ಹುಬ್ಬಳ್ಳಿ(ಜ.30): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪೌರ ಕಾರ್ಮಿಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ರಕ್ತದಲ್ಲಿ ಪತ್ರ ಬರೆದು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. 
ಇಲ್ಲಿನ ಪ್ರಧಾನ ಅಂಚೆ ಕಚೇರಿ ಬಳಿ ಜಮೆಯಾದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕೆಲ ಕಾಲ ಧರಣಿ ನಡೆಸಿದರು. ಎನ್‌ಆರ್‌ಸಿ, ಸಿಎಎ ವಿರುದ್ಧ ಘೋಷಣೆ ಕೂಗಿದರು.

ಅಲ್ಲಿಯೇ ಸಿರಿಂಜ್‌ನಿಂದ ರಕ್ತ ತೆಗೆದು ನೋ ಎನ್‌ಆರ್‌ಸಿ, ನೋ ಸಿಎಎ, ವಿತ್‌ಡ್ರಾ ಎನ್‌ಆರ್‌ಸಿ, ಸಿಎಎ ಎಂದು ಪತ್ರದ ಮೇಲೆ ಬರೆದು ಅವುಗಳನ್ನು ಅಂಚೆ ಮೂಲಕ ಕಳುಹಿಸಿದರು. ದೇಶದ ಏಕತೆಗೆ ಧಕ್ಕೆ ತರುವಂತಹ ಈ ಕಾಯ್ದೆಯನ್ನು ಹಿಂಪಡೆಯುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಈ ಕಾರಣದಿಂದ ನಮ್ಮ ನೆತ್ತರು ಹರಿಸಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭಾರತ ದೇಶದ ಮೂಲನಿವಾಸಿಗಳೆಂದರೆ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಹಿಂದುಳಿದ ಜನಾಂಗದವರು. ಅವರನ್ನು ತೀವ್ರವಾಗಿ ಸಂಕಷ್ಟಕ್ಕೆ ತಳ್ಳಲಿರುವ ಈ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದೇಶದ ಕೋಟ್ಯಾಂತರ ಜನರು ವಿರೋಧಿಸುತ್ತಿದ್ದರೂ ಕೇಂದ್ರ ಸರ್ಕಾರ ಕಾನೂನು ಜಾರಿಗೊಳಿಸಿರುವುದು ಖಂಡನೀಯ ಎಂದ ಪ್ರತಿಭಟನಾಕಾರರು, ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕು. ರಾಷ್ಟ್ರಪತಿಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಾಕಿಸ್ತಾನ, ಬಾಂಗ್ಲಾದೇಶ, ಅಷ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಕೇಂದ್ರ ಸರ್ಕಾರ ಯಾವುದಾದರೂ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಧ್ವನಿ ಎತ್ತಲಿ, ಅಲ್ಲಿನ ದೌರ್ಜನ್ಯದ ಬಗ್ಗೆ ಅಂಕಿ ಅಂಶಗಳನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

ಧಾರವಾಡ ಜಿಲ್ಲಾ ಪೌರಕಾರ್ಮಿಕರ ಮತ್ತು ನೌಕರರ ಸಂಘ, ಸಂವಿಧಾನ ಸುರಕ್ಷಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸುಮಾರು 50ಕ್ಕೂ ಹೆಚ್ಚು ರಕ್ತದಿಂದ ಬರೆದ ಪತ್ರಗಳನ್ನು ರಾಷ್ಟ್ರಪತಿಗಳಿಗೆ ರವಾನಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ಕಾಂಗ್ರೆಸ್‌ ಮುಖಂಡರಾದ ಶಾಕೀರ ಸನದಿ, ಅನ್ವರ ಮುಧೋಳ, ಬಾಬಾಜಾನ ಮುಧೋಳ, ಅಶ್ರಫ್‌ ಅಲಿ, ಮೋಹನ ಹಿರೇಮನಿ, ಆಸೀಫ್‌ ಪಾಚಾಪೂರ, ಪಿತಾಂಬರಪ್ಪ ಬಿಳಾರ ಸೇರಿದಂತೆ ಇತರರು ಇದ್ದರು.