ಚಿಕ್ಕಮಗಳೂರಲ್ಲಿ ರೇನ್ ಅಲರ್ಟ್, ಮಳೆ ಆರಂಭಕ್ಕೂ ಮುನ್ನವೇ ಎಲ್ಲ ಸಿದ್ಧತೆ
ನಿಮ್ಮ ಜೊತೆ ಸರ್ಕಾರ ಇದೆ ಎಂದ ಜನಪ್ರತಿನಿಧಿಗಳು ಮಳೆ ಮುಗಿದ ಬಳಿಕ ಕೊಟ್ಟ ಮಾತನ್ನ ಮರೆತಿರೋದು ದುರಂತ. ಈ ಮಧ್ಯೆ ಜಿಲ್ಲಾಡಳಿತ ಮಳೆ ಆರಂಭಕ್ಕೂ ಮುನ್ನವೇ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಮೇ.26): ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಫಿನಾಡಲ್ಲಿ ಮಳೆ ಅಬ್ಬರ ಹೇಳತೀರದ್ದಾಗಿತ್ತು. ಶತಮಾನಗಳ ಬದುಕು ಕಣ್ಣೆದುರೇ ಕೊಚ್ಚಿ ಹೋಗಿತ್ತು. ಜೀವ ಹಾನಿಯೂ ಸಂಭವಿಸಿತ್ತು. ಹಾಗಾಗಿ, ಈ ವರ್ಷವೂ ಮುಂಗಾರಿನ ಅಬ್ಬರ ಹೆಚ್ಚಿರುತ್ತೆ ಎಂಬ ಮಾಹಿತಿಯಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಜಿಲ್ಲಾದ್ಯಂತ ಹೈಅಲರ್ಟ್ ಘೋಷಿಸಿದೆ. ಮುಂಜಾಗೃತ ಕ್ರಮವಾಗಿ ಅಪಾಯದ ಗ್ರಾಮಗಳು ಹಾಗೂ ಸ್ಥಳಗಳನ್ನ ಐಡೆಂಟಿಫೈ ಮಾಡಿದೆ.
ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮ :
ಮುಂಗಾರು ಮಳೆ ಅಬ್ಬರದ ಮುನ್ಸೂಚನೆ ಇರೋದ್ರಿಂದ ಕಾಫಿನಾಡ ಜಿಲ್ಲಾಡಳಿತ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದೆ. 64 ಜೆಸಿಬಿ. 65 ಹಿಟಾಚಿ. 83 ಟ್ರ್ಯಾಕ್ಟರ್. 155 ಟಿಪ್ಪರ್ಗಳ ಮೂಲಕ ಮಲೆನಾಡು-ಅರೆಮಲೆನಾಡಿನ ಮೇಲೆ ಹದ್ದಿನ ಕಣ್ಣಿಟ್ಟಿದೆ. 47 ಗ್ರಾಮ ಪಂಚಾಯಿತಿ ವ್ಯಾಪ್ತಿಯ 77 ಗ್ರಾಮಗಳನ್ನ ಅಪಾಯದ ಗ್ರಾಮಗಳೆಂದು ಗುರುತಿಸಿದೆ. 62 ನಿರಾಶ್ರಿತ ಕೇಂದ್ರಗಳನ್ನು ಆರಂಭಿಸಲು ಸನ್ನದ್ಧವಾಗಿದೆ. ಪ್ರವಾಹವನ್ನ ಎದುರಿಸಲು ತುರ್ತು ಸಂದರ್ಭದ ಅನುಕೂಲಕ್ಕಾಗಿ 34 ತರಬೇತಿ ತಂಡಗಳನ್ನು ರಚಿಸಿದೆ. ಲ್ಯಾಂಡ್ ಸ್ಲೈಡ್, ಫ್ಲಡ್ ಎಲ್ಲಾ ಜಾಗಗಳನ್ನ ಐಡೆಂಟಿಫೈ ಮಾಡಿದೆ. ತುಂಗಾ-ಭದ್ರಾ-ಹೇಮಾವತಿಯ ಅಬ್ಬರಕ್ಕೆ ಯಾವ ಗ್ರಾಮಗಳು ಬಲಿಯಾಗುತ್ತವೆ ಎಲ್ಲಾ ಮಾಹಿತಿಯೂ ಸಿದ್ಧಗೊಂಡಿದೆ. ಎನ್.ಆರ್.ಪುರ 21, ಮೂಡಿಗೆರೆ 33, ಚಿಕ್ಕಮಗಳೂರು 5, ಕೊಪ್ಪ 6, ಶೃಂಗೇರಿ 9, ಕಡೂರು 2, ತರೀಕೆರೆಯಲ್ಲಿ 1 ಗ್ರಾಮವನ್ನ ಜಿಲ್ಲಾಡಳಿತ ಅಪಾಯದ ಗ್ರಾಮಗಳೆಂದು ಗುರುತಿಸಿದೆ. ಮಳೆ ಹೆಚ್ಚಾಗಿ ಯಾವುದೇ ರೀತಿಯ ತೊಂದರೆಯಾದರೂ ಅಧಿಕಾರಿಗಳು ಅಲ್ಲಿರಬೇಕೆಂದು ಸೂಚಿಸಿದೆ. ಜಿಲ್ಲಾದ್ಯಂತ ಹೋಬಳಿವಾರು ತರಬೇತಿಯುಳ್ಳ 34 ತಂಡವನ್ನೂ ರಚಿಸಿದ್ದು, 290 ಹೋಂ ಗಾರ್ಡ್, 70 ಈಜು ತಜ್ಞರು ಹಾಗೂ 40 ಸ್ವಯಂ ಸೇವಕರನ್ನ ನಿಯೋಜಿಸಿದೆ.
CHIKKAMAGALURU RAINS: ವರುಣನ ರುದ್ರ ನರ್ತನಕ್ಕೆ ನಲುಗಿದ ಕಾಫಿನಾಡು: ಅಪಾರ ಬೆಳೆ ನಷ್ಟ!
ಮಳೆ ಆರಂಭಕ್ಕೂ ಮುನ್ನವೇ ಎಲ್ಲಾ ಸಿದ್ಧತೆ :
ಇನ್ನು ಮಳೆಯ ಪ್ರಮಾಣ ಹೇಗಿರುತ್ತೋ ಎಂಬ ಕಾರಣದಿಂದ ಜಿಲ್ಲಾಡಳಿತ 47 ಗ್ರಾಮ ಪಂಚಾಯಿತಿ 77 ಗ್ರಾಮಗಳನ್ನ ಅಪಾಯದ ಗ್ರಾಮಗಳೆಂದು ಗುರುತಿಸಿ 108 ಸ್ಥಳಗಳನ್ನ ಅಪಾಯದ ಸ್ಥಳ ಎಂದು ಗುರುತಿಸಲಾಗಿದೆ. ಇದರ ಜೊತೆ ಮಳೆ ಹೆಚ್ಚಾಗಿ ಸಾವು-ನೋವು ಸಂಭವಿಸುವ ಸಂದರ್ಭ ಬಂದರೆ ಜನರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಜಿಲ್ಲಾದ್ಯಂತ 40ಕ್ಕೂ ಹೆಚ್ಚು ಸುರಕ್ಷಿತ ಪ್ರದೇಶವನ್ನೂ ಐಡೆಂಟಿಫೈ ಮಾಡಿದೆ. ಚಾರ್ಮಾಡಿ ಘಾಟ್ ಸೇರಿದಂತೆ ಜಲಪಾತ ಹಾಗೂ ಅಪಾಯದ ಸ್ಥಳಗಳಲ್ಲಿ ಜನಸಾಮಾನ್ಯರು-ಪ್ರವಾಸಿಗರು ಮೋಜು-ಮಸ್ತಿ ಮಾಡಲು ಹೋಗಿ ಅಪಾಯಕ್ಕೆ ಸಿಲುಕಬಹುದು. ಹಾಗಾಗಿ, ಅಂತಹ ಜಾಗದಲ್ಲಿ ಕಡ್ಡಾಯವಾಗಿ ನಾಮಫಲಕ ಹಾಕಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಮಳೆ ಹೆಚ್ಚಾಗಿ ಆಪಾಯದ ಮುನ್ಸೂಚನೆ ಸಿಕ್ಕರೆ ಕೂಡಲೇ ಜನಸಾಮಾನ್ಯರನ್ನ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ಆದೇಶಿಸಿದ್ದಾರೆ.
ಒಟ್ಟಾರೆ, ಕಳೆದ ಮೂರ್ನಾಲ್ಕು ವರ್ಷದ ಮಳೆ ಮಲೆನಾಡಿಗರ ಬದುಕನ್ನ ಮೂರಾಬಟ್ಟೆಯನ್ನಾಗಿಸಿತ್ತು. ಎಲ್ಲಾ ಇದ್ದವರು ಎಲ್ಲಾ ಕಳೆದುಕೊಂಡು ಏನೂ ಇಲ್ಲದವರಂತೆ ನಿರ್ಗತಿಕರಾಗಿದ್ದರು. ನಿಮ್ಮ ಜೊತೆ ಸರ್ಕಾರ ಇದೆ ಎಂದ ಜನಪ್ರತಿನಿಧಿಗಳು ಮಳೆ ಮುಗಿದ ಬಳಿಕ ಕೊಟ್ಟ ಮಾತನ್ನ ಮರೆತಿರೋದು ದುರಂತ. ಈ ಮಧ್ಯೆ ಜಿಲ್ಲಾಡಳಿತ ಮಳೆ ಆರಂಭಕ್ಕೂ ಮುನ್ನವೇ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.