ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್
ಸಿದ್ದರಾಮಯ್ಯನವರ ವಿರುದ್ಧ ಕೆಟ್ಟದಾಗಿ ಹೇಳಿಕೆ ನೀಡಿರುವ ಪುನೀತ್ ಕೆರೆಹಳ್ಳಿ| ಯುವಕನ ಬಂಧನಕ್ಕೆ ಆಗ್ರಹಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಕೆ| ವಾರದಲ್ಲಿ ಈ ರೀತಿ 3-4 ವಿವಾದಾತ್ಮಕ ಪೋಸ್ಟ್ ಹಾಕುತ್ತಿರುವ ಪುನೀತ್ ಕೆರೆಹಳ್ಳಿ| ಪುನೀತ್ ಕೆರೆಹಳ್ಳಿಗೆ ಸಮಾಜದ ಸ್ವಾಸ್ಥ್ಯ ಹಾಳುಗೆಡುವುದೇ ಕೆಲಸವಾಗಿದೆ|
ಬಸವನಬಾಗೇವಾಡಿ(ಜೂ.10): ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಯುವಕನನ್ನು ಬಂಧಿಸುವಂತೆ ಆಗ್ರಹಿಸಿ ಮಂಗಳವಾರ ತಹಸೀಲ್ದಾರ್ ಎಂ.ಎನ್.ಬಳಿಗಾರ ಅವರಿಗೆ ಪಟ್ಟಣದ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಸಿದ್ದರಾಮಯ್ಯನವರ ವಿರುದ್ಧ ಕೆಟ್ಟದಾಗಿ ಹೇಳಿಕೆ ನೀಡಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಜನಪ್ರತಿನಿಧಿ ಕಾಯ್ದೆ ಮತ್ತು ಜನರ, ಸಮುದಾಯದ ಭಾವನೆಗಳನ್ನು ಭಂಗ ಉಂಟುಮಾಡುವ ಕಾಯ್ದೆಯಡಿ ದೂರು ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಜಿಲ್ಲಾ ಯುವ ಕುರುಬರ ಸಂಘದ ಉಪಾಧ್ಯಕ್ಷ ಸಂಗಮೇಶ ವಾಡೇದ ಮಾಧ್ಯಮದವರೊಂದಿಗೆ ಮಾತನಾಡಿ, ಪುನೀತ್ ಕೆರೆಹಳ್ಳಿ ವಾರದಲ್ಲಿ ಈ ರೀತಿ 3-4 ವಿವಾದಾತ್ಮಕ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಆತನಿಗೆ ಸಮಾಜದ ಸ್ವಾಸ್ಥ್ಯ ಹಾಳುಗೆಡುವುದೇ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ವಿಡಿಯೋ ವೈರಲ್
ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕುರಿತು ಅವಾಚ್ಯ ಪದ ಬಳಕೆ ಮಾಡಿ ಪದೇ ಪದೆ ಪೋಸ್ಟ್ ಮಾಡುತ್ತಿದ್ದು, ಸರಿಯಾದ ಬೆಳವಣಿಗೆಯಲ್ಲ. ಈತನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ಸೈಬರ್ ಕ್ರೈಂ ಇದೆ. ರಾಷ್ಟ್ರಮಟ್ಟದಲ್ಲಿಯೂ ದೊಡ್ಡ ಸೈಬರ್ ಕ್ರೈಂ ತಂಡವಿದೆ. ಸೋಶಿಯಲ್ ಮಿಡಿಯಾದಲ್ಲಿ ಕೆಟ್ಟದಾಗಿ ಹೇಳಿಕೆ ಕೊಟ್ಟವರ ಬಗ್ಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ತಾಲೂಕು ಯುವ ಘಟಕದ ಅಧ್ಯಕ್ಷ ಪ್ರಕಾಶ ಜಮ್ಮಲದಿನ್ನಿ, ಯುವ ಮುಖಂಡರಾದ ಸಿದ್ದು ರೊಳ್ಳಿ, ಮಹೇಶ ಹಿರೇಕುರುಬರ, ಮುತ್ತರಾಜ ಹಾಲಿಹಾಳ, ಮುತ್ತು ಪೂಜಾರಿ, ಮಲ್ಲು ತಳೇವಾಡ, ಗುರುನಾಥ ದಳವಾಯಿ, ಶ್ರೀಶೈಲ ಬಂಚೋಡಿ, ಬಸು ತಾಂಬೆ, ರಾಯಣ್ಣ ಬಿಸನಾಳ, ಸಂತೋಷ ಹಿರೇಕುರುಬರ, ಮೌನೇಶ ಕುರಿ, ಬಸವರಾಜ ಮನಗೂಳಿ ಇತರರು ಇದ್ದರು.