ಗದಗ(ಸೆ.03):  ಪಿಯು ಪರೀಕ್ಷಾ ಮಂಡಳಿಯ ಯಡವಟ್ಟಿನಿಂದ ಫಲಿತಾಂಶದಲ್ಲಿ ನಪಾಸು (ಫೇಲ್‌) ಆಗಿದ್ದ ವಿದ್ಯಾರ್ಥಿ, ಉತ್ತರ ಪತ್ರಿಕೆಯ ನಕಲು ಪ್ರತಿಯಲ್ಲಿ ಡಿಸ್ಟಿಂಕ್ಷನ್‌ ಪಡೆದಿದ್ದಾನೆ. ಆತನೇ ಕಾಲೇಜಿಗೆ ಪ್ರಥಮ!

ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಕೆಇಎಸ್‌ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಬ್ಬೀರ್‌ ಖಾಜಿ ಈ ರೀತಿ ಪಿಯು ಪರೀಕ್ಷಾ ಮಂಡಳಿಯಿಂದ ಅನ್ಯಾಯಕ್ಕೊಳಗಾದವ. ಪಿಯುಸಿ ಕಲಾ ವಿಭಾಗದ ಪರೀಕ್ಷೆಯಲ್ಲಿ ಎಲ್ಲ ವಿಷಯದಲ್ಲೂ ಶೇ.90 ಕ್ಕೂ ಹೆಚ್ಚು ಅಂಕ ಗಳಿಸಿದ್ದ ಶಬ್ಬೀರ್‌ಗೆ ಇಂಗ್ಲೀಷ್‌ನಲ್ಲಿ ಮಾತ್ರ ಕೇವಲ 24 ಅಂಕ ಬಂದಿತ್ತು. ಫಲಿತಾಂಶ ಫೇಲ್‌. ಇದರಿಂದ ಆಘಾತ, ಆತಂಕಕ್ಕೊಳಗಾದ ಆತ, ಇಂಗ್ಲೀಷ್‌ ಕಠಿಣವಾಗಿದ್ದರೂ ಇಷ್ಟೊಂದು ಕಡಿಮೆ ಅಂಕ ಬೀಳಲು ಸಾಧ್ಯವೇ ಇಲ್ಲ ಎಂದು, ಅವರಿವರ ಬಳಿ ಹಣ ಹೊಂದಿಸಿಕೊಂಡು ಮರು ಮೌಲ್ಯಮಾಪನಕ್ಕೆ ಹಾಕಿದ. ಆದರೆ ವಿದ್ಯಾರ್ಥಿಯ ಹೆಸರು ಮರು ಮೌಲ್ಯಮಾಪನ ಪಟ್ಟಿಯಲ್ಲಿ ಇರಲಿಲ್ಲ. ಕೊನೆಗೆ ಬೇರೆ ಮಾರ್ಗ ಕಾಣದೇ ಉತ್ತರ ಪತ್ರಿಕೆಯ ಅಂಕ ಗಳಿಕೆಯ ಪ್ರತಿ ತರಿಸಿದಾಗ ಆತನಿಗೆ 54 ಅಂಕ ಬಿದ್ದಿರುವುದು ದೃಢಪಟ್ಟಿದೆ. ಇದರಿಂದ ವಿದ್ಯಾರ್ಥಿ ಶೇ.87 ರಷ್ಟುಅಂಕ (524) ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ.

ಈ ಘಟನೆಯಿಂದ ನೋವು ಅನುಭವಿಸಿದ ವಿದ್ಯಾರ್ಥಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಅದೀಗ ವೈರಲ್‌ ಆಗಿದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್....!...

ಕನ್ನಡ- 92, ಇತಿಹಾಸ- 94, ಅರ್ಥಶಾಸ್ತ್ರ-98, ಸಾಮಾಜ ವಿಜ್ಞಾನ- 90 ಹಾಗೂ ರಾಜ್ಯಶಾಸ್ತ್ರ-96 ಅಂಕ ಗಳಿಸಿದ್ದರೆ, ಪ್ರಾರಂಭದಲ್ಲಿ ಇಂಗ್ಲೀಷ್‌ಗೆ 24 ಅಂಕವಿದ್ದು, ಬಳಿಕ ಅದೀಗ 54ಕ್ಕೆ ಏರಿಕೆಯಾಗಿದೆ.

ಈ ರೀತಿ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾಗಿರುವ ಪಿಯು ಹಂತದ ಫಲಿತಾಂಶ ತಪ್ಪಾಗಿ ನೀಡುವ ಮೂಲಕ ಪಿಯು ಮಂಡಳಿ ವಿದ್ಯಾರ್ಥಿಗಳ ಭವಿಷ್ಯ ಮಣ್ಣುಪಾಲು ಮಾಡುತ್ತಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಇಲಾಖೆ ವಿದ್ಯಾರ್ಥಿಯ ಫಲಿತಾಂಶ ಸಮಸ್ಯೆಯನ್ನು ಬಗೆಹರಿಸಬೇಕಿದೆ.
  
ಫಲಿತಾಂಶ ಪಟ್ಟಿಯಲ್ಲಿ ಎಲ್ಲ ವಿಷಯದಲ್ಲಿ 90ಕ್ಕೂ ಅಧಿಕ ಅಂಕ ಪಡೆದಿದ್ದು, ಇಂಗ್ಲಿಷ್‌ನಲ್ಲಿ 24 ಎಂದು ನಮೂದು ಮಾಡಲಾಗಿದೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದೆ. ಅದರ ಫಲಿತಾಂಶ ಬಿಡುಗಡೆಯಾದಾಗ ನನ್ನ ಹೆಸರೇ ಇರಲಿಲ್ಲ. ಈಗ ಉತ್ತರ ಪತ್ರಿಕೆ ನಕಲು ಪ್ರತಿ ತರಿಸಿದ್ದು, ಇದರಲ್ಲಿ 54 ಅಂಕಗಳೊಂದಿಗೆ ಪಾಸ್‌ ಆಗಿರುವುದು ತಿಳಿಯಿತು. ಈ ಬಗ್ಗೆ ಶಿಕ್ಷಣ ಸಚಿವರು ಕ್ರಮ ತೆಗೆದುಕೊಳ್ಳಬೇಕು, ನನಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.

-ಶಬ್ಬೀರ ಖಾಜಿ, ವಿದ್ಯಾರ್ಥಿ ಕೊಣ್ಣೂರು ಗ್ರಾಮ