ಬೆಂಗಳೂರು(ಜು.15): ಕೊರೋನಾ ಸೋಂಕಿನಿಂದಾಗಿ ಬಿಬಿಎಂಪಿಯ ಇಬ್ಬರು ನೌಕರರು ಮೃತಪಟ್ಟಿದ್ದಾರೆ. ಯಲಹಂಕ ವಲಯದ ಸಹ ಕಂದಾಯ ಅಧಿಕಾರಿ ಹಾಗೂ ಪರಿವೀಕ್ಷಕರಾಗಿದ್ದ 55 ವರ್ಷದ ನಟರಾಜ್‌ ಅವರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಅದೇ ರೀತಿ ಶಿವನಗರ ವಾರ್ಡ್‌ನಲ್ಲಿ ಗ್ಯಾಂಗ್‌ಮನ್‌ ಆಗಿದ್ದ ನರಸಿಂಹ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇವರು ಸಹ ಕೊರೊನಾ ಸೋಂಕಿನ ಲಕ್ಷಣಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದರೆ, ಇವರ ಕೊರೋನಾ ಸೋಂಕು ಪರೀಕ್ಷಾ ವರದಿ ಬಂದ ನಂತರ ಸ್ಪಷ್ಟವಾಗಿ ತಿಳಿಯಲಿದೆ ಎಂದು ಎಂದು ಶಿವನಗರ ವಾರ್ಡ್‌ನ ಪಾಲಿಕೆ ಸದಸ್ಯರು ತಿಳಿಸಿದ್ದಾರೆ.

ನಿವೃತ್ತಿಯ ಅಂಚಿನಲ್ಲಿದ್ದ ಪಿಎಸ್‌ಐ ಸೋಂಕಿಗೆ ಬಲಿ

ಕೊರೋನಾ ಸೋಂಕಿಗೆ ಪೊಲೀಸರ ಸಾವಿನ ಸರಣಿ ಮುಂದುವರೆದಿದ್ದು, ನಿವೃತ್ತಿ ನಿರೀಕ್ಷೆಯಲ್ಲಿದ್ದ ಸೋಂಕಿತ ಸಬ್‌ ಇನ್‌ಸ್ಪೆಕ್ಟರ್‌ವೊಬ್ಬರು ಕೊನೆಯುಸಿರೆಳೆದಿದ್ದಾರೆ. ಪೊಲೀಸ್‌ ನಿಯಂತ್ರಣ ಕೊಠಡಿ ಪಿಎಸ್‌ಐ ನಾಗರಾಜ್‌ (59) ಮೃತರು. ಕೆಲವು ದಿನಗಳ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರಲ್ಲಿ ಸೋಂಕು ದೃಢಪಟ್ಟಿತ್ತು. ಬಳಿಕ ಅತ್ತಿಬೆಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಗರಾಜ್‌ ಅವರು ಚಿಕಿತ್ಸೆ ಫಲಿಸದೆ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

'ನಿಮಿಷಕ್ಕೊಂದು ತೀರ್ಮಾನ, ಮಂತ್ರಿಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಸೋಂಕು ಹೆಚ್ಚಳ'

ಮೂರು ದಶಕಗಳ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ನಾಗರಾಜ್‌ ಅವರು, ಮೂರು ತಿಂಗಳಲ್ಲಿ ನಿವೃತ್ತಿಯಾಗಲಿದ್ದರು. ತಮ್ಮ ಕುಟುಂಬದ ಜತೆ ಅತ್ತಿಬೆಲೆಯಲ್ಲಿ ನೆಲೆಸಿದ್ದ ಅವರು, ಪಿಎಸ್‌ಐ ಮುಂಬಡ್ತಿ ಪಡೆದ ನಂತರ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಚೇರಿ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯ ನಿರತರಾಗಿದ್ದಾಗಲೇ ಜು.4ರಂದು ನಾಗರಾಜ್‌ ಅವರಲ್ಲಿ ಜ್ವರ ಕಾಣಿಸಿಕೊಂಡಿತ್ತು.