್ತರ ಪತ್ರಿಕೆಗಳ ಬಂಡಲ್‌ ಕಳೆದು ಹೋಗಿದ್ದ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ಪ್ರಕಟವಾಗಬೇಕಿದ್ದ ಫಲಿತಾಂಶ ಈವರೆಗೆ ಪ್ರಕಟವಾಗಿರಲಿಲ್ಲ. ಸೋಮವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಆರ್‌ಜಿಯುಎಚ್‌ಎಸ್‌ ಕ್ಯಾಂಪಸ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಸಚಿವರಿಗೆ ಮನವಿ ಮಾಡಿದ್ದರು. ಸಚಿವರು 4-5 ದಿನಗಳಲ್ಲಿ ಫಲಿತಾಂಶ ಪ್ರಕಟಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಭರವಸೆ ನೀಡಿದ ಒಂದೇ ದಿನದಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯದ ಎಲ್ಲ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದ್ದ ರಾಜೀವಗಾಂಧಿ ವಿವಿ, ಪರೀಕ್ಷಾ ಕೇಂದ್ರದ ಕೊಠಡಿಯೊಂದರಲ್ಲಿ ಪರೀಕ್ಷೆ ಬರೆದಿದ್ದ 20 ವಿದ್ಯಾರ್ಥಿಗಳ ಫಲಿತಾಂಶವನ್ನು ಮಾತ್ರ ಪ್ರಕಟಿಸಿರಲಿಲ್ಲ. ಫೆಬ್ರವರಿ ಮೊದಲ ವಾರದಲ್ಲಿ ನಾಲ್ಕು ವಿಷಯಗಳ ಫಲಿತಾಂಶ ಪ್ರಕಟಿಸಿ ಸಮಾಜ ವಿಜ್ಞಾನ ಒಂದು ವಿಷಯದ ಫಲಿತಾಂಶ ಪ್ರಕಟಿಸಿರಲಿಲ್ಲ. ಫಲಿತಾಂಶ ಪ್ರಕಟಿಸದಿದ್ದರೆ, ವಿದ್ಯಾರ್ಥಿವೇತನ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳು ದೊರೆಯವುದಿಲ್ಲವೆಂದು ವಿದ್ಯಾರ್ಥಿಗಳು ಸಚಿವರ ಗಮನಕ್ಕೆ ತಂದಿದ್ದರು. ಕೂಡಲೇ ಎಚ್ಚೆತ್ತ ವಿವಿ ಇದೀಗ ಫಲಿತಾಂಶ ಪ್ರಕಟಿಸಿದೆ.