ಮಲೆನಾಡಿನಲ್ಲಿ ಕೊಂಚ ವಿರಾಮ ನೀಡಿದ ಮಳೆ, ಆದರೂ ನಿಂತಿಲ್ಲ ಸರಣಿ ಅನಾಹುತಗಳು
ಚಿಕ್ಕಮಗಳೂರು ಜಿಲ್ಲಾದ್ಯಂತ 15 ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಇನ್ನು ಜಿಲ್ಲಾದ್ಯಂತ ಮಳೆಯಿಂದಾಗಿ ಏನೆಲ್ಲಾ ಅನಾಹುತಗಳು ಆಗಿವೆ. ಎಷ್ಟು ನಷ್ಟವಾಗಿದೆ ಎನ್ನುವ ಮಾಹಿತಿ ಇಲ್ಲಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಜುಲೈ.17): ಚಿಕ್ಕಮಗಳೂರು ಜಿಲ್ಲಾದ್ಯಂತ 15 ದಿನಗಳಿಂದ ಅಬ್ಬರಿಸುತ್ತಿದ್ದ ಮಳೆ ಇಂದು(ಭಾನುವಾರ) ಕೊಂಚ ಮಟ್ಟಿಗೆ ಕಡಿಮೆಯಾಗಿದ್ದು, ಮಲೆನಾಡಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಮಳೆ ನಿಂತರು ಮಳೆ ಹನಿ ನಿಂತಿಲ್ಲ ಎನ್ನುವಂತೆ ಅಲಲ್ಲಿ ಅವಘಡಗಳು ಸಂಭವಿಸಿವೆ.
ನದಿಗಳು ಅಪಾಯದ ಮಟ್ಟದಲ್ಲಿ
ಮಲೆನಾಡು ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾ ಯದ ಮಟ್ಟದಲ್ಲಿ ಹರಿಯುತ್ತಿವೆ. ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಬೆಳೆನಷ್ಟ ಉಂಟಾಗಿದೆ. ಮಳೆಯ ಅಬ್ಬರಕ್ಕೆ ಅಲ್ಲಲ್ಲಿ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬ ಗಳು ಧರೆಗುರುಳಿ ವಿದ್ಯುತ್ ವ್ಯತ್ಯಾಯಗೊಂಡಿದ್ದು ಮನೆಗಳು ನೆಲಸಮಗೊಂಡಿವೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಅಲ್ಲಲ್ಲಿ ಸಣ್ಣ ಪುಟ್ಟ ಭೂಕುಸಿತ ಸಂಭವಿಸಿದೆ. ನಿರಂತರ ಮಳೆಯಿಂದ ಅಡಿಕೆ, ಕಾಫಿ, ಕಾಳುಮೆಣಸು ಬೆಳೆಗಳಿಗೆ ಕೊಳೆರೋಗ ತಗಲುವ ಭೀತಿ ಬೆಳೆಗಾರರಲ್ಲಿ ಮೂಡಿಸಿದೆ.
Chikkamagaluru: ಮಲೆನಾಡಿನಲ್ಲಿ ಮಹಾಮಳೆಯಿಂದ ತತ್ತರಿಸಿದ ಜನರು: ಕುಸಿದ ಶಾಲಾ ಕೊಠಡಿ
ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಕಳಸ ಸುತ್ತಮುತ್ತ ಅಬ್ಬರಿಸುತ್ತಿದ್ದ ಮಳೆ ಇಂದು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು, 15 ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಮಳೆ ಬಿಡುವು ನೀಡಿದ್ದು ಮಲೆನಾಡಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆಗ್ಗಾಗೆ ಸಾಧಾರಣ ಮಳೆಯಾಗುತ್ತಿದೆ.ಚಿಕ್ಕಮಗಳೂರು ತಾಲ್ಲೂಕು ಹಿರೇಕೊಳಲೆ ಕೆರೆ ತುಂಬಿ ಕೋಡಿ ಬಿದ್ದಿದ್ದು, ಪ್ರವಾಸಿಗರು ಕೆರೆ ವೀಕ್ಷಣೆಗೆ ನಿರ್ಮೀಸಿರುವ ವಿವ್ಯೂ ಪಾಯಿಂಟ್ ಶಿಥಿಲಗೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಒಟ್ಟಾರೆ ಜಿಲ್ಲಾದ್ಯಂತ ಭಾನುವಾರ ಸ್ವಲ್ಪಮಟ್ಟಿಗೆ ಮಳೆಯ ಆರ್ಭಟ ಕಡಿಮೆಯಾಗಿದ್ದು ಜನರಲ್ಲಿ ನೆಮ್ಮದಿ ತರಿಸಿದೆ.
15 ದಿನ ಮಳೆಗೆ 329 ಮನೆಗೆ ಹಾನಿ
ಕಳೆದ 15 ದಿನಗಳ ಕಾಲ ಎಡಬಿಡದೆ ಸುರಿದ ಮುಂಗಾರು ಮಳೆಗೆ ಜಿಲ್ಲೆಯಾದ್ಯಂತ ಒಟ್ಟು 329 ಮನೆಗಳಿಗೆ ಹನಿ ಉಂಟಾಗಿದ್ದು, ಮಲೆನಾಡಿನ ಜನತೆ ಹೈರಾಣಾಗಿದ್ದಾರೆ.ಜಿಲ್ಲೆಯಲ್ಲಿ ಬೆಳೆಹಾನಿ ಸಂಬಂಧ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದ್ದು ವರದಿ ಬಂದ ನಂತರ ಪರಿಹಾ ನೀಡಲಾಗುವುದು. ಎನ್ಡಿಆರ್ಎಫ್ ಮಾರ್ಗಸೂಚಿಯಲ್ಲಿ ನಿಗಧಿ ಪಡಿಸಿದ ಪರಿಹಾರದ ಜೊತೆಗೆ ರಾಜ್ಯ ಸರ್ಕಾರದ ನೆರವು ಸೇರಿ ಮಳೆಯಾಶ್ರಿತ ಪ್ರದೇಶದ ಬೆಳೆಗೆ ಪ್ರತೀ ಹೆಕ್ಟೆರ್‌ಗೆ 13, 600 ರೂ. ಹಾಗೂ ನೀರಾವರಿ ಬೆಳೆಗಳಿಗೆ ಪ್ರತೀ ಹೆಕ್ಟೆರ್‌ಗೆ 25 ಸಾವಿರ ರೂ.ಪರಿಹಾರ ನೀಡಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು 47 ಗ್ರಾ.ಪಂ.ಗಳ ವ್ಯಾಪ್ತಿಯ 77 ಗ್ರಾಮಗಳ 108 ಪ್ರದೇಶಗಳನ್ನು ಜಲಾವೃತ ಹಾಗೂ ಇತರೆ ರೀತಿಯ ವಿಪತ್ತಿನ ದುರ್ಬಲ ಪ್ರದೇಶಗಳನ್ನು ಗುರುತಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಗಂಜಿ ಕೇಂದ್ರಗಳನ್ನು ತೆರೆಯಲು 56 ಕಡೆಗಳಲ್ಲಿ ಜಾಗ ಗುರುತಿಸಲಾಗಿದೆ. ತೀವ್ರ ಮಳೆಯಿಂದ ಸಂಭವಿಸುವ ಮರಳ ಉರುಳುವಿಕೆ, ಭೂ ಕುಸಿತ ಇನ್ನಿತರೆ ಸಂದರ್ಭದಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಲು ಖಾಸಗಿ ಮಾಲೀಕತ್ವದ 64 ಜೆಸಿಬಿ, 65 ಹಿಟಾಚಿ, 83 ಟ್ರಾಕ್ಟರ್ ಹಾಗೂ 155 ಟಿಪ್ಪರ್ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದ್ದು, ಈಗಾಗಲೇ ಅವುಗಳು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ಇದರೊಂದಿಗೆ 7 ಬೋಟ್‌ಗಳು ಸೇರಿದಂತೆ ಗರಗಸ, ಜೀವರಕ್ಷಕ ಜಾಕೆಟ್ಗಳು ಇತ್ಯಾದಿ ತುರ್ತು ಉಪಕರಣಗಳನ್ನು ಬಳಸಿಕೊಳ್ಳಲಾಗುತ್ತಿದೆ. 20 ಜನರ ಎಸ್ಡಿಆರ್ಎಫ್ ತಂಡ ತುರ್ತು ಕಾರ್ಯಾಚರಣೆಯಲ್ಲಿ ನಿರತವಾಗಿದ್ದು ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಜಿಲ್ಲೆಯಲ್ಲಿ ನೆಲೆಗೊಳ್ಳಲಿದೆ. ಒಟ್ಟು290 ಗೃಹರಕ್ಷಕ ದಳದ ಸಿಬ್ಬಂದಿ,70ನುರಿತ ಈಜುಗಾರರು, ಸುಮಾರು 350 ಸ್ವಯಂ ಸೇವಕರು ಅತೀವೃಷ್ಠಿ ನಿರ್ವಹಣೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಚಾರ್ಮಾಡಿಯಲ್ಲಿ ಹೆಚ್ಚಿದ ವಾಹನ ಸಂಚಾರ
ದಕ್ಷಿಣ ಕನ್ನಡ ಹಾಗೂ ಮಲೆನಾಡು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ನಲ್ಲಿ ರಸ್ತೆ ಕುಸಿತಕ್ಕೊಳಗಾಗಿ 5 ದಿನಗಳಿಂದ ಸಂಚಾರ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಶಿರಾಡಿ ಘಾಟಿ ಬದಲಿಗೆ ಚಾರ್ಮಾಡಿ ರಸ್ತೆಯಲ್ಲೇ ವಾಹನಗಳು ಸಂಚರಿಸಬೇಕಿವೆ. ಈ ಕಾರಣಕ್ಕೆ ಟ್ರಾಫಿಕ್ ಜಾಮ್ ಉಂಟಾಗಿ ಆಗಾಗ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ.ಜಿಲ್ಲಾಡಳಿತ ಮಳೆಯ ಕಾರಣಕ್ಕೆ 1200 ಕೆ.ಜಿ.ಗಿಂತಲೂ ಹೆಚ್ಚು ಭಾರದ ಎಲ್ಲಾ ರೀತಿಯ ಭಾರೀ ವಾಹನಗಳ ಸಂಚಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ನಡೆಯುತ್ತಿದೆ.