ದೂಧ್‌ಸಾಗರ ನೋಡಲು ಹೋದವರಿಗೆ ಬಸ್ಕಿ ಶಿಕ್ಷೆ..!
ಜಲಪಾತ ಸ್ಥಳಕ್ಕೆ ತೆರಳದಂತೆ ಗೋವಾ ಪೊಲೀಸರು, ಅರಣ್ಯ ಸಿಬ್ಬಂದಿ ತಡೆ, ಅಪಾಯಕಾರಿ ಸ್ಥಳಕ್ಕೆ ತೆರಳಲು ಮುಂದಾದವರ ಮೇಲೆ ಲಾಠಿ ಚಾರ್ಜ್, ಚಾರಣಕ್ಕೆ ತೆರಳಿದ ನೂರಾರು ಜನರ ಬಳಿ ಬಸ್ಕಿ ಹೊಡೆಸಿದ ಪೊಲೀಸರು, ಆಕ್ರೋಶಗೊಂಡ ಪ್ರವಾಸಿಗರಿಂದ ಪ್ರತಿಭಟನೆ, ಕಲ್ಲು ತೂರಾಟ, ದೂಧಸಾಗರದಲ್ಲಿ ಇಳಿಯುವುದು, ಹಳಿ ಮೇಲೆ ನಡೆಯಲು ರೈಲ್ವೆ ನಿಷೇಧ.
ಪಣಜಿ/ಹುಬ್ಬಳ್ಳಿ/ಬೆಳಗಾವಿ(ಜು.17): ಮೈದುಂಬಿ ಧುಮ್ಮಿಕ್ಕುತ್ತಿರುವ ಕರ್ನಾಟಕ-ಗೋವಾ ಗಡಿಭಾಗದ ದೂಧಸಾಗರ ಜಲಪಾತ ನೋಡಲು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಚಾರಣಿಗರನ್ನು ಗೋವಾ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಅಡ್ಡಗಟ್ಟಿಬಸ್ಕಿ ಹೊಡೆಸಿದ ಘಟನೆ ಭಾನುವಾರ ನಡೆದಿದೆ. ಜೊತೆಗೆ ಸೂಚನೆ ಹೊರತಾಗಿಯೂ ಅಪಾಯಕಾರಿ ಸ್ಥಳಕ್ಕೆ ಚಾರಣಿಗರು ತೆರಳಲು ಯತ್ನಿಸಿದ ವೇಳೆ ಪೊಲೀಸರು ಲಘು ಲಾಠಿ ಪ್ರಹಾರವನ್ನೂ ಮಾಡಿದ್ದಾರೆ.
ಈ ನಡುವೆ ಜಲಪಾತ ನೋಡಲು ರೈಲ್ವೆ ಹಳಿಯ ಮೇಲೆ ಚಾರಣಿಗರು ನಡೆದು ಹೋಗುವುದು ಕಾನೂನು ಬಾಹಿರ ಎಂದು ಮತ್ತೊಮ್ಮೆ ಎಚ್ಚರಿಸಿರುವ ರೈಲ್ವೆ ಪೊಲಿಸರು, ರೈಲ್ವೆಯ ಸುರಕ್ಷಿತ ಸಂಚಾರಕ್ಕೆ ಅಪಾಯ ತಂದೊಡ್ಡುವ ಈ ಬೆಳವಣಿಗೆ ಶಿಕ್ಷಾರ್ಹ ಅಪರಾಧ. ಹೀಗಾಗಿ ಯಾವುದೇ ವ್ಯಕ್ತಿಗಳು ದೂಧಸಾಗರ ಬಳಿ ಅಥವಾ ಬ್ರಗಾನ್ಜಾ ಘಾಟಿ ಪ್ರದೇಶದಲ್ಲಿ ಎಲ್ಲೂ ರೈಲಿನಿಂದ ಇಳಿಯುವ ಕೆಲಸ ಮಾಡಬಾರದು ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ನೈಋುತ್ಯ ರೈಲ್ವೆ ಎಚ್ಚರಿಕೆ ನೀಡಿದೆ.
ಮಳೆ ಮೋಡಗಳು ಕಟ್ಟೋದು ನೋಡ್ಬೇಕಾ ಬಲ್ಲಾಳರಾಯನ ದುರ್ಗಕ್ಕೆ ಬನ್ನಿ: ಟ್ರಕ್ಕಿಂಗ್‌ಗೆ ಬೆಸ್ಟ್ ಪ್ಲೇಸ್
ಜಲಪಾತಗಳ ಪ್ರವೇಶಕ್ಕೆ ನಿರ್ಬಂಧ:
ಕಳೆದ ವಾರ ಗೋವಾದ ಸಂಗ್ಯುಮ್ ತಾಲೂಕಿನ ಮೈನಾಪಿ ಜಲಪಾತ ನೋಡಲು ತೆರಳಿದ್ದ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದರು. ಮತ್ತೊಂದೆಡೆ ನದಿಗಳು ಉಕ್ಕೇರಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಗೋವಾದ ಪ್ರಮೋದ್ ಸಾವಂತ್ ಸರ್ಕಾರ, 2 ದಿನದ ಹಿಂದೆ ಆದೇಶ ಹೊರಡಿಸಿ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶ ನಿಷೇಧಿಸಿತ್ತು. ಹಾಗಾಗಿ ಪೊಲೀಸರು ದೂಧಸಾಗರ ಜಲಪಾತಕ್ಕೆ ಸಾಗುವ ದಾರಿಯಲ್ಲಿ ಭಾನುವಾರ ಮುಂಜಾನೆಯಿಂದಲೇ ಕಾವಲು ಹಾಕಿದ್ದರು.
ಅತ್ಯಂತ ದುರ್ಗಮ ಸ್ಥಳದಲ್ಲಿರುವ ದೂಧಸಾಗರ ಫಾಲ್ಸ್‌ಗೆ ತೆರಳಲು ಯಾವುದೇ ರಸ್ತೆ ಮಾರ್ಗವಿಲ್ಲ. ಕೆಲವು ಹತ್ತಿರದ ಊರುಗಳವರೆಗೆ ಮಾತ್ರ ರೈಲು/ವಾಹನದಲ್ಲಿ ತೆರಳಿ ಅಲ್ಲಿಂದ ರೈಲ್ವೆ ಹಳಿ ಮೇಲೆ ನಡೆದುಕೊಂಡೇ ಹೋಗಬೇಕು.
ಆದರೆ ಸಾವಂತ್ ಹಾಕಿದ್ದ ನಿರ್ಬಂಧದ ವಿಷಯ ತಿಳಿಯದ ಕರ್ನಾಟಕ ಹಾಗೂ ವಿವಿಧ ರಾಜ್ಯಗಳ ಪ್ರವಾಸಿಗರು, ಭಾನುವಾರ ಗೋವಾದ ಕುಲೇಂ ಸೇರಿದಂತೆ ವಿವಿಧ ರೈಲು ನಿಲ್ದಾಣದಲ್ಲಿ ಇಳಿದು 11 ಕಿ.ಮೀನಷ್ಟುರೈಲ್ವೆ ಹಳಿಯ ಮೇಲೇ ಚಾರಣ ನಡೆಸಿ ದೂಧಸಾಗರ ಜಲಪಾತದ ಸನಿಹ ಬಂದಿದ್ದರು. ಆದರೆ ಚಾರಣಿಗರನ್ನು ಗೋವಾ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮಾರ್ಗ ಮಧ್ಯದಲ್ಲೇ ತಡೆದರು.
ಈ ವೇಳೆ ಪೊಲೀಸರು ಮತ್ತು ಚಾರಣಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಪೈಕಿ ಕೆಲವರು ಅಡ್ಡಿಯ ನಡುವೆಯೂ ದೂಧಸಾಗರ ಕಡೆಗೆ ತೆರಳಲು ಯತ್ನಿಸಿದ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಅವರಿಂದ ಬಸ್ಕಿ ಹೊಡೆಸಿದ್ದಾರೆ.
ಆದರೆ ಗೋವಾ ಪೊಲೀಸರ ಈ ಕ್ರಮ ಖಂಡಿಸಿ ಹಲವಾರು ಚಾರಣಿಗರು ಆಕ್ರೋಶ ವ್ಯಕ್ತಪಡಿಸಿ ರೈಲ್ವೆ ಹಳಿ ಮೇಲೆ ಕೂತು ಘೋಷಣೆ ಕೂಗಿದರು. ‘ನಾವು ದೂರದ ಊರುಗಳಿಂದ ಬಂದಿದ್ದೇವೆ. ನಮಗೆ ದೂಧಸಾಗರ ವೀಕ್ಷಿಸಲು ಅವಕಾಶ ಕಲ್ಪಿಸಬೇಕು’ ಎಂದು ಪ್ರವಾಸಿಗರು ಪಟ್ಟು ಹಿಡಿದಿದ್ದರು. ಬಸ್ಕಿ ಹೊಡೆಯುವ ಶಿಕ್ಷೆ ಕೊಟ್ಟಿರುವ ಗೋವಾ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಿಡಿಗೇಡಿಗಳಿಂದ ಕಲ್ಲುತೂರಾಟ ಕೂಡ ನಡೆದಿದೆ. ಇದರಿಂದ ಆರ್‌ಪಿಎಫ್ ಸಿಬ್ಬಂದಿ ಸೇರಿ ಹಲವರಿಗೆ ಗಾಯಗಳಾಗಿವೆ.ಗೋವಾ ಪೊಲೀಸರು ಬಸ್ಕಿ ಹೊಡೆಸುತ್ತಿರುವ ವಿಡಿಯೋಗಳನ್ನೆಲ್ಲ ಅಪ್‌ಲೋಡ್ ಮಾಡಲಾಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲವರು ಇಲ್ಲಿ ಸಂಚರಿಸುವ ರೈಲುಗಳಿಗೆ ವಿಸ್ಟಾಡಾಮ್ ಕೋಚನ್ನು ಅಳವಡಿಸಿ ಎಂದು ರೈಲ್ವೆ ಇಲಾಖೆಗೆ ಸಲಹೆ ನೀಡಿದ್ದಾರೆ.
ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ವಾಹನ ಪ್ರವೇಶ ನಿರ್ಬಂಧ: ಟ್ರಾಫಿಕ್ ತಡೆಯಲು ಪೊಲೀಸರ ಕ್ರಮ
ಬಸ್ಕಿ ಶಿಕ್ಷೆ ನೀಡಿಲ್ಲ- ರೈಲ್ವೆ:
‘ಪ್ರವಾಸಿಗರಿಗೆ ಬಸ್ಕಿ ಹೊಡೆಸುವ ಶಿಕ್ಷೆ ಕೊಟ್ಟಿದ್ದು ಆರ್‌ಪಿಎಫ್ (ರೈಲ್ವೆ ರಕ್ಷಣಾ ದಳ) ಪೊಲೀಸರಲ್ಲ. ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ಪ್ರವಾಸಿಗರ ಮನವೊಲಿಸಿ ಅವರನ್ನು ಸುರಕ್ಷಿತವಾಗಿ ಕರೆತರುವ ಕೆಲಸವನ್ನು ಆರ್‌ಪಿಎಫ್ ಮಾಡಿದೆ ಎಂಬುದನ್ನು ನೈಋುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ಸ್ಪಷ್ಟಪಡಿಸಿದ್ದಾರೆ.
ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುವುದು ಅಪರಾಧ. ಹೀಗೆ ಯಾವ ಪ್ರವಾಸಿಗರು ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗಬಾರದು. ದೂದಸಾಗರದಲ್ಲಿ ಹೀಗೆ ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ಪ್ರವಾಸಿಗರನ್ನು ಆರ್‌ಪಿಎಫ್ ಸಿಬ್ಬಂದಿ ಮನವೊಲಿಸಿ ಸುರಕ್ಷಿತವಾಗಿ ಕರೆತಂದಿದೆ. ನಮ್ಮ ಸಿಬ್ಬಂದಿ ಪ್ರವಾಸಿಗರಿಗೆ ಬಸ್ಕಿ ಹೊಡೆಸುವ ಶಿಕ್ಷೆಯನ್ನೇನೂ ನೀಡಿಲ್ಲ ಅಂತ ನೈಋುತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.