Asianet Suvarna News Asianet Suvarna News

ಸುಕ್ಷೇತ್ರ ತಿಂಥಣಿ ಮೌನೇಶ್ವರ ಜಾತ್ರೆ: ತೆಪ್ಪದಲ್ಲಿ ನದಿ ದಾಟಲು ನಿಷೇಧ

ಜಿಲ್ಲಾಧಿಕಾರಿ ಕೂರ್ಮಾರಾವ್ ಪೂರ್ವಸಿದ್ಧತಾ ಸಭೆ | ಅಶ್ಲೀಲ ನೃತ್ಯ, ನಾಟಕ ಪ್ರದರ್ಶಿಸಿದವರ ವಿರುದ್ಧ ಕ್ರಮದ ಎಚ್ಚರಿಕೆ | ಶ್ರೀ ಮೌನೇಶ್ವರ ಜಾತ್ರೆಗೆ ಜಿಲ್ಲಾಡಳಿತ ಸಿದ್ಧತೆ | ಅಗತ್ಯ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ|

Raft Service Prohibition of During Tinthani Mouneshwar Fair in Yadgir District
Author
Bengaluru, First Published Jan 23, 2020, 2:44 PM IST
  • Facebook
  • Twitter
  • Whatsapp

ಯಾದಗಿರಿ(ಜ.23): ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ಫೆ. 3 ರಿಂದ 8 ರವರೆಗೆ ಜರುಗಲಿರುವ ಶ್ರೀ ಮೌನೇಶ್ವರ ದೇವಸ್ಥಾನದ ಜಾತ್ರೆಯ ವೇಳೆ ಕೃಷ್ಣಾನದಿಯಲ್ಲಿ ನೀರಿನ ರಭಸ ಹೆಚ್ಚಾಗಿರುವುದರಿಂದ ತೆಪ್ಪಗಳ ಮೂಲಕ ನದಿ ದಾಟಿಸುವುದನ್ನು ನಿಷೇಧಿಸುವ ಬಗ್ಗೆ ಹಾಗೂ ಜಾತ್ರೆಯಲ್ಲಿ ಅಶ್ಲೀಲ ನೃತ್ಯ ಹಾಗೂ ನಾಟಕ ಪ್ರದರ್ಶಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ತಿಂಥಣಿ ಶ್ರೀ ಮೌನೇಶ್ವರ ದೇವಸ್ಥಾನದ ಜಾತ್ರೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾರಾಯಣಪುರ ಜಲಾಶಯದ ಮೂಲಕ ನದಿಗೆ 100 ಕ್ಯುಸೆಕ್ ನೀರು ಬಿಡುಗಡೆಗೆ ಕೃಷ್ಣ ಭಾಗ್ಯ ಜಲ ನಿಗಮಕ್ಕೆ ಪತ್ರ ಬರೆಯಬೇಕು. ಈ ಹಿನ್ನೆಲೆಯಲ್ಲಿ ನೀರಿನ ರಭಸ ಹೆಚ್ಚಾಗುವುದರಿಂದ ತೆಪ್ಪಗಳ ಮೂಲಕ ನದಿ ದಾಟಿಸುವುದನ್ನು ನಿಷೇಧಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿ, ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಾತ್ರೆಯ ಸಮಯದಲ್ಲಿ ನಡೆಯುವ ನಾಟಕ ಮತ್ತು ಇತರೆ ಪ್ರದರ್ಶನದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ ಮಾಡತಕ್ಕದಲ್ಲ. ಒಂದು ವೇಳೆ ಅಶ್ಲೀಲ ಪ್ರದರ್ಶನ ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು. ಪ್ರದರ್ಶನಕ್ಕೆ ಪರವಾನಗಿ ನೀಡುವ ಪೂರ್ವದಲ್ಲಿ ಷರತ್ತು ವಿಧಿಸುವಂತೆ ತಹಸೀಲ್ದಾರ್‌ಗೆ ನಿರ್ದೇಶಿಸಿದರು. ದೇವಸ್ಥಾನದ ನದಿ ತೀರದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ನಿರ್ಮಿಸಿದ ಸ್ನಾನ ಘಟ್ಟ ಉತ್ತಮವಾಗಿದೆ. ಇದು ಶಾಶ್ವತವಾಗಿ ಉಳಿಯುವಂತೆ ನೋಡಿಕೊಳ್ಳಲು ಇದರ ಮೇಲೆ ಕಾಂಕ್ರೀಟ್ ಮಾಡಿಸಲು ಟೆಂಡರ್ ಕರೆಯಲಾಗಿದೆ. ಭಕ್ತರಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು. ಈ ನಿಟ್ಟಿನಲ್ಲಿ ವಿವಿಧ ಸ್ಥಳಗಳಲ್ಲಿ ನೀರಿನ ಟ್ಯಾಂಕರ್‌ಗಳನ್ನು ನಿಲ್ಲಿಸಿ, ಭಕ್ತರಿಗೆ ಕುಡಿಯುವ ನೀರು ಕಲ್ಪಿಸಬೇಕು ಎಂದು ಕೂರ್ಮಾರಾವ್ ಹೇಳಿದರು. 

ಸ್ವಚ್ಛತೆ ಕಾಪಾಡದಿದ್ದರೆ ದಂಡ: 

ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜಾತ್ರೆಯಲ್ಲಿ ಸ್ಥಾಪಿಸುವ ವಿವಿಧ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳ ಪಕ್ಕದಲ್ಲಿ ಕಸದ ಬುಟ್ಟಿಗಳನ್ನು ಇಟ್ಟುಕೊಳ್ಳಬೇಕು. ಯಾವುದೇ ತರಹದ ತ್ಯಾಜ್ಯಗಳನ್ನು ಅದರಲ್ಲಿ ಹಾಕಿಸುವ ವ್ಯವಸ್ಥೆ ಮಾಡಬೇಕು. ಅಂಗಡಿಗಳ ಮಾಲೀಕರು ಸ್ವಚ್ಛತೆ ಕಾಪಾಡದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು. 

ಜಾತ್ರೆ ಸಮಯದಲ್ಲಿ ದೇವಸ್ಥಾನದ ಆವರಣದಲ್ಲಿ ಕೌಂಟರ್ ನಿರ್ಮಿಸಿ, ಗಣಕಯಂತ್ರದ ಮೂಲಕ ಭಕ್ತರಿಗೆ ರಸೀದಿ ನೀಡಲು ಒಬ್ಬ ಸಿಬ್ಬಂದಿಯನ್ನು ನೇಮಿಸಲಾಗುವುದು. ಇದಕ್ಕಾಗಿ ದೇವಸ್ಥಾನದ ನಿಧಿಯಿಂದ ಗೌರವ ಧನ ಪಾವತಿಸಲು ಕ್ರಮ ಕೈಗೊಳ್ಳಬೇಕು. ಭಕ್ತರು ಹೊಸದಾಗಿ ವಸತಿಗೃಹಗಳನ್ನು ಕಟ್ಟಿಸಲು ಮುಂದೆ ಬರುತ್ತಿರುವುದಾಗಿ ದೇವಸ್ಥಾನ ಸಮಿತಿಯವರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಒಂದು ಕೋಣೆ ನಿರ್ಮಾಣಕ್ಕೆ ತಗುಲುವ ವೆಚ್ಚವನ್ನು ವಿವಿಧ ತಾಂತ್ರಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ 2 ಲಕ್ಷ ರು.ಗಳ ನಿಗದಿಪಡಿಸಿದರು. 

ಮದ್ಯ, ಮಾಂಸ ಮಾರಾಟ ನಿಷೇಧ: 

ಜಾತ್ರೆಯ ಸಮಯದಲ್ಲಿ ಮಾಂಸ, ಮದ್ಯ ಮಾರಾಟ ನಿಷೇಸಬೇಕು. ದೇವಸ್ಥಾನ ಮತ್ತು ಭಕ್ತರ ಸುರಕ್ಷತೆ ದೃಷ್ಟಿಯಿಂದ ಈಗಾಗಲೇ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿರುವ ಕುರಿತು ಪರಿಶೀಲಿಸಿ. ಜಾತ್ರೆ ನಿಮಿತ್ತ ಅಗತ್ಯ ಸ್ಥಳಗಳಲ್ಲಿ ಹೆಚ್ಚಿನ ಸಿ.ಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ದೇವಸ್ಥಾನದಲ್ಲಿ ಜರುಗುವ ಪೂಜೆಯನ್ನು ಭಕ್ತಾದಿಗಳಿಗೆ ವೀಕ್ಷಿಸುವಂತಾಗಲು ದೇವಸ್ಥಾನದ ಹೊರಗಡೆ ಎರಡು ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸುವಂತೆ ಸೂಚಿಸಿದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತೆ ವಹಿಸಬೇಕು. ದೇವಸ್ಥಾನ ಆವರಣ, ನದಿಯ ದಂಡೆ ಹಾಗೂ ಬಸ್ ನಿಲುಗಡೆ ಸ್ಥಳದಲ್ಲಿ ಜನದಟ್ಟಣೆ ಹೆಚ್ಚಾಗಿರುತ್ತದೆ.

ಜನದಟ್ಟಣೆಯನ್ನು ನಿಯಂತ್ರಿಸಲು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಜಾತ್ರೆಯಲ್ಲಿ ಮಕ್ಕಳು ತಪ್ಪಿಸಿಕೊಂಡಲ್ಲಿ ಅವರನ್ನು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿ, ಪೋಷಕರಿಗೆ ಒಪ್ಪಿಸುವ ಜವಾಬ್ದಾರಿಯನ್ನು ಪೊಲೀಸ್ ಮತ್ತು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ವಹಿಸಿದರು. ಜಾತ್ರೆ ಮುಗಿಯುವವರೆಗೆ ತುರ್ತು ಆರೋಗ್ಯ ಸೇವೆಗಳಿಗಾಗಿ ತಾಲೂಕು ಆರೋಗ್ಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ ಆಯೋಜಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, 108 ಆಂಬುಲೆನ್ಸ್ ಮತ್ತು ಅಗ್ನಿಶಾಮಕ ದಳದ ವಾಹನ ಸ್ಥಳದಲ್ಲಿರಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಮಾತನಾಡಿ, ಜಾತ್ರೆಯ ಆವರಣದವರೆಗೆ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರೆ ಭಕ್ತರಿಗೆ ತೊಂದರೆಯುಂಟಾಗುತ್ತದೆ. ಹಾಗಾಗಿ, ದೇವಸ್ಥಾನದಿಂದ 1 ಕಿ. ಮೀ. ದೂರದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು. 

ಜಿಲ್ಲಾ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕರಾದ ರಘುವೀರ್‌ಸಿಂಗ್ ಠಾಕೂರ್ ಸಭೆಯ ನಡಾವಳಿಗಳನ್ನು ಓದಿದರು. ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ. ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ, ತಾಪಂ ಇಓ ಅಮರೇಶ, ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಹಣಮಂತಪ್ಪ, ಜೆಸ್ಕಾಂ ಎಇಇ ಈರಣ್ಣ, ದೇವಸ್ಥಾನ ಸಮಿತಿ ಸದಸ್ಯರಾದ ಸಣ್ಣಮಾನಯ್ಯ ಬಂಡೊಳ್ಳಿ, ಗಂಗಾಧರ ನಾಯಕ, ಹಣಮಂತ ತಿಂಥಣಿ, ಬಸವರಾಜ ದೊಡ್ಡಮನಿ, ಚಿನ್ನಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಅವರು, ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಜಾತ್ರೆ ನಡೆಯುವ ಸ್ಥಳ, ದೇವಸ್ಥಾನ ಆವರಣ, ಬಸ್ ನಿಲುಗಡೆ ಸ್ಥಳ, ನದಿ ದಂಡೆ ಹಾಗೂ ಇತರೆ ಪ್ರದೇಶಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ತಿಳಿಸಿದ್ದಾರೆ. 

Follow Us:
Download App:
  • android
  • ios