ತುರುವೇಕೆರೆ (ಅ.11): ತಮ್ಮ ತಂದೆ ಹಾಗೂ ಅವರ ಸಹೋದರರ ನಡುವಿನ ಪಿತ್ರಾರ್ಜಿತ ಆಸ್ತಿಗಾಗಿ ನಡೆಯುತ್ತಿದ್ದ ಕಲಹ ಓರ್ವ ಯುವತಿಯನ್ನು ಬಲಿ ತೆಗೆದುಕೊಂಡಿರುವ ಘಟನೆ ಸಮೀಪದ ದಬ್ಬೇಘಟ್ಟಹೋಬಳಿಯ ಸೋಪನಹಳ್ಳಿಯಲ್ಲಿ ನಡೆದಿದೆ.

ದೇವಕಿ (17) ಮೃತ ಯುವತಿ.

ತಾಲೂಕಿನ ಸೋಪನಹಳ್ಳಿಯಲ್ಲಿ ದೇವೇಂದ್ರ ಪ್ರಸಾದ್‌ ಹಾಗೂ ಅವರ ಸಹೋದರರ ನಡುವೆ ಕಳೆದ ಐದಾರು ವರ್ಷಗಳಿಂದ ಪಿತ್ರಾರ್ಜಿತ ಆಸ್ತಿಗಾಗಿ ಜಗಳ ನಡೆಯುತ್ತಿತ್ತು. ಈ ವಿವಾದ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು. ಶುಕ್ರವಾರ ಮಧ್ಯಾಹ್ನ ದೇವೇಂದ್ರ ಪ್ರಸಾದ್‌ರ ಸಹೋದರರಾದ ತಿಮ್ಮೇಗೌಡ ಮತ್ತು ಪಂಚಾಕ್ಷರಿ ಹಾಗೂ ಇನ್ನಿತರರು ದೇವೇಂದ್ರ ಪ್ರಸಾದ್‌ ಮನೆಯಲ್ಲಿ ಇಲ್ಲದ ವೇಳೆ ಮನೆಯೊಳಗೆ ನುಗ್ಗಿ ಆಸ್ತಿ ವಿಚಾರವಾಗಿ ತಗಾದೆ ತೆಗೆದಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ದೇವೇಂದ್ರ ಪ್ರಸಾದ್‌ ತಮ್ಮ ಪತ್ನಿ ಸವಿತಾ ಮತ್ತು ಕಿರಿ ಮಗಳೊಂದಿಗೆ ಆಗಮಿಸಿ ಸ್ಥಳೀಯ ಪೋಲಿಸ್‌ ಠಾಣೆಗೆ ಮಧ್ಯಾಹ್ನ ದೂರು ನೀಡಿದ್ದಾರೆ.

2.7 ಕೋಟಿ ನಕಲಿ ಛಾಪಾ ಕಾಗದ ಹಗ​ರ​ಣ: ‘ಛೋ​ಟಾ ತೆಲ​ಗಿ’ ಸೇರಿ 4 ಮಂದಿ ಬಂಧ​ನ

ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯ ಪೋಲಿಸರು ಸೋಪನಹಳ್ಳಿಗೆ ಈರ್ವ ಪೋಲಿಸ್‌ ಪೇದೆಗಳನ್ನು ಕಳಿಸಿದ್ದರು ಎಂದು ಹೇಳಲಾಗಿದೆ. ಪೋಲಿಸರು ಅಲ್ಲಿಂದ ತೆರಳಿದ ನಂತರ ದೇವೇಂದ್ರ ಪ್ರಸಾದ್‌ ಮನೆಗೆ ಪುನಃ ನುಗ್ಗಿದ ಆರೋಪಿಗಳು ಮನೆಯಲ್ಲಿದ್ದ ದೇವೇಂದ್ರ ಪ್ರಸಾದ್‌ರ ಹಿರಿಯ ಮಗಳು ದೇವಕಿ (17)ಯ ಬಗ್ಗೆ ಬಹಳ ಲಘುವಾಗಿ ಮಾತನಾಡಿ ನಿಂದಿಸಿ, ದೈಹಿಕವಾಗಿ ಹಿಂಸಿಸಿದರು ಎಂದು ಹೇಳಲಾಗಿದೆ.

ಮಗಳು ದೇವಿಕಿ ಕೂಡಲೇ ತಮ್ಮ ತಂದೆ ದೇವೇಂದ್ರ ಪ್ರಸಾದ್‌ಗೆ ದೂರವಾಣಿ ಕರೆ ಮಾಡಿ ತಮಗೆ ದೊಡ್ಡಪ್ಪಂದಿರು ಸೇರಿದಂತೆ ಹಲವಾರು ಮಂದಿ ಬಹಳವಾಗಿ ನೋವು ಮಾಡುತ್ತಿದ್ದಾರೆ. ನನಗೆ ಹೆದರಿಕೆ ಆಗುತ್ತಿದೆ ಎಂದು ಹೇಳಿದ್ದಾಳೆ.

ಅಪ್ಪಾ ನಾನು ಸಾಯುತ್ತಿದ್ದೇನೆ

ಕರೆ ಮಾಡಿದ ಕೆಲ ನಿಮಿಷಗಳಲ್ಲೇ ಪುನಃ ಕರೆ ಮಾಡಿದ ದೇವಕಿ ಇವರ ಕಿರುಕುಳ ತಾಳಲಾಗದೆ ತಾನು ಸೀಮೆಎಣ್ಣೆ ಸುರಿದುಕೊಂಡು ಸಾಯುತ್ತಿದ್ದೇನೆ ಅಪ್ಪಾ ಎಂದು ಕೊನೆಯದಾಗಿ ದೇವಕಿ ಹೇಳಿದಳೆಂದು ಹೇಳಲಾಗಿದೆ.

ಸುಟ್ಟು ಹೋದಳು

ಮಗಳು ದೇವಕಿ ಕರೆ ಮಾಡಿ ಮಾತನಾಡಿದ ಕೆಲ ನಿಮಿಷಗಳ ತರುವಾಯ ದೇವೇಂದ್ರ ಪ್ರಸಾದ್‌ ಅವರ ಮನೆಯ ಪಕ್ಕದ ಮನೆಯವರು ದೇವಕಿ ಬೆಂಕಿ ಹಚ್ಚಿಕೊಂಡು ಸಾವಿಗೀಡಾಗಿದ್ದಾಳೆ ಎಂದು ದೇವೇಂದ್ರ ಪ್ರಸಾದ್‌ರಿಗೆ ಕರೆ ಮಾಡಿ ತಿಳಿಸಿದ್ದಾರೆ.

ಪ್ರಕರಣ ದಾಖಲು

ಯುವತಿ ದೇವಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂಬ ಆರೋಪದ ಮೇರೆಗೆ ಯುವತಿಯ ತಂದೆ ದೇವೇಂದ್ರ ಪ್ರಸಾದ್‌ ಅವರ ಸಹೋದರರಾದ ತಿಮ್ಮೇಗೌಡ, ಮಗನಾದ ಗಂಗಾಧರ, ಪಂಚಾಕ್ಷರಿ, ಹೆಂಡತಿ ಸುನಂದಾ, ಮಕ್ಕಳಾದ ರಕ್ಷಿತ್‌, ಭಾರ್ಗವಿ, ದೊಡ್ಡಮ್ಮ ಸುಧಾರಾಣಿ ಮತ್ತು ಆಕೆಯ ಪುತ್ರ ಸಾಗರ್‌ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎಂದು ಪೋಲಿಸ್‌ ಮೂಲಗಳು ತಿಳಿಸಿವೆ.

ಆರೋಪಿ ಪಂಚಾಕ್ಷರಿ ಬೆಂಗಳೂರಿನ ಪೋಲಿಸ್‌ ಠಾಣೆಯಲ್ಲಿ ಪೋಲಿಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ಹೇಳಲಾಗಿದೆ.

ಸ್ಥಳಕ್ಕೆ ಅಡಿಷನಲ್‌ ಎಸ್ಪಿ ಉದೇಶ್‌, ಡಿವೈಎಸ್ಪಿ ಜಗದೀಶ್‌, ಸಿಪಿಐ ಸಿ.ಪಿ.ನವೀನ್‌ ಎಸೈ ಪ್ರೀತಮ್‌ ಭೇಟಿ ನೀಡಿದ್ದರು. ತುರುವೇಕೆರೆಯ ಪಟ್ಟಣ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.