ಬೆಂಗಳೂರು(ಫೆ.18): ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯದೊಂದಿಗೆ ಉಪಗ್ರಹ ಆಧಾರಿತ ಶಿಕ್ಷಣ ನೀಡುವ ಮೂಲಕ ಐದು ವರ್ಷದಲ್ಲಿ ಬಿಬಿಎಂಪಿಯ ಶಾಲಾ- ಕಾಲೇಜುಗಳನ್ನು ಹೈಟೆಕ್‌ಗೊಳಿಸಿ ವಿಶ್ವದರ್ಜೆಗೇರಿಸುವ ಉದ್ದೇಶದಿಂದ ಆರಂಭಿಸಲಾದ ‘ರೋಶನಿ ಯೋಜನೆ’ ಬಹುತೇಕ ಸ್ಥಗಿತವಾಗುವ ಹಂತಕ್ಕೆ ಬಂದಿದೆ.

ಬಿಬಿಎಂಪಿ 2018ರಲ್ಲಿ ‘ಮೈಕ್ರೋ ಸಾಫ್ಟ್‌ ಮತ್ತು ಟೆಕ್‌ ಅವಂತ್‌-ಗಾರ್ಡ್‌’ ಎಂಬ ಖಾಸಗಿ ಸಂಸ್ಥೆ ಸಹಯೋಗದಲ್ಲಿ ಬಿಬಿಎಂಪಿಯ ಎಲ್ಲ ಶಾಲಾ- ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವ ಉದ್ದೇಶದಿಂದ ಮಹತ್ವಾಕಾಂಕ್ಷಿ ‘ರೋಶನಿ ಯೋಜನೆ’ ಅದ್ಧೂರಿಯಾಗಿ ಆರಂಭಿಸಿತ್ತು. ಆದರೆ, ಪ್ರಾರಂಭಗೊಂಡ ದಿನದಿಂದಲ್ಲೂ ‘ಮೈಕ್ರೋ ಸಾಫ್ಟ್‌ ಮತ್ತು ಟೆಕ್‌ ಅವಂತ್‌-ಗಾರ್ಡ್‌’ ಸಂಸ್ಥೆ ಹಾಗೂ ಬಿಬಿಎಂಪಿ ಸಮನ್ವಯತೆ ಕೊರತೆಯಿಂದ ಇದೀಗ ಯೋಜನೆ ಸಂಪೂರ್ಣವಾಗಿ ನೆಲಕಚ್ಚುವ ಹಂತಕ್ಕೆ ಬಂದು ನಿಂತಿದೆ.

ಅತ್ತಿಗುಪ್ಪೆಯಲ್ಲಿ ವರನಟ ರಾಜ್‌ಕುಮಾರ್ ಪ್ರತಿಮೆ ಅನಾವರಣ

ಇನ್ನು ‘ಮೈಕ್ರೋ ಸಾಫ್ಟ್‌ ಮತ್ತು ಟೆಕ್‌ ಅವಂತ್‌-ಗಾರ್ಡ್‌’ ಸಂಸ್ಥೆ, ಕ್ಲೀವ್‌ ಲ್ಯಾಂಡ್‌ ಟೌನ್‌ ಶಾಲೆಯಲ್ಲಿ ನಾಲ್ಕು ಕುರ್ಚಿ ಟೇಬಲ್‌ ಹಾಗೂ ಒಂದು ಎಲ್‌ಇಡಿ ಟಿವಿ, ಗ್ರೀನ್‌ ಬೋರ್ಡ್‌ ಅಳವಡಿಸಿದ್ದು ಬಿಟ್ಟರೆ, ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಹಣ ವಿನಿಯೋಗಿಸಿಲ್ಲ. ಆದರೆ, 2018-19ನೇ ಸಾಲಿನಲ್ಲಿ ಯೋಜನೆಗೆ .17 ಕೋಟಿ ವೆಚ್ಚ ಮಾಡಿರುವುದಾಗಿ ಹೇಳಿಕೊಂಡಿದೆ. ಈ ಹಿನ್ನೆಲೆಯಲ್ಲಿ ಯೋಜನೆಗೆ ಈವರೆಗೆ ಏನೆಲ್ಲ ವೆಚ್ಚ ಮಾಡಲಾಗಿದೆ. ಬಿಬಿಎಂಪಿ ಯಾವ ಶಾಲೆಯಲ್ಲಿ ಏನು ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂಬುದರ ಮಾಹಿತಿ ಕೇಳಿದರೂ ‘ಮೈಕ್ರೋ ಸಾಫ್ಟ್‌ ಮತ್ತು ಟೆಕ್‌ ಅವಂತ್‌-ಗಾರ್ಡ್‌’ ಸಂಸ್ಥೆ ಕೊಟ್ಟಿಲ್ಲ ಹಾಗೂ ಯೋಜನೆ ಮುಂದುವರಿಸುವ ಆಸಕ್ತಿಯೂ ಈ ಸಂಸ್ಥೆ ತೋರಿಸುತ್ತಿಲ್ಲ. ಹೀಗಾಗಿ, ಅನಿವಾರ್ಯವಾಗಿ ಯೋಜನೆ ಕೈಬಿಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಬಿಬಿಎಂಪಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ರೋಶನಿ ಬೋರ್ಡ್‌ ಕಿತ್ತೆಸೆದ ಶಾಲೆ:

2018ರಲ್ಲಿ ರೋಶನಿ ಯೋಜನೆಯನ್ನು ಸಾಂಕೇತಿಕವಾಗಿ ಕ್ಲೀವ್‌ ಲ್ಯಾಂಡ್‌ ಟೌನ್‌ ಬಿಬಿಎಂಪಿ ಶಾಲೆಯ ಒಂದು ಕೊಠಡಿಯಲ್ಲಿ ಆರಂಭಿಸಲಾಗಿತ್ತು. ಆದರೆ, ರೋಶನಿ ಹೆಸರಿನಲ್ಲಿ ದೊಡ್ಡ ಮಟ್ಟದ ಪ್ರಚಾರ ಪಡೆದುಕೊಂಡಿದ್ದು ಬಿಟ್ಟರೆ ಶಾಲೆಗೆ ಹಾಗೂ ವಿದ್ಯಾರ್ಥಿಗಳಿಗೆ ಯೋಜನೆಯಿಂದ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಶಾಲಾ ಕಟ್ಟಡಕ್ಕೆ ಹಾಕಲಾಗಿದ್ದ ರೋಶನಿ ಯೋಜನೆಯ ಬೋರ್ಡ್‌ ತೆಗೆಯಲಾಗಿದೆ.

ತನಿಖೆ ನಡೆಸದ ಪಾಲಿಕೆ ಅಧಿಕಾರಿಗಳು

ಮೈಕ್ರೋ ಸಾಫ್ಟ್‌ ಮತ್ತು ಟೆಕ್‌ ಅವಂತ-ಗಾರ್ಡ್‌ ಸಂಸ್ಥೆ ರೋಶನಿ ಯೋಜನೆಯಡಿ ಬಿಬಿಎಂಪಿ ಶಿಕ್ಷಕರ ತರಬೇತಿ, ಶಿಕ್ಷಕರ ಆಡಿಟ್‌ ಸರ್ವೇ, ಯೋಜನೆಗೆ ಸಿಬ್ಬಂದಿ ವೇತನ, ಆರೋಗ್ಯ ಶಿಬಿರ, 16.29 ಕೋಟಿ ಮೊತ್ತದ 154 ಮೈಕ್ರೋಸಾಫ್ಟ್‌ ಕಿಟ್‌, ಮಾಹಿತಿ ತಂತ್ರಜ್ಞಾನ ಅಳವಡಿಕೆ ಕುರಿತು ಸರ್ವೇ ಸೇರಿದಂತೆ ಇನ್ನಿತರ ಹೆಸರಿನಲ್ಲಿ ಒಟ್ಟು .17.86 ಕೋಟಿ ವೆಚ್ಚ ಮಾಡಿರುವುದಾಗಿ ಲೆಕ್ಕ ಕೊಟ್ಟಿತ್ತು. ಆದರೆ, ಬಿಬಿಎಂಪಿ ಅಧಿಕಾರಿಗಳು ಇಷ್ಟೊಂದು ವೆಚ್ಚ ಮಾಡಿರುವ ಬಗ್ಗೆ ಬಿಬಿಎಂಪಿಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿತ್ತು.

Fact Check: 62 ಆಪ್‌ ಶಾಸಕರಲ್ಲಿ 40 ಮಂದಿ ರೇಪ್‌ ಆರೋಪಿಗಳು!

ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಉನ್ನತ ದರ್ಜೆಯ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭಿಸಲಾದ ರೋಶನಿ ಯೋಜನೆ ಅನುಷ್ಠಾನಕ್ಕೆ ಮೈಕ್ರೋ ಸಾಫ್ಟ್‌ ಮತ್ತು ಟೆಕ್‌ ಅವಂತ್‌-ಗಾರ್ಡ್‌ ಸಂಸ್ಥೆ ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎಂದು ಬಿಬಿಎಂಪಿ ಆಯುಕ್ತರು ಬಿ.ಎಚ್‌.ಅನಿಲ್‌ಕುಮಾರ್‌ ಹೇಳಿದ್ದಾರೆ.

-ವಿಶ್ವನಾಥ ಮಲೇಬೆನ್ನೂರು