ಬೆಂಗಳೂರು [ಆ.17]:  ಕಾನೂನು ಬಾಹಿರವಾಗಿ ಅಶ್ಲೀಲ ನೃತ್ಯ ನಡೆಸುತ್ತಿದ್ದ ಕೆ.ಜಿ.ವೃತ್ತದ ಎಸ್‌ಸಿ ರಸ್ತೆಯಲ್ಲಿರುವ ‘ಬ್ಲೂ ಹೆವನ್‌’ ಲೈವ್‌ ಬ್ಯಾಂಡ್‌ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು 66 ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಪ್ರಕರಣದ ಸಂಬಂಧ 18 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, .65 ಸಾವಿರ ಮೌಲ್ಯದ ಮ್ಯೂಸಿಕ್‌ ಸೆಟ್‌, ಸ್ವೈಪಿಂಗ್‌ ಮೆಷಿನ್‌ ಜಪ್ತಿ ಮಾಡಲಾಗಿದೆ. ದಾಳಿ ವೇಳೆ ಬ್ಲೂ-ಹೆವನ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಮಾಲಿಕರಾದ ದಿನೇಶ್‌ಶೆಟ್ಟಿ, ಮಹೇಶ್‌ ಮತ್ತು ಕಿರಣ್‌ ಎಂಬುವವರು ತಲೆಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ಆರೋಪಿಗಳು ಹೊರ ರಾಜ್ಯದಿಂದ ಕೆಲಸ ಹುಡುಕಿಕೊಂಡು ಬಂದ ಹುಡುಗಿಯರನ್ನು ಬಾರ್‌ ಗರ್ಲ್ ಗಳಾಗಿ ಕೆಲಸ ಕೊಟ್ಟಿದ್ದರು. ಬಳಿಕ ಹೆಚ್ಚಿನ ವೇತನದ ಆಮಿಷವೊಡ್ಡಿ ಅಶ್ಲೀಲ ಉಡುಗೆಗಳನ್ನು ತೊಡಿಸಿ, ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದರು. ಈ ಮೂಲಕ ಗಿರಾಕಿಗಳಿಗೆ ಲೈಂಗಿಕ ಪ್ರಚೋದನೆ ಮಾಡಿಸುತ್ತಾ ಯುವತಿಯರ ಮೇಲೆ ಹಣ ಎಸೆಯುವಂತೆ ಪ್ರಚೋದಿಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.