ಮುಂಡರಗಿ(ನ.28): ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ, ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನೆಯ ಜಂಟಿಕ್ರಿಯಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬುಧವಾರ ಬೆಳಗ್ಗೆ ಮುಂಡರಗಿ ಅಂಚೆ ಕಚೇರಿ ಎದುರು ಗದಗ-ಹರಪನಹಳ್ಳಿ ರೈಲ್ವೆ ಮಾರ್ಗಕ್ಕೆ ಒತ್ತಾಯಿಸಿ ಅಂಚೆ ಪತ್ರದ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ಭಾರತ ರೈಲ್ವೆ ಬೋರ್ಡ್‌ ಸಾರ್ವಜನಿಕರ ಸೇವಾ ಕೇಂದ್ರವಾಗಿದ್ದು, ಇದು ಲಾಭ ನಷ್ಟಕ್ಕಿಂತ ಸುಭದ್ರವಾದ ಸೇವೆ ಮಾಡಲು ಕೇಂದ್ರ ಸರ್ಕಾರ ಪ್ರತಿ ಮುಂಗಡ ಪತ್ರದಲ್ಲಿ ಹಣ ಕಾಯ್ದಿರಿಸುತ್ತದೆ. ಅದರಂತೆ ಈ ವರ್ಷದ 2020-21ರ ರೈಲ್ವೆ ಮುಂಗಡ ಪತ್ರದಲ್ಲಿಯೂ ಸಹ ಗದಗ-ಹರಪನಹಳ್ಳಿ ರೈಲ್ವೆ ಮಾರ್ಗಕ್ಕೆ 813.14 ಕೋಟಿ ಹಣ ಬಿಡುಗಡೆಗೊಳಿಸಬೇಕೆಂದು ಪ್ರತಿಭಟನಾ ಪತ್ರಗಳಲ್ಲಿ ಬರೆಯಲಾಯಿತು. ಪತ್ರದಲ್ಲಿ ಇದೇ 2019ರ ಡಿ. 27ರಂದು ಟಿಕೆಟ್‌ ರಹಿತ ಪ್ರಯಾಣ ಹಮ್ಮಿಕೊಳ್ಳಲಾಗಿದೆ. ಅಂದು ಮುಂಡರಗಿಯಿಂದ ವಾರಾಣಸಿಗೆ ತೆರಳಿ ಡಿ.30ರಂದು ಅಲ್ಲಿಯ ಗಂಗಾ ನದಿ ದಡದ ಮೇಲೆ ಗಂಗಾರತಿ ಪ್ರತಿಭಟನೆ ಮಾಡಲಾಗುವುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಂಚೆ ಪತ್ರಗಳನ್ನು ಅಂಚೆ ಕಚೇರಿ ವ್ಯವಸ್ಥಾಪಕರ ಮೂಲಕ ಕಳುಹಿಸಲಾಯಿತು. ಈ ಪ್ರತಿಭಟನೆಯಲ್ಲಿ ಯಮನಪ್ಪ ಭಜಂತ್ರಿ, ಅಂದಾನಗೌಡ ಕುಲಕರ್ಣಿ, ವಿ.ಎಸ್‌. ಘಟ್ಟಿ, ಬಸವರಾಜ ನರೆಗಲ್ಲ, ಮಂಜುನಾಥ ಕಾಗನೂರಮಠ, ಬಸಪ್ಪ ವಡ್ಡರ, ದೇವೇಂದ್ರಪ್ಪ ದೊಡ್ಡಮನಿ, ಕೃಷ್ಣ ಬಡಿಗೇರ, ಸಂಗಪ್ಪ ಕಂಬಳಿ, ಗಂಗಾಧರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.