ಮಳೆ ಇಳಿಮುಖವಾದರೂ ಮತ್ತೆ 3 ದಿನ ರೆಡ್ ಅಲರ್ಟ್!
ಕಳೆದ ಹಲವು ದಿನಗಳಿಂದ ಭಾರಿ ಮಳೆಯಾಗಿ ಜನಜೀವನ ಅಸ್ತವ್ಯಸ್ತಗೊಂಡು ಪ್ರವಾಹ ಸದೃಶವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮಳೆ ಪ್ರಮಾಣ ಕ್ಷೀಣಿಸಿದ್ದು, ಜನಜೀವನ ಮತ್ತೆ ಸಹಜ ಸ್ಥಿತಿಗೆ ಮರಳಿದೆ. ಆದರೆ ಇನ್ನೂ ಮೂರು ದಿನ ರೆಡ್ ಅಲರ್ಟ್ ಮುಂದುವರಿಯಲಿದೆ.
ಮಂಗಳೂರು/ಉಡುಪಿ(ಆ.12): ಕಳೆದ ಹಲವು ದಿನಗಳಿಂದ ಭಾರಿ ಮಳೆಯಾಗಿ ಜನಜೀವನ ಅಸ್ತವ್ಯಸ್ತಗೊಂಡು ಪ್ರವಾಹ ಸದೃಶವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮಳೆ ಪ್ರಮಾಣ ಕ್ಷೀಣಿಸಿದ್ದು, ಜನಜೀವನ ಮತ್ತೆ ಸಹಜ ಸ್ಥಿತಿಗೆ ಮರಳಿದೆ. ನದಿಗಳಲ್ಲಿ ನೀರಿನ ಮಟ್ಟಇಳಿಮುಖಗೊಂಡಿದ್ದು, ಪ್ರವಾಹ ಭೀತಿ ತಾತ್ಕಾಲಿಕವಾಗಿ ಕಡಿಮೆಯಾಗಿದೆ. ಆದರೆ ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮಳೆ ತೀವ್ರಗೊಂಡರೆ ಮತ್ತೆ ಪ್ರವಾಹ ಪರಿಸ್ಥಿತಿ ಉದ್ಭವಿಸುವ ಆತಂಕ ಇದೆ.
ಮಂಗಳೂರು ತಾಲೂಕಿನ ವಿವಿಧ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಒಟ್ಟು 184 ಮಂದಿಯಲ್ಲಿ 20 ಮಂದಿ ತಮ್ಮ ಮನೆಗಳಿಗೆ ತೆರಳಿದ್ದಾರೆ. ಆದರೆ ಇನ್ನೂ ಮೂರು ದಿನ ರೆಡ್ ಅಲರ್ಟ್ ಇರುವ ಕಾರಣ ಉಳಿದವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕಾಳಜಿ ಕೇಂದ್ರಗಳಲ್ಲಿಯೇ ಉಳಿಸಿಕೊಳ್ಳಲಾಗಿದೆ.
ಬ್ರಹ್ಮಗಿರಿ ಬೆಟ್ಟ ಕುಸಿತ: 2 ಕಿ. ಮೀ ದೂರದಲ್ಲಿ ಅರ್ಚಕರ ಮೃತದೇಹ ಪತ್ತೆ!
ತಣ್ಣೀರುಬಾವಿ ಯೂತ್ ಕ್ಲಬ್‌ನಲ್ಲಿದ್ದ 14 ಮಂದಿ ನಿರಾಶ್ರಿತರು ಹಾಗೂ ಉಳ್ಳಾಲ ದರ್ಗಾದಲ್ಲಿ ಆಶ್ರಯ ಪಡೆದಿದ್ದ 2 ಕುಟುಂಬಗಳ ಆರು ಮಂದಿ ಮಂಗಳವಾರ ಮನೆಗೆ ಮರಳಿದ್ದಾರೆ. ಉಳಿದಂತೆ, ಬೈಕಂಪಾಡಿಯ ಅಂಗರಗುಂಡಿ ಕಾಳಜಿ ಕೇಂದ್ರದಲ್ಲಿ 24 ಮಂದಿ, ಜಪ್ಪಿನಮೊಗರಿನಲ್ಲಿ 63, ಪುರಭವನದಲ್ಲಿ ಆಶ್ರಯ ಪಡೆದಿರುವ 45 ಮಂದಿಯನ್ನು ಅಲ್ಲೇ ಉಳಿಸಿಕೊಳ್ಳಲಾಗಿದೆ. ಮುಂದಿನ ಮಳೆಯ ಸೂಚನೆ ನೋಡಿ ಅವರನ್ನು ಮನೆಗೆ ಕಳುಹಿಸುವ ಏರ್ಪಾಡು ಮಾಡಲಾಗುತ್ತದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
14 ಮನೆ ಹಾನಿ: ಇನ್ನು ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಒಟ್ಟು 6 ಕಾಳಜಿ ಕೇಂದ್ರಗಳಲ್ಲಿ 224 ಮಂದಿ ಆಶ್ರಯ ಪಡೆದಿದ್ದಾರೆ. ಮಂಗಳವಾರಕ್ಕೆ ಅನ್ವಯಿಸುವಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 14 ಮನೆಗಳಿಗೆ ಹಾನಿಗೀಡಾಗಿವೆ ಅಲ್ಲದೆ, ಒಂದು ಜಾನುವಾರು ಮೃತಪಟ್ಟಿದೆ.
ಬೆಳ್ತಂಗಡಿ: ಭಾರೀ ಮಳೆಗೆ ಕಾಡಿನಲ್ಲಿ 6 ಎಕರೆ ಗುಡ್ಡೆ ಕುಸಿತ
ಸರಾಸರಿ 30 ಮಿ.ಮೀ. ಮಳೆ: ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗ್ಗಿನವರೆಗೆ ದ.ಕ. ಜಿಲ್ಲೆಯಲ್ಲಿ ಸರಾಸರಿ 30 ಮಿ.ಮೀ. ಮಳೆ ದಾಖಲಾಗಿದೆ. ಬಂಟ್ವಾಳದಲ್ಲಿ 29 ಮಿ.ಮೀ., ಬೆಳ್ತಂಗಡಿಯಲ್ಲಿ 32 ಮಿ.ಮೀ., ಮಂಗಳೂರಿನಲ್ಲಿ 53 ಮಿ.ಮೀ., ಪುತ್ತೂರಿನಲ್ಲಿ 23 ಮಿ.ಮೀ., ಸುಳ್ಯದಲ್ಲಿ 22 ಮಿ.ಮೀ., ಮೂಡುಬಿದಿರೆಯಲ್ಲಿ 37 ಮಿ.ಮೀ., ಕಡಬದಲ್ಲಿ 21 ಮಿ.ಮೀ. ಮಳೆಯಾಗಿದೆ.
ನದಿ ನೀರು ಇಳಿಕೆ: ಬಂಟ್ವಾಳದಲ್ಲಿ 8.5 ಮೀ. ಅಪಾಯದ ಮಟ್ಟಹೊಂದಿರುವ ನೇತ್ರಾವತಿ ನದಿಯ ನೀರಿನ ಮಟ್ಟಮಂಗಳವಾರ 5.1 ಮೀ. ಇತ್ತು. ಉಪ್ಪಿನಂಗಡಿಯಲ್ಲಿ 31.5 ಮೀ. ಅಪಾಯದ ಮಟ್ಟಇರುವಲ್ಲಿ 26.4 ಮೀ. ಎತ್ತರಕ್ಕೆ ನೀರು ಹರಿಯುತ್ತಿತ್ತು. ಉಪ್ಪಿನಂಗಡಿಯಲ್ಲಿ ಕುಮಾರಧಾರಾ ನದಿಯ ಅಪಾಯದ ಮಟ್ಟ26.5 ಮೀ. ಆಗಿದ್ದರೆ, ಮಂಗಳವಾರದ ನೀರಿನ ಮಟ್ಟ20 ಮೀ. ಮಾತ್ರವೇ ಇತ್ತು.